ಬೆಳಗಾವಿ(ಡಿ.05): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬ ತಲೆ ಇಲ್ಲದ ರಾಜಕಾರಣಿ. ಮಾಜಿ ಮುಖ್ಯಮಂತ್ರಿ. ಬೆಳಗ್ಗೆ ಒಂದು, ಸಂಜೆ ಒಂದು ಏನ್‌ ಬೇಕಾದ್ರೂ ಮಾತನಾಡುತ್ತಾರೆ. ಸಿದ್ದರಾಮಯ್ಯನ ಮಾತಿಗೆ ಯಾವುದಕ್ಕೂ ಬೆಲೆ ಕೊಡುವುದಿಲ್ಲ. ಪವಿತ್ರವಾದ ಬೆಳಗಾವಿಯಲ್ಲಿ ಯಕಶ್ಚಿತ ರಾಜಕಾರಣಿ ಸಿದ್ದರಾಮಯ್ಯನ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರಾ? ಸಚಿವರು ಹೇಳಿದ್ದಾರಾ ? ಒಬ್ಬ ಎಂಪಿ ಹೇಳಿದ್ದಾರಾ? ಎಲ್ಲಾ ಊಹಾಪೋಹ. ಸಿದ್ದರಾಮಯ್ಯನ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಅವರಿಗೂ ಬಿಜೆಪಿ ಸಿಎಂಗೂ ಏನ್‌ ಸಂಬಂಧ? ಮುಖ್ಯಮಂತ್ರಿ ಸ್ಥಾನ, ಚಾಮುಂಡೇಶ್ವರಿಯಲ್ಲಿ ಇಂಥ ತಲೆ ಹಿಡುಕ ಮಾತಿನಿಂದಲೇ ಕಳೆದುಕೊಂಡಿದ್ದು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಏಕವಚನದಲ್ಲೇ ಮಾತಾಡುವೆ:

ತಲೆಹರಟೆ ಮಾತನಾಡಿಯೇ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡಿದ್ದು. ಚಾಮುಂಡೇಶ್ವರಿ ಕ್ಷೇತ್ರವನ್ನು ಈ ರೀತಿ ತಲೆಹರಟೆ ಮಾತಿನಿಂದ ಸೋಲು ಕಂಡಿದ್ದ ಸಿದ್ದರಾಮಯ್ಯಗೆ ಕಾಂಗ್ರೆಸ್‌ ಪಕ್ಷದಲ್ಲೇ ಬೆಲೆ ಇಲ್ಲ. ನಾವ್ಯಾಕೆ ಕೊಡೋಣ. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅವನನ್ನೇ ಕೇಳಿ. ಅವನೇ ಮೋದಿ, ಬಿಎಸ್‌ವೈ, ನಳಿನ್‌ಕುಮಾರ ಬಗ್ಗೆ ಏಕವಚನದಲ್ಲಿ ಮಾತನಾಡ್ತಾನೆ. ಏಕವಚನದಲ್ಲಿ ಮಾತನಾಡೋ ಸಿದ್ದರಾಮಯ್ಯಗೆ ನಾನು ಏಕವಚನದಲ್ಲೇ ಹೇಳ್ತೀನಿ. ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನಿಗೆ ಅವನ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ನಾನು ಅವನಿಗೆ ಏಕ ವಚನದಲ್ಲಿಯೇ ಹೇಳುತ್ತೇನೆ. ಅವನಿಗೆ ಕೇಳಿ ಎಂದು ಖಾರವಾಗಿ ಉತ್ತರಿಸಿದರು. ಬಿಜೆಪಿ ಕೋರ್‌ ಕಮಿಟಿಯಲ್ಲಿ ಕಾರ್ಯಕಾರಿಣಿ ಸಮಿತಿಯ ರಾಜ್ಯ ಅಧ್ಯಕ್ಷರು ಯಾವ ಅಜೆಂಡಾ ತರುತ್ತಾರೆ ಆ ವಿಷಯದ ಮೇಲೆ ಚರ್ಚೆ ನಡೆಯುತ್ತದೆ. ವಿಶೇಷವಾಗಿ ಏನು ಇಲ್ಲ ಎಂದು ತಿಳಿಸಿದರು.

'ಉಪಚುನಾವಣೆ ಕಾರ್ಯತಂತ್ರ ಬಹಿರಂಗಪಡಿಸಿದ್ರೆ ವಿಪಕ್ಷದವರು ಎಚ್ಚೆತ್ತುಕೊಳ್ಳುತ್ತಾರೆ'

ಭಾನುವಾರವೇ ವಿಸ್ತರಣೆ ಆಗಬಹುದು:

ಸಚಿವ ಸಂಪುಟ ವಿಸ್ತರಣೆ ಹಾಗೂ ಬೆಳಗಾವಿ ಲೋಕಸಭೆಯ ಉಪಚುನಾವಣೆ, ಮಸ್ಕಿ, ಬಸವ ಕಲ್ಯಾಣ ಸೇರಿದಂತೆ ಚುನಾವಣೆಯ ಕುರಿತಾಗಿ ಯಾವ ಅಭ್ಯರ್ಥಿಯ ಘೋಷಣೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಭಾನುವಾರವೇ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಅದು ನನಗೆ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಮುಸ್ಲಿಂ ಗೂಂಡಾಗಳ ಕೃತ್ಯ:

ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಮಾಡಿದ ದುಷ್ಕೃತ್ಯವನ್ನು ಬಿಜೆಪಿ ಸರ್ಕಾರ ಯಾವ ಕಾರಣಕ್ಕೂ ಒಪ್ಪಲ್ಲ. ಬಜರಂಗದಳದ ಕಾರ್ಯಕರ್ತ ಗೋ ಕಳ್ಳತನ ಸಾಗಾಟವನ್ನು ತಡೆಯುತ್ತಿದ್ದ. ಗೋ ಹತ್ಯೆಯನ್ನು ಖಂಡನೆ ಮಾಡಬೇಕು ಎಂದು ನಮ್ಮನ್ನು ಮನವಿ ಮಾಡಿಕೊಂಡಿದ್ದರು. ನಾಲ್ಕು ಜನ ಗೂಂಡಾಗಳು ಮುಖಕ್ಕೆ ಬಟ್ಟೆಕಟ್ಟಿಕೊಂಡು ಹಲ್ಲೆ ಮಾಡಿದ್ದು ಖಂಡನೀಯ. ಇದನ್ನು ಮಟ್ಟಹಾಕುತ್ತೇವೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ:

ಭಾನುವಾರ ಸಂಪುಟ ವಿಸ್ತರಣೆ ಆಗಬಹುದು, ಗೊತ್ತಿಲ್ಲ ನನಗೆ. ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಐತಿಹಾಸಿಕ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. 5808 ಗ್ರಾಪಂ ಚುನಾವಣೆಯಲ್ಲಿ ಕನಿಷ್ಠ ಶೇ.80ರಷ್ಟುಬಿಜೆಪಿ ಗೆಲುವು ಸಾಧಿಸಲು ಬೆಳಗಾವಿಯಿಂದ ಸ್ಫೂರ್ತಿ ತೆಗೆದುಕೊಂಡು ಹೋಗುತ್ತೇವೆ. ನಮ್ಮ ಪಕ್ಷದ ರಾಷ್ಟ್ರೀಯ ಉಸ್ತುವಾರಿ, ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಸಂಘಟನೆ ಗಟ್ಟಿಮಾಡುವ ನಿಟ್ಟಿನಲ್ಲಿ ಪ್ರೇರಣಾದಾಯಕ ಸಭೆ ಇದಾಗಿದೆ. ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ ನೀಡಿದ ಯೋಜನೆ ಗ್ರಾಮೀಣ ಪ್ರದೇಶಗಳಿಗೆ ಮುಟ್ಟಿಸುವ ಕೆಲಸ, ನಮ್ಮ ಪಕ್ಷ ಶಕ್ತಿಶಾಲಿಯನ್ನಾಗಿ ಮೂಡಿಸಲು ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದರು.