ಹಾಸನ (ಸೆ.06):  ಡ್ರಗ್ಸ್‌ ದಂಧೆಯಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅವರ ರಕ್ಷಣೆಗೆ ಯಾವ ಸಚಿವರು ನಿಂತಿಲ್ಲ ಎಂದು ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾಧಿ​ಕಾರಿ ಕಚೇರಿ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ರಾಗಿಣಿ ಸೇರಿದಂತೆ ಇತರ ನಟ-ನಟಿಯರು ಡ್ರಗ್ಸ್‌ ದಂಧೆಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲು ಕೆಲವು ಸಚಿವರು ಮುಂದಾಗಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಸಚಿವರು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಈಗಾಗಲೇ ಆದೇಶಿಸಿದೆ. ಮುಖ್ಯಮಂತ್ರಿ, ಗೃಹ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ಕ್ರಮ ನಿಶ್ಚಿತ ಎಂದರು.

ರಾಗಿಣಿಯಲ್ಲ, ಡ್ರಗ್ಗಿಣಿ! ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದು ಹೇಗೆ?

ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಯಾವ ಪ್ರಕರಣಗಳಿಗೂ ರಾಜಕೀಯ ಬೆರೆಸುವುದು ಬೇಡ. ಇಲ್ಲಿನ ಪೊಲೀಸ್‌ ಅಧಿ​ಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಧೈರ್ಯ ಮೆಚ್ಚಬೇಕು. ಇನ್ನು ಹೆಚ್ಚಿನ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಹೇಳಿದರು.

ಕೊರೋನಾ ಬಂದ ರೋಗಿಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರು.ಗಳ ಬಿಲ್‌ವಸೂಲಿ ಮಾಡಲಾಗುತ್ತಿದೆ. ಯಾವ ಖಾಸಗಿ ಆಸ್ಪತ್ರೆಗಳು ಹಣವನ್ನು ಹೆಚ್ಚು ಪಡೆದಿದ್ದಾರೆ ಅವರಿಗೆ ಈಗಾಗಲೇ ಜಿಲ್ಲಾ​ಧಿಕಾರಿಗಳು ನೋಟಿಸನ್ನು ಜಾರಿ ಮಾಡಿದ್ದು, ಈ ರೀತಿ ಹಣ ವಸೂಲಿ ಮಾಡುವ ಆಸ್ಪತ್ರೆ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇದೇ ವೇಳೆ ಶಾಸಕ ಪ್ರೀತಮ್‌ ಜೆ. ಗೌಡ ಇದ್ದರು.