ಬಾಗಲಕೋಟೆ(ಫೆ.29): ಬಡತನದಲ್ಲಿ ಹುಟ್ಟಿ ಹೊಟ್ಟೆ, ಬಟ್ಟೆಗಾಗಿ ಮಹಾರಾಷ್ಟ್ರಕ್ಕೆ ಹೋದವನಾದ ನನಗೆ ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ. ಆದರೆ, ನನ್ನ ರಕ್ತದಲ್ಲಿಯೇ ಕರ್ನಾಟಕ, ಕನ್ನಡ ಎನ್ನುವುದು ಇದೆ ಎಂದು ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ವಿಷಯದಲ್ಲಿ ಕೆಲವು ಕಿಡಿಗೇಡಿಗಳು ಮಹಾರಾಷ್ಟ್ರದ ವಿಷಯವನ್ನು ಮಾತ್ರ ವಿಡಿಯೋ ಮಾಡಿ ರಾಜಕಾರಣ ಉಪಯೋಗ ಮಾಡಿ ತೋರಿಸಿದ್ದಾರೆ. ನಾನು ಎಲ್ಲರನ್ನು ಹೊಗಳಿ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದೊಂದು ಸಾಂಸ್ಕೃತಿಕ ಕಾರ್ಯಕ್ರಮ ಆಗಿದ್ದರಿಂದ ಕೋಲ್ಕತಾ, ಕೇರಳ, ರಾಜಸ್ಥಾನ ಸೇರಿದಂತೆ 17 ರಾಜ್ಯಗಳಿಂದ ಪ್ರತಿನಿಧಿ​ಗಳು ಎಲ್ಲ ಕಡೆಯಿಂದಲೂ ಬಂದಿದ್ದರು. ಎಲ್ಲರನ್ನು ಹೊಗಳಿ ಮಾತನಾಡಿದ್ದೇನೆ. ನಾನೂ ಸೇರಿದಂತೆ ಮುಂಬೈನಲ್ಲಿ 27 ಜನ ಕನ್ನಡಿಗರಿದ್ದೇವೆ. ಮಹಾರಾಷ್ಟ್ರದಲ್ಲಿ ನನ್ನ ಉದ್ಯೋಗ ಇದೆ. ಆ ಕಾರಣಕ್ಕೆ ಮಹಾರಾಷ್ಟ್ರವನ್ನು ಹೊಗಳಿ ಮಾತನಾಡಿದ್ದೇನೆ ಎನ್ನುವುದು ತಪ್ಪು ಎಂದರು.

ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ಹುದ್ದೆ ಕಳೆದ 18 ತಿಂಗಳಿಂದ ಖಾಲಿ ಇರುವ ವಿಷಯ ಈಗ ತಿಳಿದಿದೆ. ಇಲಾಖೆಯ ಚಾರ್ಜ್ ತೆಗೆದುಕೊಂಡು ಒಂದು ವಾರವಷ್ಟೇ ಆಗಿದೆ. ಈ ವಿಷಯದ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಈ ಸ್ಥಾನಕ್ಕೆ ಯಾರು ಉತ್ತಮ ವ್ಯಕ್ತಿ ಎಂಬುದನ್ನು ತಿಳಿದು ಆಯ್ಕೆ ಮಾಡುತ್ತೇವೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.