ಉಡುಪಿ, [ಜ.26]: ಶುಕ್ರವಾರದಂದು ಬಾರ್ಕೂರಿನಲ್ಲಿ ಅಳುಪೋತ್ಸವವನ್ನು ಉದ್ಘಾಟಿಸಲು ಬಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲ ಅವರು ಮಾರ್ಗ ಮಧ್ಯೆಯೇ ಗದ್ದೆಯೊಂದರಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ನೋಡಿ ಆನಂದಪಟ್ಟರು.

 ಆಳುಪೋತ್ಸವದ ಉದ್ಘಾಟನೆಯ ನಂತರ ಕೆಲವಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಸಚಿವೆ, ರಾತ್ರಿ ಸುಮಾರು 10 ಘಂಟೆಗೆ ಅಲ್ಲಿಂದ ಹೊರಟಿದ್ದರು.ಬಾರ್ಕೂರಿನಿಂದ ಬ್ರಹ್ಮಾವರಕ್ಕೆ ಸಾಗುವಾಗ ರಸ್ತೆ ಬದಿಯ ಗದ್ದೆಯಲ್ಲಿ ಯಕ್ಷಗಾನ ನಡೆಯುತ್ತಿರುವುದು ನೋಡಿದ ತಕ್ಷಣ ಸಚಿವರು, ಆಟ ನಡತೊಂದು ಉಂಡು, ಒಂಚೂರು ತೂದ್ ಪೋಯಿ (ಯಕ್ಷಗಾನ ನಡೆಯುತ್ತಿದೆ, ಒಂಚೂರು ನೋಡಿ ಹೋಗುವ) ಎಂದು ತನ್ನ ಕಾರನ್ನು ನಿಲ್ಲಿಸಿ ಗದ್ದೆಗಿಳಿದರು.

ಗದ್ದೆಯಲ್ಲಿ ಹಾಕಲಾಗಿದ್ದ ರಂಗಮಂಟಪದಲ್ಲಿ ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ  ಯಕ್ಷಗಾನ ನಡೆಯುತ್ತಿತ್ತು. ಅಚಾನಕ್ಕಾಗಿ  ಜಯಮಾಲ ಬಂದಿರುವುದನ್ನು ಯಕ್ಷಗಾನ ನೋಡುತ್ತಿದ್ದ ಗ್ರಾಮಸ್ಥರಿಗೆ ಇನ್ನಿಲ್ಲದ ಖುಷಿಯಾಯಿತು.

ಸಚಿವೆ ತಾನು ಕೂಡ ಗ್ರಾಮಸ್ಥರ ಜೊತೆಗೆ ಕುಳಿತು ಸುಮಾರು ಒಂದೂವರೆ ತಾಸು ಯಕ್ಷಗಾನ ವೀಕ್ಷಿಸಿದರು.ನಂತರ ಹೊರಡಲನುವಾದಾಗ ಸಂಘಟಕರು, ಕಲಾವಿದರು ಸಚಿವರನ್ನು ವೇದಿಕೆಗೆ ಆಹ್ವಾನಿಸಿ ಅಭಿನಂದಿಸಿದರು.  

ಈ ಸಂದರ್ಭದಲ್ಲಿ ಸಚಿವೆ ಡಾ.ಜಯಮಾಲ ಅವರು ಮಾತನಾಡಿ, ದಕ ಜಿಲ್ಲೆಯವಳಾದ ತಾನು ಬಾಲ್ಯದಲ್ಲಿ ಪೋಷಕರ ಜೊತೆಗೆ ನೆಲದಲ್ಲಿ ಕುಳಿತು ಯಕ್ಷಗಾನ ನೋಡುತ್ತಿದ್ದ ನೆನಪನ್ನು ಮೆಲುಕು ಹಾಕಿದರು.