ಮಳೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ಸಚಿವೆ ಜಯಮಾಲ
ಎಲ್ಲಿ ನೋಡಿದರೂ ಮಳೆಯದ್ದೇ ಆರ್ಭಟ. ಅತ್ತ ಕೇರಳದಲ್ಲಿ ವರುಣ ಎಡಬಿಡದೇ ಸುರಿಯುತ್ತಿದ್ದು, ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾನೆ. ಇತ್ತ ಕೊಡಗಿನಲ್ಲಿಯೂ ಪರಿಸ್ಥಿತಿ ಏನೂ ವಿಭಿನ್ನವಾಗಿಲ್ಲ. ಉಡುಪಿ-ಮಂಗಳೂರಲ್ಲೂ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಉಡುಪಿ: ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಚಿಕ್ಕಮಗಳೂರು-ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಮಳೆಹಾನಿ ಪ್ರದೇಶವನ್ನು ಪರಿಶೀಲಿಸಿದ ಸಚಿವೆ, ಪರಿಹಾರಕ್ಕೆ ಹೆಚ್ಚುವರಿ 40 ಕೋಟಿ ರೂ. ಬೇಡಿಕೆ ಸಲ್ಲಿಸಿದ್ದಾರೆ. ಮಳೆಯಿಂದ ಹಾನಿಗೆ ಒಳಗಾದ ಪ್ರದೇಶದ ಜನರ ಜೊತೆ ಮಾತನಾಡಿ, ಅವರಿಗೆ ಸಾಂತ್ವನ ಹೇಳಿದರು. ಮನೆ ಬಾಗಿಲಿಗೇ ಜನರ ಸಂಕಷ್ಟ ಆಲಿಸಿದರು.
ಈ ಸಂದರ್ಭದಲ್ಲಿ ಡಾ. ಜಯಮಾಲ, ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೆ ಒಳಗಾಗಿರುವ ರಸ್ತೆ, ಸೇತುವೆ, ಕಾಲು ಸಂಕ, ಸರ್ಕಾರಿ ಕಟ್ಟಡಗಳ ದುರಸ್ತಿ ಇತ್ಯಾದಿಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 40 ಕೋಟಿ ರು. ಅನುದಾನ ಕೇಳಲಾಗಿದೆ. ಈಗಾಗಲೇ ಜಿಲ್ಲೆಗೆ ಪ್ರಕೃತಿ ವಿಕೋಪ ಪರಿಹಾರಕ್ಕೆ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಎಂದಿದ್ದಾರೆ.
ಮಳೆಯಿಂದ ಮೃತಪಟ್ಟ 7 ಮಂದಿ ಕುಟುಂಬಕ್ಕೆ ತಲಾ 5 ಲಕ್ಷ ರೂ.ನಂತೆ 35 ಲಕ್ಷ ರೂ., ಜಾನುವಾರುಗಳನ್ನು ಕಳೆದುಕೊಂಡ 9 ಕುಟುಂಬಗಳಿಗೆ 1.79 ಲಕ್ಷ ರೂ., ಹಾನಿಗೊಂಡ 721 ಮನೆಗಳಿಗೆ 1.66 ಕೋಟಿ ರೂ., ಕೃಷಿ-ತೋಟಗಾರಿಕಾ ಹಾನಿಗೆ 7.64 ಲಕ್ಷ ರೂ. ಸೇರಿ 2.15 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.