ಹುಬ್ಬಳ್ಳಿ(ಫೆ.14): ತಮ್ಮ ನಾಯಕತ್ವಕ್ಕೆ ಎದುರಾಗಿರುವ ಸಂಕಷ್ಟ, ಅಭದ್ರತೆ ಕಾರಣದಿಂದ ಪಾರಾಗಲು ಸಿದ್ದರಾಮಯ್ಯ ಕುರುಬ ಸಮಾಜದ ಮೀಸಲು ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎನ್ನುತ್ತ ಮುಜುಗರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಜಗದೀಶ ಶೆಟ್ಟರ್‌ ದೂರಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಕುರುಬ ಸಮುದಾಯದ ನಾಯಕ ಎಂದು ಬಿಂಬಿಸಿಕೊಂಡಿದ್ದ ಅವರಿಗೆ ಲಕ್ಷಾಂತರ ಜನ ಸೇರಿದ್ದ ಸಮಾವೇಶಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದರು.

ಕುರುಬ ಸಮಾಜದ ಸ್ವಾಮೀಜಿಗಳು ಲಕ್ಷಾಂತರ ಜನ ಸೇರುವ ಸಮಾವೇಶಕ್ಕೆ ಆಹ್ವಾನ ನೀಡಿದರೂ ಸಿದ್ದರಾಮಯ್ಯ ಹೋಗಲಿಲ್ಲ. ಇದರಿಂದಾಗಿ ಮುಜುಗರ ತಪ್ಪಿಸಿಕೊಳ್ಳಲು ಆರ್‌ಎಸ್‌ಎಸ್‌ ಹೆಸರು ಹೇಳುತ್ತಿದ್ದಾರೆ. ಆರ್‌ಎಸ್‌ಎಸ್‌ ಪಾತ್ರವಿದೆ ಎನ್ನುವುದನ್ನು ಪಾದಯಾತ್ರೆ ಆರಂಭಕ್ಕಿಂತ ಮೊದಲೇ ಯಾಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು.

ಪ್ರಯಾಣಿಕರ ಗಮನಕ್ಕೆ: ಸದ್ಯದಲ್ಲೇ ಬಸ್‌ ಪ್ರಯಾಣ ದರ ಏರಿಕೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲದಕ್ಕೂ ಆರ್‌ಎಸ್‌ಎಸ್‌ ಅನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಇದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿಯಾಗಿ ಅನುಭವ ಉಳ್ಳವರು, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಈ ರೀತಿಯ ಅಪಪ್ರಚಾರ ಮಾಡಬಾರದು. ಸಿದ್ದರಾಮಯ್ಯ ಅವರ ಅಹಿಂದ ಹೋರಾಟ ಅವರಿಗೆ ಹಾಗೂ ಕಾಂಗ್ರೆಸ್‌ಗೆ ಬಿಟ್ಟ ವಿಚಾರ ಅದರ ಬಗ್ಗೆ ಮಾತನಾಡಲ್ಲ ಎಂದರು.

ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಗಳ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್‌, ಮೀಸಲಾತಿ ಹೋರಾಟ ಇಂದು, ನಿನ್ನೆಯದ್ದಲ್ಲ. ಆಯಾ ಸಮಾಜದ ಸ್ವಾಮೀಜಿಗಳು ಹಾಗೂ ಹಿರಿಯರು ಇದಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಶೀಘ್ರದಲ್ಲಿ ಮುಖ್ಯಮಂತ್ರಿ ಈ ಕುರಿತು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. ಏಮ್ಸ್‌ ಎಲ್ಲಿ ಸ್ಥಾಪಿಸಬೇಕು ಎನ್ನುವುದು ಮುಖ್ಯವಲ್ಲ, ಕರ್ನಾಟಕಕ್ಕೆ ಬರಲಿ ಎನ್ನುವುದು ಮುಖ್ಯ. ಯಾವ ಸ್ಥಳದಲ್ಲಿ ನಿರ್ಮಾಣವಾಗಲಿದೆ ಎಂಬ ಬಗ್ಗೆ ತೀರ್ಮಾನವಾಗಿಲ್ಲ. ಈ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದರು.