ಧಾರವಾಡ(ಡಿ.29): ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಬಂದ ಮೇಲೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಎಲ್ಲರೂ ಗಡಿ ವಿಚಾರವನ್ನು ಮರೆತಿದ್ದರು. ಆದರೀಗ ಶಿವಸೇನೆ ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಶಿವಸೇನೆ ವಿರುದ್ಧ ಕಿಡಿಕಾರಿದ್ದಾರೆ. 

ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಶನಿವಾರ ಆಯೋಜಿಸಿದ್ದ ನರೇಂದ್ರ ವಸತಿ ಬಡಾವಣೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾಧ್ಯಮದರೊಂದಿಗೆ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗಾವಿ ಸುತ್ತಮುತ್ತಲಿನ ಕನ್ನಡಿಗರು ಮತ್ತು ಮರಾಠಿಗರು ಅಣ್ಣತಮ್ಮಂದಿರ ಹಾಗೆ ಇದ್ದಾರೆ. ಬೆಳಗಾವಿ ಕರ್ನಾಟಕದ ಅಂಗವಾಗಿದ್ದು, ಈಗಾಗಲೇ ಬೆಳಗಾವಿಯಲ್ಲಿ ಸುವರ್ಣಸೌಧ ಕಾರ್ಯನಿರ್ವಹಿಸುತ್ತಿದೆ. ಸದ್ಯ ಬೆಳಗಾವಿಯಲ್ಲಿರುವ ನಾಗರಿಕರಿಗೆ ಕನ್ನಡಿಗರು ಎಂಬ ಭಾವನೆ ಮೂಡುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಸೇನೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಭಿನ್ನಾಭಿಪ್ರಾಯ ಉಂಟು ಮಾಡುತ್ತಿದೆ ಎಂದು ದೂರಿದರು.
ಶಿವಸೇನೆ ಠಾಕ್ರೆ ಗಡಿ ವಿಚಾರವನ್ನು ಬದಿಗೆ ಇಟ್ಟು, ಸರಿಯಾದ ಆಡಳಿತ ಮಾಡಿಕೊಂಡು ಹೋಗಬೇಕು. ಅದನ್ನು ಬಿಟ್ಟು ಪ್ರಚೋದನೆ ಮಾಡಿ ಭಾಷಾ ಸಮಸ್ಯೆ ತರಬಾರದು. ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್‌ ಬೆಂಬಲ ನೀಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್‌ನವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದರು.

ಮಹದಾಯಿ ವಿವಾದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸೌಹಾರ್ದ ರೀತಿಯಲ್ಲಿ ಬಗೆಹರಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಅದರ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್‌ ಬೆಳಗ್ಗೆಯಿಂದ ಸಂಜೆ ವರೆಗೆ ಬರೀ ರಾಜಕಾರಣ ಮಾಡುತ್ತಿದೆ. ಗೋವಾದಲ್ಲಿ ಒಂದು ತರಹದ ಪ್ರತಿಭಟನೆ ಮಾಡಿ ಬೆಂಕಿ ಹಚ್ಚು ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌, ಬಿಜೆಪಿ ಎರಡು ಸೇರಿದರೆ ಮಹದಾಯಿ ಪ್ರಕರಣ ಐದು ನಿಮಿಷದಲ್ಲಿ ಇತ್ಯರ್ಥವಾಗುತ್ತದೆ. ಕಾಂಗ್ರೆಸ್‌ನವರಿಗೆ 40 ವರ್ಷಗಳಲ್ಲಿ ಬಗೆಹರಿಸಲು ಆಗದ ಸಮಸ್ಯೆಯನ್ನು ನಾವು ಈಗ ಬಗೆಹರಿಸಲು ಹೊರಟ್ಟಿದ್ದೇವೆ ಎಂದರು.

ರಾಜ್ಯಪಾಲ ಹುದ್ದೆ: ಗಾಳಿ ಸುದ್ದಿ

ತಮಗೆ ರಾಜ್ಯಪಾಲ ಹುದ್ದೆ ನೀಡುತ್ತಾರೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಆಧಾರ ರಹಿತ ಸುದ್ದಿ. ಇಂತಹ ಗಾಳಿ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಿಸಿದರು.

ಏಸು ಪ್ರತಿಮೆ ಸ್ಥಾಪನೆ ವಿಚಾರದ ಕುರಿತು ಮಾತನಾಡಿ, ಡಿ.ಕೆ. ಶಿವಕುಮಾರ ಅವರದ್ದೇ ಸಾಕಷ್ಟು ಜಾಗೆ ಇದ್ದರೂ ಸರ್ಕಾರದ ಜಾಗೆಯನ್ನು ಏಸು ಪ್ರತಿಮೆಗೆ ಕೊಡಲು ಹೊರಟಿದ್ದಾರೆ. ಅವರು ಯೇಸು ಭಕ್ತರು ಯಾವಾಗಾದರೋ ಗೊತ್ತಿಲ್ಲ ಎಂದು ಕುಟುಕಿದರು.

ಸರ್ಕಾರದ ಗೋಮಾಳವನ್ನು ಅವರು ಏಸು ಪ್ರತಿಮೆಗೆ ಕೇಳಿಯೇ ಇಲ್ಲ. ಸರ್ಕಾರವನ್ನು ಕೇಳದೆಯೇ ಅವರು ಜಾಗ ನೀಡಲು ಹೊರಟಿದ್ದಾರೆ, ಅವರಿಗೆ ಯಾವ ಅಧಿಕಾರವೂ ಇಲ್ಲ. ಡಿ.ಕೆ.ಶಿ. ಹುಬ್ಬಳ್ಳಿ, ದಾವಣಗೆರೆ ರಾಜಧಾನಿಯಾಗಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಎಂದಿದ್ದು, ಉತ್ತರ ಕರ್ನಾಟಕ ಬಗ್ಗೆ ಅವರಿಗಿರುವ ನಿರ್ಲಕ್ಷ್ಯವನ್ನು ತೋರಿಸಿಕೊಡುತ್ತದೆ. ಈ ಈ ರೀತಿ ನೀಡಿರುವ ಹೇಳಿಕೆ ಖಂಡನೀಯ. ಅವರ ಕೀಳು ಭಾವನೆ ಹೇಗಿದೆ ಎಂಬುವುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆಯಾಗುತ್ತದಯೋ ಅಥವಾ ಪುನರ್‌ ರಚನೆಯಾಗುತ್ತೋ, ಅದೆಲ್ಲವೂ ಸಿಎಂಗೆ ಬಿಟ್ಟ ವಿಚಾರ. ಇದರಲ್ಲಿ ಸಿಎಂ ಯಡಿಯೂರಪ್ಪನವರಿಗೆ ಪರಮಾಧಿಕಾರ ಇದೆ ಎಂದರು.