ಹುಬ್ಬಳ್ಳಿ(ಜ.11): ಮಹದಾಯಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಕೇವಲ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಹೋರಾಟ ಮಾಡಿದರು. ಹತ್ತಾರು ಸಲ ಬಂದ್ ಮಾಡಿಸಿದ್ದರು. ಮಹದಾಯಿ ವಿಚಾರವಾಗಿ ಗೋವಾ ಕಾಂಗ್ರೆಸ್‌ನವರನ್ನು ಚಿವುಟಿ ಹೋರಾಟ ಮಾಡಿಸಿದ್ದರು. ಈಗ ಎಲ್ಲರೂ ಸೇರಿ ಬಗೆಹರಿಸೋಣ ಎಂದು ಪ್ರಯತ್ನಿಸಿದರೆ ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಮೂರು ಪಕ್ಷಗಳು ಒಂದಾದರೆ ಈ ಸಮಸ್ಯೆ ಬಗೆಹರಿಸಬಹುದು. ಆ ನಿಟ್ಟಿನಲ್ಲಿ ಅವತ್ತು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ನಡೆಸುತ್ತಿದ್ದೇವೆ. ಆದರೆ, ಇದೀಗ ವಿನಾಕಾರಣ ರಾಜಕಾರಣದ ಹೇಳಿಕೆ ನೀಡುತ್ತಿದ್ದಾರೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂದು ಸಭೆಯಲ್ಲಿ ಏನೇನು ಚರ್ಚೆಗಳಾದವು? ಯಾವ ನಿರ್ಣಯ ಕೈಗೊಂಡೆವು? ಎಂಬ ಬಗ್ಗೆ ಅವರದೇ ಪಕ್ಷದ ಎಸ್.ಆರ್. ಪಾಟೀಲ್ ಅವರನ್ನು ಕೇಳಿ ತಿಳಿದುಕೊಳ್ಳಲಿ. ಬಿಜೆಪಿ ನಾಯಕರ ಕುರಿತು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಕ್ಷುಲ್ಲಕ ಹೇಳಿಕೆ ನೀಡುವುದನ್ನು ಬಿಟ್ಟು ವಿವಾದ ಇತ್ಯರ್ಥ ಮಾಡುವುರದ ಬಗ್ಗೆ ಚಿಂತಿಸಲಿ ಎಂದು ತಿರುಗೇಟು ನೀಡಿದರು. ಮುಂದಿನ ಸಲದ ಸಭೆಯಲ್ಲಾದರೂ ಸಿದ್ದರಾಮಯ್ಯ ಪಾಲ್ಗೊಳ್ಳಲಿ ಎಂದರು. 

ಎಚ್‌ಡಿಕೆ ಆರೋಪ ಸರಿಯಲ್ಲ: 

ಮಂಗಳೂರು ಗಲಭೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿ ಪೊಲೀಸರ ನೈತಿಕತೆ ಪ್ರಶ್ನಿಸುವುದು ಸರಿಯಲ್ಲ. ಮಂಗಳೂರು ಘಟನೆ ಕುರಿತು ಗೃಹ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ. ಪೊಲೀಸರೇ ಗಲಭೆ ನಡೆಸಿದರು ಎಂಬಂತಹ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರಂತೆ. ನಾನು ವಿಡಿಯೋ ಗಮನಿಸಿಲ್ಲ. ಪೊಲೀಸರ ನೈತಿಕತೆ ಪ್ರಶ್ನಿಸಬಾರದು ಎಂದರು. ಎಚ್‌ಡಿಕೆ ಬಿಡುಗಡೆ ಮಾಡಿರುವುದು ಎಲ್ಲಿಯ ವಿಡಿಯೋ, ಅದನ್ನು ಮಾಡಿದ್ಯಾರು ಎಂಬುದನ್ನೆಲ್ಲ ಪರಿಶೀಲಿಸ ಬೇಕಾಗುತ್ತದೆ. ಆ ಕೆಲಸವನ್ನು ಗೃಹ ಇಲಾಖೆ ಕೈಗೊಳ್ಳುತ್ತದೆ ಎಂದರು.  

ಸಂಪುಟ ವಿಸ್ತರಣೆ; 

ಸಿಎಂ ನಿರ್ಧಾರ ಕೈಗೊಳ್ತಾರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಕೇಂದ್ರದ ಮುಖಂಡರನ್ನು ಭೇಟಿಯಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಶೀಘ್ರದಲ್ಲೇ ದೆಹಲಿಗೆ ಹೋಗಿ ಚರ್ಚಿಸಿಕೊಂಡು ಬಂದು ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಜಗದೀಶ ಶೆಟ್ಟರ್ ತಿಳಿಸಿದರು.