15 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದರೆ ರಾಜೀನಾಮೆ ನೀಡ್ತೀರಾ ಸಿದ್ದರಾಮಯ್ಯನವರೇ?
ಸಿದ್ದರಾಮಯ್ಯ ಈವರೆಗೆ ನೀಡಿದ ಹೇಳಿಕೆಗಳೆಲ್ಲ ಸುಳ್ಳಾಗಿವೆ| ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 7-8 ಸ್ಥಾನ ಗೆಲ್ಲಲಿದೆ ಎಂದರು| ಆದರೆ ನಾವು 26 ಸ್ಥಾನ ಗೆದ್ದೆವು| ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಅಂದರು| ಎಚ್ಡಿಕೆ ಮುಖ್ಯಮಂತ್ರಿ ಆದರು| ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಲ್ಲ ಎಂದರು| ಅದೂ ಸುಳ್ಳಾಯಿತು. ಈಗಲೂ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ|
ಹುಬ್ಬಳ್ಳಿ(ಡಿ.01): ಎಲ್ಲ ಹದಿನೈದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದರೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಜಗದೀಶ್ ಶೆಟ್ಟರ್ ಬಹಿರಂಗ ಸವಾಲು ಹಾಕಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಈವರೆಗೆ ನೀಡಿದ ಹೇಳಿಕೆಗಳೆಲ್ಲ ಸುಳ್ಳಾಗಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 7-8 ಸ್ಥಾನ ಗೆಲ್ಲಲಿದೆ ಎಂದರು. ಆದರೆ ನಾವು 26 ಸ್ಥಾನ ಗೆದ್ದೆವು. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಅಂದರು, ಎಚ್ಡಿಕೆ ಮುಖ್ಯಮಂತ್ರಿ ಆದರು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಲ್ಲ ಎಂದರು. ಅದೂ ಸುಳ್ಳಾಯಿತು. ಈಗಲೂ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಅದೂ ಸುಳ್ಳಾಗಲಿದ್ದು, ಎಲ್ಲ ಹದಿನೈದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಆ ಬಳಿಕ ಪ್ರತಿಪಕ್ಷ ಸ್ಥಾನಕ್ಕೆ ಅವರು ರಾಜೀನಾಮೆಯನ್ನು ನೀಡುತ್ತಾರಾ ಎಂದು ಸವಾಲು ಹಾಕಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಚಾರಕ್ಕೆ ಹೋದಲ್ಲೆಲ್ಲ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ, ಬಿಎಸ್ವೈ ರಾಜೀನಾಮೆ ನೀಡಲಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿಸುತ್ತ ಜನರ ಗಮನ ಬೇರೆಡೆ ಸೆಳೆವ ಪ್ರಯತ್ನ ಮಾಡುತ್ತಿದ್ದಾರೆ. ಇದು ಭ್ರಮನಿರಸನದ ಪ್ರತೀಕವಾಗಿದ್ದು, ಡಿ. 9 ರಂದು ಫಲಿತಾಂಶ ಪ್ರಕಟವಾದ ಬಳಿಕ ಇವರಿಗೆ ಸತ್ಯ ತಿಳಿಯಲಿದೆ ಎಂದರು.
ಜೆಡಿಎಸ್- ಕಾಂಗ್ರೆಸ್ ಬಡಿದಾಡಿದ ಪರಿಣಾಮ 17 ಶಾಸಕರು ರಾಜೀನಾಮೆ ನೀಡಿದರು. ಈಗ ಮತ್ತೆ ಸರ್ಕಾರ ರಚನೆಯ ಕುರಿತು ಮಾತನಾಡುತ್ತಿದ್ದಾರೆ ಎಂದರೆ ಇದು ಮೂರ್ಖತನದ ಪರಮಾವಧಿ. ಬಿಜೆಪಿಗೆ ಬೆಂಬಲವನ್ನು ನೀಡುವುದಾಗಿ ಒಂದು ಕಡೆ ಕುಮಾರಸ್ವಾಮಿ ಹೇಳುತ್ತಾರೆ. ಇನ್ನೊಂದು ಕಡೆ ಬಿಜೆಪಿ ಅಭ್ಯರ್ಥಿಗಳ ಸೋಲಿಸುವ ಮಾತನಾಡುತ್ತಾರೆ. ಇದು ತಾಳ ಮೇಳವಿಲ್ಲದ ಹೇಳಿಕೆ ಯಾಗಿದೆ. ಇದು ರಾಜಕೀಯವಾಗಿ ಹೀನಾಯವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದ್ದು, ಮುಂದಿನ ಅವಧಿಯನ್ನು ಪೂರ್ಣಗೊಳಿಸಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿಗರು ಗೆಲ್ಲುವ ಮೂಲಕ ಸರ್ಕಾರಕ್ಕೆ ಇನ್ನಷ್ಟು ಬಲ ಬರಲಿದೆ. ಇತರ ಪಕ್ಷಗಳಿಂದ ಬಿಜೆಪಿಗೆ ಇನ್ನಷ್ಟು ಶಾಸಕರು ಬರಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಫಲಿತಾಂಶ ಬರುವವರೆಗೆ ಕಾದು ನೋಡಿ ಮುಂದೆ ತಿಳಿಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.