Asianet Suvarna News Asianet Suvarna News

1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪನೆಗೆ ನಿರ್ಧಾರ: ಸಚಿವ ಶೆಟ್ಟರ್‌

ದಾವೋಸ್‌ನಲ್ಲಿ ನಡೆದ ವಿಶ್ವ ವಾಣಿಜ್ಯ ಸಮಾವೇಶದಲ್ಲಿ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಉತ್ತಮ ವಾತಾವರಣವಿಲ್ಲ ಎಂಬ ಆರೋಪ ಕೇಳಿಬಂತು| ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರ ಫಲವಾಗಿ ಇನ್ಮುಂದೆ ಕೈಗಾರಿಕೆ ಅಭಿವೃದ್ಧಿಗೆ ಅನುಕೂಲಕರವಾಗಲಿದೆ| ಕೈಗಾರಿಕೆ ಸ್ಥಾಪನೆಗೆ ಮುಂದಾಗುವವರು ನೇರವಾಗಿ ರೈತರಿಂದ ಭೂಮಿ ಖರೀದಿಸಬಹುದಾಗಿದೆ|

Minister Jagadish Shettar Talks Over Establishment of Industrial Township
Author
Bengaluru, First Published Jul 22, 2020, 7:12 AM IST

ಹಾವೇರಿ(ಜು.22): ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ನಿಟ್ಟಿನಲ್ಲಿ ಒಂದು ಸಾವಿರ ಎಕರೆ ಪ್ರದೇಶವನ್ನು ಸ್ವಾಧೀನ ಮಾಡಿಕೊಂಡು ಟೌನ್‌ ಶಿಪ್‌ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ಯಮ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈಗಾಗಲೇ ಹಾವೇರಿ ಹೊರವಲಯದಲ್ಲಿ 400 ಎಕರೆ ಜಮೀಸು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದನ್ನು ಮುಂದುವರಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಹೊಸದಾಗಿ 1000 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಮಾದರಿ ಟೌನ್‌ಶಿಪ್‌ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಟೌನ್‌ಶಿಪ್‌ ಆಗಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಅದಕ್ಕೆ ಆಸ್ಪದ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಟೌನ್‌ಶಿಪ್‌ಗೆ ಪ್ರೋತ್ಸಾಹ ನೀಡಲು ಒಪ್ಪಿಗೆ ಪಡೆಯಲಾಗಿದೆ.

ರಾಣಿಬೆನ್ನೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ, ಮದು ಮಗನ ತಂದೆ-ತಾಯಿ ಕೊರೋನಾಗೆ ಬಲಿ

ಶೀಘ್ರದಲ್ಲಿ ರಾಜ್ಯದಲ್ಲಿ ಸುಮಾರು 8ರಿಂದ 10 ಕಡೆ ಟೌನ್‌ಶಿಪ್‌ ಘೋಷಿಸಲು ನಿರ್ಧರಿಸಲಾಗಿದೆ. ಪೀಣ್ಯ, ದಾಬಸ್‌ಪೇಟೆ, ಹುಬ್ಬಳ್ಳಿ ಸೇರಿದಂತೆ ಈಗಾಗಲೇ ಕೈಗಾರಿಕೆ ಸ್ಥಾಪಿಸುವವರೇ ಟೌನ್‌ಶಿಪ್‌ ಕೇಳುತ್ತಿದ್ದಾರೆ. ಪ್ರಾಥಮಿಕ ಹಂತದಿಂದಲೇ ಟೌನ್‌ಶಿಪ್‌ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ಮಾದರಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಐಡಿಬಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸೂಚಿಸಲಾಗಿದೆ.
ರಾಣಿಬೆನ್ನೂರು, ಸವಣೂರು, ಬ್ಯಾಡಗಿ, ಶಿಗ್ಗಾಂವಿಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆದಷ್ಟುಬೇಗ ಸೈಟ್‌ ಹಂಚಿಕೆ ಮಾಡಲಾಗುವುದು. ಇದಲ್ಲದೇ ಕೆಎಸ್‌ಎಡಿಸಿಯಿಂದಲೂ ಪ್ರತಿಯೊಂದು ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಗುಡಿ ಕೈಗಾರಿಕೆ ಸ್ಥಾಪನೆಗೆ ಸಣ್ಣ ಉದ್ಯಮ ಸ್ಥಾಪನೆ ಪ್ರೋತ್ಸಾಹಕ್ಕೂ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಎಂ ಶುಗರ್ಸ್‌ಗೆ ಜಾಗ ಹಸ್ತಾಂತರ:

ಜಿಎಂ ಶುಗರ್ಸ್‌ನವರಿಗೆ ಹಿರೇಕೆರೂರು ತಾಲೂಕಿನಲ್ಲಿ ಜಾಗ ಹಂಚಿಕೆಯಾಗಿತ್ತು. ಆದರೆ, ಭೂಮಿಯ ದರ ಹೆಚ್ಚು ಎಂದು ಅವರು ಹಣ ತುಂಬಿರಲಿಲ್ಲ. ಈ ಬಗ್ಗೆ ವ್ಯಾಜ್ಯ ನಡೆಯುತ್ತಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಭೂಪರಿಹಾರ ಭರ್ತಿ ಮಾಡುವಂತೆ ನೀಡಿದ ಸೂಚನೆ ಮೇರೆಗೆ ಅಷ್ಟುಹಣವನ್ನು ಜಿಎಂ ಶುಗರ್ಸ್‌ನವರು ಹಣವನ್ನು ತುಂಬಿದ್ದಾರೆ. ತಕ್ಷಣವೇ ಜಿಎಂ ಶುಗರ್ಸ್‌ನವರಿಗೆ ಜಮೀನು ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದರಿಂದ ಆದಷ್ಟುಬೇಗ ಜಿಲ್ಲೆಯಲ್ಲಿ ಮತ್ತೊಂದು ಸಕ್ಕರೆ ಕಾರ್ಖಾನೆ ಆರಂಭವಾಗಲಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರದೇಶವನ್ನು ಕೈಗಾರಿಕಾ ಕಾರಿಡಾರ್‌ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕೈಗಾರಿಕೆ ಬೆಳವಣಿಗೆಗೆ ಎರಡೂ ಸರ್ಕಾರಗಳು ಕೈಜೋಡಿಸಿ ಕೆಲಸ ಮಾಡುತ್ತಿರುವುದರಿಂದ ಅನುಕೂಲವಾಗಲಿದೆ. ಹಾವೇರಿ ಜಿಲ್ಲೆಗೂ ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಲ್ಲಿ ಉತ್ತಮ ಭವಿಷ್ಯವಿದೆ.

ದಾವೋಸ್‌ನಲ್ಲಿ ನಡೆದ ವಿಶ್ವ ವಾಣಿಜ್ಯ ಸಮಾವೇಶದಲ್ಲಿ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಉತ್ತಮ ವಾತಾವರಣವಿಲ್ಲ ಎಂಬ ಆರೋಪ ಕೇಳಿಬಂತು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರ ಫಲವಾಗಿ ಇನ್ಮುಂದೆ ಕೈಗಾರಿಕೆ ಅಭಿವೃದ್ಧಿಗೆ ಅನುಕೂಲಕರವಾಗಲಿದೆ. ಕೈಗಾರಿಕೆ ಸ್ಥಾಪನೆಗೆ ಮುಂದಾಗುವವರು ನೇರವಾಗಿ ರೈತರಿಂದ ಭೂಮಿ ಖರೀದಿಸಬಹುದಾಗಿದೆ. ಕರ್ನಾಟಕ ಇಂಡಸ್ಟ್ರೀಸ್‌ ಕಾಯ್ದೆ 2002ನ್ನು ತಿದ್ದುಪಡಿ ಮಾಡಲಾಗಿದ್ದು, ಶೀಘ್ರದಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಕೈಗಾರಿಕೆ ಉದ್ದೇಶಕ್ಕಾಗಿ ಭೂಮಿ ಖರೀದಿಸಿ ಉದ್ಯಮ ಆರಂಭಿಸದೇ ಖಾಲಿ ಬಿಟ್ಟರೆ ವಾಪಸ್‌ ಪಡೆಯಲಾಗುವುದು. ಈ ಹಿಂದೆ ಕೈಗಾರಿಕೆಗಾಗಿ ಭೂಮಿ ಹಂಚಿಕೆಯಾದರೂ ಇದುವರೆಗೆ ಉದ್ಯಮ ಆರಂಭಿಸದವರು, ಬೇರೆ ಉದ್ದೇಶಕ್ಕೆ ಬಳಸಿರುವುದು, ಖಾಲಿ ಬಿಟ್ಟಿರುವುದರ ಸರ್ವೇ ಕಾರ್ಯ ಮಾಡಲು ಸೂಚಿಸಿದ್ದೇನೆ. ಆ ವರದಿ ಬಂದ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಟೌನ್‌ಶಿಪ್‌ ಸ್ಥಾಪನೆಯನ್ನೂ ಕಾಲಮಿತಿಯಲ್ಲಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾವಾರು ಪ್ರವಾಸ ಮಾಡಿ ಸ್ಥಳೀಯ ಸಮಸ್ಯೆಯ ಮಾಹಿತಿ ಪಡೆಯುತ್ತಿದ್ದೇನೆ. ಸಭೆ ಮಾಡಿ ಇಲ್ಲಿಗೆ ಮುಗಿಸುವುದಿಲ್ಲ. ಪ್ರತಿ ವಾರವೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಪ್ರಗತಿ ಪರಿಶೀಲಿಸಲಾಗುವುದು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಎಸ್ಪಿ ಕೆ.ಜಿ.ದೇವರಾಜು ಇತರರು ಇದ್ದರು.
 

Follow Us:
Download App:
  • android
  • ios