ಉಡುಪಿ/ಮೂಲ್ಕಿ(ನ.07):  ಉಪಚುನಾವಣೆ ನಡೆದಿರುವ ಶಿರಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್‌.ಆರ್‌.ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನಿಂದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿ ಇಲ್ಲಿ ಪರಸ್ಪರರನ್ನು ಸೋಲಿಸಬೇಕೆಂದು ಇಬ್ಬರೂ ಒಳಗಿಂದೊಳಗೆ ತಂತ್ರಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅನಾಯಾಸವಾಗಿ ಗೆಲುವನ್ನು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಬಿಜೆಪಿಯ ಅಲೆ ಇದ್ದು, ಶಿರಾ ಹಾಗೂ ಆರ್‌.ಆರ್‌.ನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಾಗೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಗೆಲವು ಸಾಧಿಸಲಿದೆ ಎಂದರು.

ಕತ್ತಿ ಮಸೆಯುತ್ತಿರುವ ಡಿಕೆಶಿ-ಸಿದ್ದು: 

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಗದೀಶ್‌ ಶೆಟ್ಟರ್‌ ಅವರು, ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಮಧ್ಯೆ ಆರಂಭದಿಂದಲೂ ಭಿನ್ನಾಭಿಪ್ರಾಯ ಇದೆ. ತಾನು ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂದು ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ, ಆದರೆ ಡಿ.ಕೆ.ಶಿ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗ ಶಾಸಕರು ಹೇಳುತ್ತಿದ್ದಾರೆ. ಅವರಿಬ್ಬರೂ ಒಳಗಿಂದೊಳಗೆ ಕತ್ತಿ ಮಸೆಯುತ್ತಿದ್ದು, ಯಾವಾಗ ಯಾರು ಯಾರಿಗೆ ಹೊಡೆಯುತ್ತಾರೆ ಕಾದು ನೋಡಬೇಕಾಗಿದೆ ಎಂದು ರಾಜ್ಯ ಕೈಗಾರಿಕಾ ಸಟಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

'ಸಿಎಂ ಬದಲಾವಣೆ ಸಾಧ್ಯವಿಲ್ಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ'

ಸಿಬಿಐಯಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರನ್ನು ರಕ್ಷಿಸುವುದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿ. ಬಿಜೆಪಿ ಮೇಲೆ ರಾಜಕೀಯದ ಆರೋಪ ಹೊರಿಸುತಿದ್ದಾರೆ. ಯುಪಿಎ ಸರ್ಕಾರ ಜಗನ್ಮೋಹನ ರೆಡ್ಡಿಯನ್ನು ಬಂಧಿಸಿಲ್ವಾ? ಜಗನ್‌ ರೆಡ್ಡಿಯನ್ನು ವರ್ಷಗಟ್ಟಲೆ ಜೈಲಿಗೆ ಹಾಕಲಿಲ್ವಾ, ಜನಾರ್ದನ ರೆಡ್ಡಿಯನ್ನು ಜೈಲಿಗೆ ಹಾಕಿಲ್ವಾ, ಆಗ ನಾವೇನಾದರೂ ಮಾತಾಡಿದ್ವಾ? ಈ ಬಂಧನಗಳನ್ನು ರಾಜಕೀಯ ಪ್ರೇರಿತ ಅಂತ ನಾವೇನಾದ್ರೂ ಕಾಂಗ್ರೆಸ್‌ ಮೇಲೆ ಆರೋಪ ಮಾಡಿದೆವಾ ಎಂದು ಶೆಟ್ಟರ್‌ ಖಾರವಾಗಿ ಪ್ರಶ್ನಿಸಿದರು.

ತನಿಖೆ ಮಾಡಲು ಬಿಡಿ:

ಸಿಬಿಐ ಒಂದು ಸ್ವತಂತ್ರ ಸಂಸ್ಥೆ, ಅದಕ್ಕೆ ತನಿಖೆ ಮಾಡಲು ಬಿಡಿ, ವಿನಯ ಕುಲಕರ್ಣಿ ಏನೂ ತಪ್ಪಿಲ್ಲ ಅಂದ್ರೆ ಕಾಂಗ್ರೆಸಿಗೆ ಯಾಕೆ ಭಯ ಎಂದು ಪ್ರಶ್ನಿಸಿದ ಶೆಟ್ಟರ್‌, ಡಿ.ಕೆ ಶಿವಕುಮಾರ್‌ ಕೂಡ ಜೈಲಿಗೆ ಹೋಗಿದ್ದಾರೆ, ಈಗ ಜಾಮೀನಿನ ಮೇಲೆ ಹೊರಗಿದ್ದಾರೆ, ಅವರ ಮೇಲಿನ ಪ್ರಕರಣ ಇನ್ನೂ ಖುಲ್ಲಾ ಆಗಿಲ್ಲ, ರಾಜಕಾರಣಕ್ಕೆ ಬಂದಾಗ ಅವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ? ಆಸ್ತಿ ಹೆಚ್ಚಾಗಿದ್ದರೆ ಸಿಬಿಐ ಕೇಳುತ್ತೆ. ಸರಿಯಾದ ಮಾರ್ಗದಲ್ಲಿ ಆಸ್ತಿ ಗಳಿಸಿದ್ದರೆ ಭಯ ಯಾಕೆ? ಎಂದ ಶೆಟ್ಟರ್‌, ಕಾಂಗ್ರೆಸ್‌ನವರು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡಬಾರದು ಎಂದು ಸಲಹೆ ಮಾಡಿದರು.