ಹುಬ್ಬಳ್ಳಿ(ಅ.27): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಶುರುವಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. ಇದೇ ವೇಳೆ ವಿಧಾನಸಭೆಯ 2 ಕ್ಷೇತ್ರಗಳ ಉಪಚುನಾವಣೆ ಹಾಗೂ 4 ಪರಿಷತ್‌ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಮುಖ್ಯಮಂತ್ರಿಗಿರಿಗಾಗಿ ಪೈಪೋಟಿ ನಡೆದಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ನಾನು ಮತ್ತೆ ಮುಖ್ಯಮಂತ್ರಿಯಾದರೆ ಉಚಿತ ಅಕ್ಕಿ ನೀಡುತ್ತೇನೆ ಎಂದು ಹೇಳುತ್ತಾರೆ. ಇನ್ನು ಡಿಕೆಶಿ ಅವರ ಬೆಂಬಲಿಗರು ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಖಾಲಿಯಿಲ್ಲದ ಕುರ್ಚಿಗಾಗಿ ಅವರವರಲ್ಲೇ ತಿಕ್ಕಾಟ ಶುರುವಾಗಿದೆ ಎಂದರು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಹೇಳಲು ಹೆಸರು ಇಲ್ಲದಂತಾಗಿದೆ. ಜೆಡಿಎಸ್‌ನವರ ಪರಿಸ್ಥಿತಿಯಂತೂ ಸಂಪೂರ್ಣ ನೆಲಕಚ್ಚಿದೆ ಎಂದರು.

ವಿಪನಲ್ಲಿ ಬಹುಮತ:

ವಿಧಾನ ಪರಿಷತ್‌ನಲ್ಲಿ ನಮಗೆ ಬಹುಮತವಿಲ್ಲ. ಹೀಗಾಗಿ ವಿಧಾನಸಭೆಯಲ್ಲಿ ಬಿಲ್‌ಗಳು ಪಾಸಾದರೂ ಪರಿಷತ್‌ನಲ್ಲಿ ಪಾಸಾಗುತ್ತಿಲ್ಲ. ಉತ್ತಮ ಮಸೂದೆಗಳಿಗೂ ಕಾಂಗ್ರೆಸ್‌-ಜೆಡಿಎಸ್‌ ಅಡ್ಡಗಾಲು ಹಾಕುತ್ತಿವೆ. ಇದೀಗ ಪರಿಷತ್‌ನ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಆ ಕೊರತೆಯನ್ನು ನೀಗಿಸುತ್ತಾರೆ. ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವುದು ಗ್ಯಾರಂಟಿ. ಈ ಮೂಲಕ ವಿರೋಧ ಪಕ್ಷಗಳಿಗೆ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿಗೆ ಬರುತ್ತಾರಾ ಇಬ್ಬರು ಕಾಂಗ್ರೆಸ್ ನಾಯಕರು : ಪ್ರಹ್ಲಾದ್ ಜೋಶಿ ರಿಯಾಕ್ಷನ್

ಪಶ್ಚಿಮ ಪದವೀಧರ ಕ್ಷೇತ್ರದಲ್ಲಂತೂ ಸಂಕನೂರು ಕನಿಷ್ಠವೆಂದರೂ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನಾಲ್ಕು ಜಿಲ್ಲೆಗಳಲ್ಲೂ ಪ್ರಚಾರ ನಡೆಸಿದ್ದೇನೆ. ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ವಿರೋಧ ಪಕ್ಷಗಳು ಸಂಕನೂರು ವಿರುದ್ಧವಾಗಿ ಟೀಕೆ ಮಾಡುತ್ತಿಲ್ಲ. ಅಂದರೆ ಸರಳ, ಸಜ್ಜನಿಕೆ ವ್ಯಕ್ತಿತ್ವ ಸಂಕನೂರು ಅವರದ್ದು ಎಂಬುದು ಗೊತ್ತಾಗುತ್ತೆ. ಸಂಕನೂರು ಆರು ವರ್ಷಗಳಲ್ಲಿ ಸಾಕಷ್ಟುಕೆಲಸ ಮಾಡಿದ್ದಾರೆ ಎಂದು ನುಡಿದರು. ಈ ಹಿನ್ನೆಲೆಯಲ್ಲಿ ಈ ಸಲ ಮತ್ತೊಮ್ಮೆ ಅವರೇ ಆರಿಸಿ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯತ್ನಾಳ ವೈಯಕ್ತಿಕ ಹೇಳಿಕೆ:

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸುವ ಕುರಿತು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶೆಟ್ಟರ್‌, ಅದು ಅವರ ವೈಯಕ್ತಿಕ ಹೇಳಿಕೆ. ಅವರ ಹೇಳಿಕೆ ಬಗ್ಗೆ ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು ಗಮನಿಸುತ್ತಿದೆ. ಅವರು ಕ್ರಮ ಕೈಗೊಳ್ಳುತ್ತಾರೆ. ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪಕ್ಷದ ಅಭ್ಯರ್ಥಿ ಎಸ್‌.ವಿ.ಸಂಕನೂರು, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರವಿ ನಾಯ್ಕ ಸೇರಿದಂತೆ ಹಲವರು ಇದ್ದರು.