ಹುಬ್ಬಳ್ಳಿ(ಜ.26): ಕೃಷಿ ಉತ್ಪನ್ನ ಮಾರುಕಟ್ಟೆ ಹೊರಗೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದಾದರೆ ಎಪಿಎಂಸಿ ಮುಚ್ಚಿದರೆ ಏನಾಗುತ್ತದೆ? ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಪ್ರಶ್ನಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವ ಸ್ಥಳದಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾಗುತ್ತವೆ ಎಂಬುದು ಮುಖ್ಯವಲ್ಲ. ರೈತರಿಗೆ ನ್ಯಾಯಯುತ ಬೆಲೆ ಸಿಗುವುದು ಮುಖ್ಯ. ಎಪಿಎಂಸಿ ಮುಚ್ಚಿದರೆ ರೈತರು ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಸಿಲುಕುತ್ತಾರೆ ಎಂಬುದು ತಪ್ಪು ಕಲ್ಪನೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ಜೆಡಿಎಸ್‌ ತಾರತಮ್ಯ: ಬಸವರಾಜ ಹೊರಟ್ಟಿ ಪ್ರತಿಕ್ರಿಯೆ

ರೈತರು ಬೆಳೆದ ಕೃಷಿ ಉತ್ಪನ್ನಗಳಿಂದ ಇಷ್ಟುವರ್ಷ ಎಪಿಎಂಸಿಯಲ್ಲಿ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದರು. ತಿದ್ದುಪಡಿ ಕಾಯ್ದೆಯಿಂದ ಹೊರಗಡೆ ವಹಿವಾಟು ನಡೆಸಲು ಅವಕಾಶ ಇದೆ. ಇದರ ಲಾಭ ನೇರವಾಗಿ ರೈತರಿಗೆ ಸಿಗಲಿದೆ. ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಿತಬೇಕೋ, ಹೊರಗಡೆ ರೈತರ ಪ್ರಗತಿ ಬೇಕೋ ಎಂದು ರೈತರೇ ನಿರ್ಧರಿಸಲಿ. ರೈತರಿಗೆ ಕೈ ಮುಗಿದು ಕೇಳುತ್ತೇನೆ ಕಾಂಗ್ರೆಸ್ಸಿನವರ ಮಾತು ಕೇಳಿ ರೈತರು ಬೀದಿಗಿಳಿಯೋದು ಬೇಡ ಎಂದು ಮನವಿ ಮಾಡಿದ್ದಾರೆ.