Asianet Suvarna News Asianet Suvarna News

ಲಾಕ್‌ಡೌನ್‌: ಏ. 20 ರಿಂದ ಕಾಮಗಾರಿ ಆರಂಭ, ಸಚಿವ ಜಗದೀಶ ಶೆಟ್ಟರ್‌

ಷರತ್ತಿನೊಂದಿಗೆ ನಿರ್ಮಾಣ ಕಾಮಗಾರಿ ಆರಂಭ| ಗುತ್ತಿಗೆದಾರರು ಕಾರ್ಮಿಕರಿಗೆ ವಸತಿ, ಕ್ಯಾಂಪ್‌ಗಳನ್ನು ನಿರ್ಮಿಸಿ ಅಲ್ಲಿಯೇ ಊಟ, ಉಪಾಹಾರ ಸೌಕರ್ಯ ಒದಗಿಸಬೇಕು| ಪ್ರತಿದಿನ ಕಾರ್ಮಿಕರು ತಮ್ಮ ಸ್ಥಳಗಳಿಗೆ ಸಂಚರಿಸಲು ಅವಕಾಶ ಇರುವುದಿಲ್ಲ | ಸಾಮಾಜಿಕ ಅಂತರ, ಶುಚಿತ್ವ ಕಾಪಾಡಬೇಕು| ಪ್ಲಂಬರ್‌ಗಳು, ಮೋಟಾರ್‌ ಮೆಕ್ಯಾನಿಕ್‌ಗಳು ಹಾಗೂ ಪೂರಕ ಚಟುವಟಿಕೆಗಳ ಕಾರ್ಮಿಕರಿಗೂ ವಿನಾಯಿತಿ ಅನ್ವಯ|

Minister Jagadish Shettar Says work Will be Start from April 20th
Author
Bengaluru, First Published Apr 18, 2020, 7:34 AM IST

ಧಾರವಾಡ(ಏ.18): ಎರಡನೇ ಹಂತದ ಲಾಕ್‌ಡೌನ್‌ ಅವಧಿ ಮೇ. 3ರ ವರೆಗೂ ವಿಸ್ತರಣೆ ಆಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಬಾರದು. ಕಾರ್ಮಿಕರಿಗೂ ಕನಿಷ್ಠ ಜೀವನ ನಿರ್ವಹಣೆ ಮಾಡಲು ಉದ್ಯೋಗ ಸಿಗಬೇಕು ಎನ್ನುವ ಆಶಯದೊಂದಿಗೆ ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಜಿಲ್ಲೆಯಲ್ಲಿ ಕಟ್ಟಡ, ರಸ್ತೆ, ಸೇತುವೆ ಮೊದಲಾದ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಗುತ್ತಿಗೆದಾರರು ಕಾರ್ಮಿಕರಿಗೆ ವಸತಿ, ಕ್ಯಾಂಪ್‌ಗಳನ್ನು ನಿರ್ಮಿಸಿ ಅಲ್ಲಿಯೇ ಊಟ, ಉಪಾಹಾರ ಸೌಕರ್ಯಗಳನ್ನು ಒದಗಿಸಬೇಕು. ಪ್ರತಿದಿನ ಕಾರ್ಮಿಕರು ತಮ್ಮ ಸ್ಥಳಗಳಿಗೆ ಸಂಚರಿಸಲು ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿ ಕಾಮಗಾರಿ ಆರಂಭ: ಮಣ್ಣು ಕುಸಿದು ವ್ಯಕ್ತಿ ಸಾವು

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೋಕೋಪಯೋಗಿ, ಪಂಚಾಯತ್‌ ರಾಜ್‌, ಗ್ರಾಮೀಣ ಕುಡಿಯುವ ನೀರು, ನಿರ್ಮಿತಿ ಕೇಂದ್ರ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಿವಿಲ್‌ ಕಾಮಗಾರಿ ಇಲಾಖೆಗಳ ಎಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

ನಿರ್ಮಾಣ ಕಾಮಗಾರಿಗಳನ್ನು ಅನುಮತಿ ಪಡೆದುಕೈಗೊಳ್ಳಬಹುದು. ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿಯೇ ವಸತಿ ಕಲ್ಪಿಸಬೇಕು. ಸಾಮಾಜಿಕ ಅಂತರ, ಶುಚಿತ್ವ ಕಾಪಾಡಬೇಕು. ಪ್ಲಂಬರ್‌ಗಳು, ಮೋಟಾರ್‌ ಮೆಕ್ಯಾನಿಕ್‌ಗಳು ಹಾಗೂ ಪೂರಕ ಚಟುವಟಿಕೆಗಳ ಕಾರ್ಮಿಕರಿಗೂ ಈ ವಿನಾಯಿತಿ ಅನ್ವಯಿಸುತ್ತದೆ ಎಂದರು.

ತಡಸಿನಕೊಪ್ಪದ ಬಳಿ ಐಐಐಟಿ ಕಾಮಗಾರಿ ಸ್ಥಗಿತವಾಗಿದೆ. ಆದರೆ ಕಾರ್ಮಿಕರು ಅಲ್ಲಿಯೇ ಇದ್ದಾರೆ. ಅಂತಹ ಕಡೆಗಳಲ್ಲಿ ಕೆಲಸಗಳನ್ನು ಪುನರಾರಂಭಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮುಂದುವರಿಯಲಿ. ಲಾಕ್‌ಡೌನ್‌ ನಿಯಮಗಳು ಉಲ್ಲಂಘನೆಯಾಗದಂತೆ ನರೇಗಾ ಯೋಜನೆಯಡಿ ವೈಯಕ್ತಿಕ ಚಟುವಟಿಕೆಗಳು ನಡೆಯುತ್ತಿವೆ. ಅದೇ ರೀತಿ ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆಯು ಬೆಳಗಾವಿ, ಧಾರವಾಡ, ಗದಗ ಹಾಗೂ ಭಾಗಶಃ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಇಲ್ಲಿನ ಕಾಮಗಾರಿಗಳು ನಡೆಯಬೇಕು. ಗುತ್ತಿಗೆದಾರರು ಕಾರ್ಮಿಕರಿಗೆ ಕ್ಯಾಂಪ್‌ಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುವ ಷರತ್ತಿನೊಂದಿಗೆ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದರು. ತಮ್ಮ ಕ್ಷೇತ್ರದ ಪಡೇಸೂರು, ಶಾನವಾಡ ಸೇರಿದಂತೆ ವಿವಿಧ ಗ್ರಾಮಗಳಿಗೆ ಹೆಗ್ಗಡದೇವನಕೋಟೆ ತಾಲೂಕಿಗೆ ಗುಳೇ ಹೋಗಿದ್ದ ಹಲವು ಜನ ಮರಳಿ ಬಂದಿದ್ದಾರೆ. ಅಂತಹ ಜನರ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ವಲಸೆ ಕಾರ್ಮಿಕರು ಹಾಗೂ ಇಟ್ಟಿಗೆ ಭಟ್ಟಿಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಬೀಡು ಬಿಟ್ಟಿರುವ ಕಾರ್ಮಿಕರಿಗೆ ಆಹಾರಕಿಟ್‌ ವಿತರಣೆ ಮುಂದುವರಿಯಬೇಕು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ, ಎಸ್‌ಡಿಆರ್‌ಎಫ್‌ ನಿಧಿಯಡಿ 436 ವಲಸೆ ಕಾರ್ಮಿಕರಿಗೆ ಸರ್ಕಾರದ ಹಾಸ್ಟೆಲ್‌ಗಳಲ್ಲಿ ವಸತಿ ಕಲ್ಪಿಸಿ ಊಟ, ಉಪಾಹಾರ, ಬಟ್ಟೆನೀಡಲಾಗಿದೆ. ಇಟ್ಟಿಗೆಭಟ್ಟಿ ಕಾರ್ಮಿಕರಿಗೆ ಸುಮಾರು . 3,000 ಮೌಲ್ಯದ ಆಹಾರ ಕಿಟ್‌ ವಿತರಿಸಲಾಗಿದೆ ಎಂದರು.

ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಕಳೆದ ಸಾಲಿನಲ್ಲಿ ಕಾಮಗಾರಿಗಳನ್ನು ಮುಂದುವರಿಸಲಾಗಿದೆ. ಲಾಕ್‌ಡೌನ್‌ ನಿಯಮಗಳು ವ್ಯತ್ಯಯವಾಗದಂತೆ ಗ್ರಾಮೀಣ ಭಾಗದಲ್ಲಿ ನರೇಗಾ ಚಟುವಟಿಕೆಗಳು ನಡೆಯುತ್ತಿವೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಗಾಗಿ ಕಾಯುತ್ತಿದ್ದೇವೆ. ಶೀಘ್ರದಲ್ಲಿಯೇ ಈ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ಜಲಮಂಡಳಿ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ವಿವಿಧ ಇಲಾಖೆಗಳ ಎಂಜಿನಿಯರ್‌ಗಳು ಇದ್ದರು.
 

Follow Us:
Download App:
  • android
  • ios