ಮೊಬೈಲ್‌ ಸ್ವಿಚ್‌ ಆಫ್‌ ಮಾಡಂಗಿಲ್ಲ, ಸಬೂಬು ಹೇಳಂಗಿಲ್ಲ: ಖಡಕ್‌ ಎಚ್ಚರಿಕೆ ಕೊಟ್ಟ ಆಚಾರ್‌

* ಮೊದಲ ಸಭೆಯಲ್ಲೇ ಸಚಿವ ಹಾಲಪ್ಪ ಆಚಾರ್‌ ಅಧಿಕಾರಿಗಳ ಖಡಕ್‌ ಎಚ್ಚರಿಕೆ
* ಶ್ರದ್ಧೆಯಿಂದ ಕೆಲಸ ಮಾಡಿ, ಇಲ್ಲವೇ ನಿಮ್ಮ ದಾರಿ ನೋಡಿಕೊಳ್ಳಿ
* ನಾನು ಬರಿ ಒತ್ತಡ ಹಾಕಲ್ಲ, ಬೆನ್ನು ಚಪ್ಪರಿಸುತ್ತೇನೆ
 

Minister Halappa Achar Warned to Officers in Koppal grg

ಕೊಪ್ಪಳ(ಆ.08): ಚುನಾಯಿತ ಪ್ರತಿನಿಧಿಗಳಾಗಲಿ, ಸರ್ಕಾರಿ ಇಲಾಖೆ ಅಧಿಕಾರಿಗಳಾಗಲಿ ಇರುವುದು ಜನರ ಸೇವೆಗಾಗಿ. ಆದ್ದರಿಂದ ಎಲ್ಲರೂ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ. ಆದರೆ, ಹಗಲು-ರಾತ್ರಿ ನಿಮ್ಮ ಮೊಬೈಲ್‌ ಸ್ವಿಚ್‌ಆಫ್‌ ಆಗಂಗಿಲ್ಲಾ , ಸಬೂಬ ಹೇಳುವಂತೆಯೇ ಇಲ್ಲ. ಇದು ತಮ್ಮ ಮೊದಲ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್‌ ಅವರ ಖಡಕ್‌ ಎಚ್ಚರಿಕೆ.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್‌-19 ಮೂರನೇ ಅಲೆ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾನು ಯಾವುದೇ ಒತ್ತಡ ಹಾಕುವುದಿಲ್ಲ, ನೀವು ನಿಮ್ಮ ಪಾಡಿಗೆ ನಿಯಮಾನುಸಾರ ಕಾರ್ಯ ನಿರ್ವಹಿಸಿ, ಫೈಲ್‌ಗಳನ್ನು ಪೆಂಡಿಂಗ್‌ ಇಡುವಂತೆ ಇಲ್ಲ. ನಾಲ್ಕು ದಿನಕ್ಕೆ ಆಗಬೇಕಾಗಿರುವುದನ್ನು ನಲವತ್ತು ದಿನ ಮಾಡುವಂತೆ ಇಲ್ಲ. ಅದಕ್ಕೆ ಇನ್ನುಮುಂದೆ ಅವಕಾಶವೇ ಇಲ್ಲ. ಹಾಗಂತ ನಾನು ಬರಿ ಕೆಲಸಕ್ಕಾಗಿ ಸತಾಯಿಸುವುದಿಲ್ಲ, ಸರಿಯಾಗಿ ಕೆಲಸ ಮಾಡಿದರೇ ಬೆನ್ನು ಚಪ್ಪರಿಸುತ್ತೇನೆ. ಶ್ರದ್ಧೆಯಿಂದ ಹಗಲಿರಳು ಕೆಲಸ ಮಾಡಿ, ರಾಜ್ಯದಲಿಯೇ ಮಾದರಿ ಜಿಲ್ಲೆಯನ್ನು ಮಾಡೋಣ. ಹಾಗೆ ಮಾಡುವ ಮನಸ್ಸು ಇಲ್ಲದಿದ್ದರೆ ನಿಮ್ಮ ದಾರಿಯನ್ನು ನೀವು ನೋಡಿ, ರಾಜ್ಯವಿಶಾಲವಾಗಿದೆ ಎನ್ನುವ ಸಂದೇಶವನ್ನು ಕಳುಹಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆ ಕಾರ್ಯ ಇದುವರೆಗೂ ಉತ್ತಮವಾಗಿ ನಡೆದಿದ್ದು, ಇನ್ನುಮುಂದೆಯೂ ಇದೇ ಜವಾಬ್ದಾರಿಯಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಶ್ರಮಿಸಬೇಕು. ಕೋವಿಡ್‌ ಮೂರನೇ ಅಲೆಯು ಜಿಲ್ಲೆಯಲ್ಲಿ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮೋದಿಯನ್ನ ಪ್ರಧಾನಿಯಾಗಿ ಪಡೆದಿರುವುದು ಈ ದೇಶದ ಜನರ ಪುಣ್ಯ: ಹಾಲಪ್ಪ ಆಚಾರ

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌-19 ಮೂರನೇ ಅಲೆಯ ಮುನ್ನೆಚ್ಚರಿಕೆಯಾಗಿ ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ವೆಂಟಿಲೇಟರ್‌ಗಳು, ಆಕ್ಸಿಜನ್‌ಯುಕ್ತ ಹಾಸಿಗೆಗಳು, ಅಗತ್ಯ ಪ್ರಮಾಣದ ವೈದ್ಯರು, ತಜ್ಞರು, ವೈದ್ಯಕೀಯ ಸಿಬ್ಬಂದಿ ನೇಮಕ, ಆಕ್ಸಿಜನ್‌ ಪ್ಲಾಂಟ್‌ಗಳ ಸ್ಥಾಪನೆ ಮುಂತಾದ ಸೌಲಭ್ಯವನ್ನು ಸಿದ್ಧವಾಗಿಟ್ಟುಕೊಳ್ಳಿ. ಕಳೆದ ಕೋವಿಡ್‌ ಅಲೆಗಳಿಗಿಂತ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆ ಇರುವುದರಿಂದ ಮಕ್ಕಳ ತಜ್ಞರು ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರಬೇಕು. ಮಕ್ಕಳ ಬಗ್ಗೆ ಜಾಗ್ರತೆ ವಹಿಸಲು ಪೋಷಕರಿಗೆ ಸೂಕ್ತ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.

ಯಾವುದೇ ಇಲಾಖೆಯ ಕೆಲಸ ಕಾರ್ಯಗಳು ಬಾಕಿ ಉಳಿಯಬಾರದು. ಅಂದಿನ ಕೆಲಸ ಅಂದಿಗೆ ಮುಗಿಸುವುದು ಅಧಿಕಾರಿಗಳ ಜವಾಬ್ದಾರಿ. ಒಂದು ವೇಳೆ ಇಲಾಖೆ ಕೆಲಸ ಬಾಕಿ ಉಳಿದಲ್ಲಿ, ಸಾರ್ವಜನಿಕರಿಗೆ ತೊಂದರೆ ಆದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. ಯಾವುದೇ ಅಧಿಕಾರಿ ಮೊಬೈಲ್‌ನ್ನು ಬಂದ್‌ ಮಾಡಿ ಇಟ್ಟುಕೊಳ್ಳುವಂತಿಲ್ಲ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಯಾವುದೇ ಸಮಸ್ಯೆ ಕುರಿತು ಕರೆ ಮಾಡಿದಾಗ, ಸಂಪರ್ಕಿಸಿದಾಗ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಿರಬೇಕು. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಲು ಇಷ್ಟವಿಲ್ಲದ ಅಧಿಕಾರಿಗಳು ಬೇರೆಡೆ ಹೋಗಬಹುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗಿಣಿಗೇರಾ-ಕೊಪ್ಪಳ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಜಿಲ್ಲೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಷ್ಟಗಿ ಶಾಸಕರಾದ ಅಮರೇಗೌಡ ಪಾಟೀಲ್‌ ಬಯ್ಯಾಪುರ ಮಾತನಾಡಿ, ಜಲಜೀವನ ಮಿಷನ್‌ ಯೋಜನೆಯಡಿ ಕುಷ್ಟಗಿ ತಾಲೂಕಿನ 155 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಎಲ್‌ಟಿ ಸಂಸ್ಥೆಗೆ ಕಾಮಗಾರಿಯನ್ನು ವಹಿಸಲಾಗಿದ್ದು, ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಚಿವರು ಕ್ರಮ ಕೈಗೊಳ್ಳಬೇಕು. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯ ಕೊರತೆಯಿಂದ ಬರಗಾಲ ಉಂಟಾಗುವ ಪರಿಸ್ಥಿತಿ ಇದ್ದು, ಈ ಬಗ್ಗೆ ಸಚಿವರು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕೊಪ್ಪಳ: ರಸ್ತೆ ಕಾಮಗಾರಿಗೆ 300 ರೂ. ನೀಡಿದ ಅಜ್ಜಿ ಕಾಲಿಗೆ ಬಿದ್ದ ಶಾಸಕ ಹಾಲಪ್ಪ ಆಚಾರ್‌

ಇದಕ್ಕೆ ಸ್ಪಂದಿಸಿದ ಸಚಿವರು, ಎಲ್‌ಟಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡುವಂತೆ ಜಿ.ಪಂ ಸಿಇಒಗೆ ಹಾಗೂ ಮಳೆಯ ಕೊರತೆಯಿಂದ ಉಂಟಾದ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಮಾತನಾಡಿದರು. ಸಭೆಯಲ್ಲಿ ಕೊಪ್ಪಳ ಶಾಸಕರಾದ ಅಮರೇಗೌಡ ಭಯ್ಯಾಪುರ, ಕೆ.ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಫೌಜಿಯಾ ತರನ್ನುಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳಿಗಾಗಿ ಆಪ್ತ ಸಮಾಲೋಚನೆ ನೀಡಲು ಆರಂಭಿಸಿರುವ ಉಚಿತ ಸಹಾಯವಾಣಿ ಸಂಖ್ಯೆಯ ಪೋಸ್ಟರ್‌ಗಳನ್ನು ಸಚಿವರಾದ ಹಾಲಪ್ಪ ಆಚಾರ ಹಾಗೂ ಶಾಸಕರು ಬಿಡುಗಡೆಗೊಳಿಸಿದರು.
 

Latest Videos
Follow Us:
Download App:
  • android
  • ios