ಗಣಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬೀಳುವುದೇ ಕಡಿವಾಣ..!

* ಶ್ರೀಮಂತರ ಸ್ವತ್ತಾಗಿರುವ ಹಳ್ಳಕೊಳ್ಳಗಳಿಗೆ ಸಿಗುವುದೇ ಮುಕ್ತಿ
* ಮರಳು ಚೋರರಿಗೆ ಚಾಟಿ ಬೀಸುವರೇ ಸಚಿವ ಹಾಲಪ್ಪ?
* ಸಾಮಾನ್ಯರಿಗೆ ಮರಳು ಸುಲಭವಾಗಿ ದೊರೆಯುವಂತೆ ಆಗಬೇಕು 
 

Minister Halappa Achar Talks Over Illegal Sand Mafia in Koppal grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.09):  ಜಿಲ್ಲೆಯಲ್ಲಿ ಸಾಮಾನ್ಯರಿಗೆ ಸಿಗದ ಮರಳು ಶ್ರೀಮಂತರ ಸ್ವತ್ತಾಗಿದ್ದು, ಅವ್ಯಾಹತವಾಗಿ ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಜಪ್ತಿ ಮಾಡುವ ಮರಳು ಯಾರ ಪಾಲಾಗುತ್ತದೆ ಎನ್ನುವುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿಯೇ ಉಳಿದಿದೆ. ಶಾಸಕ ಹಾಲಪ್ಪ ಆಚಾರ್‌ ಅವರು ಈಗ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದು, ಇದಕ್ಕೆ ಪರಿಹಾರ ಸಿಕ್ಕೀತೆ ಎನ್ನುವ ಪ್ರಶ್ನೆ ಸಹಜವಾಗಿಯೇ ಎದ್ದಿದೆ.

ಮರಳು ದಂಧೆ ಕೊಪ್ಪಳದಿಂದ ಬೆಂಗಳೂರು ವರೆಗೂ ವಿಸ್ತರಣೆಯಾಗಿದೆ. ಜಿಲ್ಲೆಯ ಮರಳು ಸುತ್ತಮುತ್ತಲ ಜಿಲ್ಲೆ ಅಷ್ಟೇ ಅಲ್ಲ, ದೂರದ ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಿಗೂ ಅಕ್ರಮವಾಗಿ ಸಾಗಾಟವಾಗುತ್ತದೆ. ದುರಂತ ಎಂದರೆ ಸಾಮಾನ್ಯರು ಮನೆ ಕಟ್ಟಿಕೊಳ್ಳಲು ಮರಳು ದೊರೆಯುವುದೇ ದುರ್ಲಭ ಎನ್ನುವಂತೆ ಆಗಿದೆ. ಇನ್ನು ಆಶ್ರಯ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ ಎನ್ನುತ್ತಾರೆ.

ಹಳ್ಳಕೊಳ್ಳಗಳು ಶ್ರೀಮಂತರ ಸ್ವತ್ತು

ಹಳ್ಳಕೊಳ್ಳಗಳು ಶ್ರೀಮಂತರ ಸ್ವತ್ತು ಎನ್ನುವಂತೆ ಆಗಿದೆ. ಮರಳು ದಂಧೆಯಲ್ಲಿ ತೊಡಗಿದ ದೊಡ್ಡ ದೊಡ್ಡ ಕುಳಗಳು ಹಳ್ಳ-ಕೊಳ್ಳಗಳನ್ನು ತಮ್ಮ ಜಹಗೀರು ಎನ್ನುವಂತೆ ವರ್ತಿಸುತ್ತಾರೆ. ಇಂಥ ಹಳ್ಳ-ಕೊಳ್ಳಗಳಲ್ಲಿ ಮರಳು ದಂಧೆಯನ್ನು ರಾತ್ರೋರಾತ್ರಿ ನಡೆಸುವ ವೇಳೆಯಲ್ಲಿ ಅದೆಷ್ಟೋ ಕಾರ್ಮಿಕರು ಹೂತು ಹೋಗಿದ್ದಾರೆ. ಮರಳಿನಲ್ಲಿ ಹೂತು ಮೃತಪಟ್ಟಕಾರ್ಮಿಕನ ಹೆಣವನ್ನು ಗದಗ ಜಿಲ್ಲೆಯ ಅಡವಿಸೋಮಾಪುರಕ್ಕೆ ಚೀಲದಲ್ಲಿ ತುಂಬಿ, ಟ್ರ್ಯಾಕ್ಟರಿನಲ್ಲಿ ಮರಳು ಮಧ್ಯೆ ಹಾಕಿಕೊಂಡು ಸಾಗಿಸಿದ ಘಟನೆಯೇ ಎಲ್ಲವನ್ನು ಸಾರಿ ಸಾರಿ ಹೇಳುತ್ತದೆ. ಪೊಲೀಸರು ಬಯಲು ಮಾಡಿದ್ದರಿಂದ ಅದು ಗೊತ್ತಾಯಿತು. ಇಂಥ ಅದೆಷ್ಟೋ ಘಟನೆಗಳು ಮರಳಿನಲ್ಲಿ ಹೂತು ಹೋಗಿವೆ. ಇಂಥದ್ದಕ್ಕೆಲ್ಲಾ ಕಡಿವಾಣ ಹಾಕಬೇಕು. ಇದು ನಿಲ್ಲಬೇಕು ಎಂದರೆ ರಾತ್ರಿಯ ವೇಳೆಯಲ್ಲಿ ಮರಳು ಸಾಗಿಸುವುದು ಹಾಗೂ ತೆಗೆಯುವುದಕ್ಕೆ ಕಡಿವಾಣ ಹಾಕಬೇಕು.ಸಕ್ರಮ ಮರಳು ಸಾಗಾಟ ಮಾಡುವವರು ಕೇವಲ ಹಗಲು ವೇಳೆಯಲ್ಲಿ ಮಾತ್ರ ಮಾಡುವಂತಾಗಬೇಕು. ಇಲ್ಲದಿದ್ದರೆ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತೆ ಆಗುತ್ತದೆ.

ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

ಯಾರ ಪಾಲಾಗುತ್ತದೆ?

ಅಕ್ರಮ ಮರಳನ್ನು ಆಗಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡುತ್ತಾರೆ. ಆದರೆ, ಹೀಗೆ ಜಪ್ತಿ ಮಾಡಿದ ಮರಳು ಮಾತ್ರ ಯಾರ ಪಾಲಾಗುತ್ತದೆ ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಇದುವರೆಗೂ ಜಪ್ತಿಯಾಗಿರುವ ಮರಳು ಎಷ್ಟು? ಅದನ್ನು ಯಾರಿಗೆ ಕೊಡಲಾಗಿದೆ? ಅದರಿಂದ ಬಂದಿರುವ ಆದಾಯ ಎಷ್ಟು? ಇದನ್ನು ಸಾರ್ವಜನಿಕರಿಗೆ ತಿಳಿಸುವಂತಾಗಬೇಕು.

ಅನ್ಯ ಜಿಲ್ಲೆಯ ಪಾಲು

ಜಿಲ್ಲೆಯಲ್ಲಿ ಸಾಮಾನ್ಯರು ಮರಳಿಗಾಗಿ ಪರದಾಡುತ್ತಿದ್ದಾರೆ. ಆದರೆ, ಯಾರಿಗೂ ಹಿಡಿ ಮರಳು ಸಿಗುವುದಿಲ್ಲ. ಸಿಕ್ಕರೂ ದುಬಾರಿ ಬೆಲೆ ತೆರಬೇಕು. ಆದರೆ, ಜಿಲ್ಲೆಯ ಮರಳು ಮಾತ್ರ ಅನ್ಯ ಜಿಲ್ಲೆಯಲ್ಲಿ ಹೇರಳವಾಗಿ ದೊರೆಯುತ್ತಿದೆ. ಪಕ್ಕದ ಜಿಲ್ಲೆಗಳಿಂದ ಹಿಡಿದು ಬೆಂಗಳೂರು ವರೆಗೂ ಕೊಪ್ಪಳ ಮರಳು ಸಾಗಾಟವಾಗುತ್ತದೆ. ಇದಕ್ಕೆ ಕಡಿವಾಣ ಹಾಕಿ, ಸ್ಥಳೀಯರಿಗೆ ಮರಳು ದೊರೆಯುವಂತಾಗಬೇಕು. ಹಳ್ಳ-ಕೊಳ್ಳಗಳನ್ನು ಸಂರಕ್ಷಣೆ ಮಾಡಬೇಕಾಗಿದೆ.

ಬರಲಿ ನೀತಿ

ಮರಳು ಸಾಮಾನ್ಯರಿಗೂ ದೊರೆಯವಂತಾಗಬೇಕು ಎನ್ನುವ ದಿಸೆಯಲ್ಲಿ ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾಗಿದ್ದ ಮರುಗೇಶ ನಿರಾಣಿ ಅವರು ಮರಳು ನೀತಿಯನ್ನು ರೂಪಿಸಿದ್ದರು. ಆದರೆ, ಅದು ಜಾರಿಯಾಗಲೇ ಇಲ್ಲ. ಅಕ್ರಮಕ್ಕೆ ಕಡಿವಾಣ ಬೀಳಬೇಕು. ಸಾಮಾನ್ಯರಿಗೆ ಮರಳು ಸುಲಭವಾಗಿ ದೊರೆಯುವಂತೆ ಆಗಬೇಕು. ಹಾದಿ, ಬೀದಿಯುದಕ್ಕೂ ನಿಂತು ಅಕ್ರಮ ತಡೆಯುವ ಬದಲು ದಂಧೆಗಿಳಿಯುವ ಆಡಳಿತ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಸರ್ಕಾರಕ್ಕೂ ಆದಾಯ ಬರುವಂತೆ ಆಗಬೇಕು. ಮನೆ ನಿರ್ಮಾಣ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರಳು ಎಷ್ಟುಎನ್ನುವ ಲೆಕ್ಕಾಚಾರದೊಂದಿಗೆ ರಾಜಸ್ವ ಪಾವತಿ ಮಾಡುವಂತೆ ಆಗಬೇಕು. ಆಗ ಸರ್ಕಾರಕ್ಕೂ ಆದಾಯ ಬರುತ್ತದೆ ಮತ್ತು ದಾರಿಯುದ್ದಕ್ಕೂ ವಸೂಲಿ ನಿಲ್ಲುತ್ತದೆ.

ಮರಳು ದಂಧೆಯ ಬಗ್ಗೆ ನನಗೂ ಮಾಹಿತಿ ಇದೆ. ನಾನು ಈಗ ತಾನೆ ಈ ಖಾತೆಯನ್ನು ವಹಿಸಿಕೊಂಡಿದ್ದೇನೆ. ಖಂಡಿತವಾಗಿಯೂ ಸಾಮಾನ್ಯರಿಗೂ ಸುಲಭವಾಗಿ ಮರಳು ದೊರೆಯುವಂತೆ ಮಾಡುವ ದಿಸೆಯಲ್ಲಿ ಮರಳು ನೀತಿಯನ್ನು ರೂಪಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios