ಭೂಸೇನಾ ನಿಮಗದಿಂದ ಕಾಂಗ್ರೆಸ್‌ ಅವಧಿಯಲ್ಲಿ 100 ಕೋಟಿ ಲೂಟಿ: ಸಚಿವ ಆಚಾರ್‌

*  ನೀರಾವರಿಗೆ ಕಾಂಗ್ರೆಸ್‌ ಸರ್ಕಾರ ನಯಾಪೈಸೆ ನೀಡಿಲ್ಲ
*  ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಿದ ಯಡಿಯೂರಪ್ಪ 
*  ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸಚಿವ ಆಚಾರ್‌ 

Minister Halappa Achar Slams Congress grg

ಯಲಬುರ್ಗಾ(ಸೆ.13): ಹಿಂದಿನ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಭೂಸೇನಾ ನಿಗಮ ವತಿಯಿಂದ ತಾಲೂಕಿನ ಅಭಿವೃದ್ಧಿ ಹೆಸರಿನಲ್ಲಿ 100 ಕೋಟಿಯಷ್ಟು ಲೂಟಿ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಆರೋಪಿಸಿದ್ದಾರೆ. 

ತಾಲೂಕಿನ ಗುತ್ತೂರು, ಚಿಕ್ಕಮ್ಯಾಗೇರಿ, ಮಲಕಸಮುದ್ರ ಗ್ರಾಮಗಳಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಂದಿನ ಕಾಂಗ್ರೆಸ್‌ ಸರ್ಕಾರ ನೀರಾವರಿ ಯೋಜನೆಗೆ ನೈಯಾಪೈಸೆ ಕೂಡ ನೀಡಲಿಲ್ಲ. ಇದೀಗ ನೀರಾವರಿ ಯೋಜನೆಗೆ ನಾನೇ ಹಣ ಮಂಜೂರು ಮಾಡಿಸಿದ್ದೇನೆಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದರು.

ಕೊಪ್ಪಳ ಏತನೀರಾವರಿ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಹತ್ತಿರ ಶಾಸಕನಾಗಿ ಮನವಿ ಮಾಡಿಕೊಂಡಾಗ ಬಜೆಟ್‌ನಲ್ಲಿ ಹಣ ನೀಡಿದ್ದಾರೆ. ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪನವರು ಸಾಕಷ್ಟು ಅನುದಾನವನ್ನು ನೀರಾವರಿ ಯೋಜನೆಗೆ ನೀಡಿದ್ದಾರೆ. ಅವರಿಬ್ಬರನ್ನು ಸ್ಮರಿಸುತ್ತೇನೆ. ಆದರೆ ಅಧಿಕಾರವಿದ್ದಾಗ ಏನು ಮಾಡದವರು ಇದೀಗ ನೀರಾವರಿ ಯೋಜನೆಗೆ ನಾನೇ ಹಣ ಬಿಡುಗಡೆ ಮಾಡಿಸಿದ್ದೇನೆಂದು ಬಡಾಯಿ ಕೊಚ್ಚಿಕೊಳ್ಳುವ ಮಾಜಿ ಸಚಿವರು ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಮಾತನಾಡುವುದನ್ನು ಕಲಿತುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮೈಸೂರು ಗ್ಯಾಂಗ್‌ರೇಪ್‌: ನನ್ನ ಇಲಾಖೆಯಿಂದ ಎಲ್ಲ ಕೆಲಸ ಆಗಿದೆ, ಸಚಿವ ಆಚಾರ್‌

ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬ ರೈತರು ಸ್ವಾಭಿಮಾನದ ಬದುಕುನ್ನು ಕಟ್ಟಿಕೊಳ್ಳಬೇಕೆಂಬ ದೂರದೃಷ್ಟಿಯಿಂದ ಪ್ರತಿ ವರ್ಷ ರೈತರ ಖಾತೆಗೆ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ಸೇರಿ 10 ಸಾವಿರ ನೀಡುವ ಯಾವುದಾದರೂ ಸರ್ಕಾರವಾಗಿದ್ದರೆ ಅದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವಾಗಿದೆ ಎಂದ ಅವರು, ತಾಲೂಕಿನ ಚಿಕ್ಕಮ್ಯಾಗೇರಿ ಹಾಗೂ ಕುಡಗುಂಟಿ ಗ್ರಾಮದ ಹತ್ತಿರವಿರುವ ಹಳ್ಳಕ್ಕೆ 2 ಕೋಟಿ ವೆಚ್ಚದಲ್ಲಿ ಬ್ರೀಜ್‌ ಕಮ್‌ ಬ್ಯಾರೇಜ್‌ ಮತ್ತು ಮಲಕಸಮುದ್ರ ಗ್ರಾಮದಿಂದ ಕೆರೆ ವರೆಗೆ ಡಾಂಬರೀಕರಣ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಶರಣಪ್ಪ ದಿವಾನರ, ಕೆಂಚವ್ವ ಹಿರೇಮನಿ, ಉಪಾಧ್ಯಕ್ಷ ಬಸವರಾಜ ರಾರ‍ಯವಣಕಿ, ಶರಣಪ್ಪ ಕುರಿ, ತಹಸೀಲ್ದಾರ್‌ ಶ್ರೀಶೈಲ್‌ ತಳವಾರ, ವಿವಿಧ ಇಲಾಖೆ ಅಧಿಕಾರಿಗಳಾದ ಪಿ. ಹೇಮಂತರಾಜ್‌, ಬಿ. ಮೌನೇಶ, ಮಹಾದೇವಪ್ಪ, ಸಿಪಿಐ ಎಂ. ನಾಗರಡ್ಡಿ, ಬಿಜೆಪಿ ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸಿ.ಎಚ್‌. ಪಾಟೀಲ, ಶಿವಶಂಕರರಾವ್‌ ದೇಸಾಯಿ, ಕಳಕಪ್ಪ ಕಂಬಳಿ, ರತನ್‌ ದೇಸಾಯಿ, ಅರವಿಂದಗೌಡ ಪಾಟೀಲ, ಬಸನಗೌಡ ತೊಂಡಿಹಾಳ, ಎಸ್‌. ನಾಗಲಾಪುರಮಠ, ಶಂಭು ಜೋಳದ, ಸುಧಾಕರ ದೇಸಾಯಿ, ಎಸ್‌.ಎನ್‌. ಶ್ಯಾಗೋಟಿ, ಸಾವಿತ್ರಿ ಗೊಲ್ಲರ್‌, ಶರಣು ಅಮರಗಟ್ಟಿ, ಶಂಕರಗೌಡ, ಕಲ್ಲೇಶ ಕರಮುಡಿ, ಸುರೇಶ ಹೊಸಳ್ಳಿ, ವೆಂಕಟೇಶ ಗಾದಿ, ಪ್ರಭುರಾಜ ಕಲಬುರ್ಗಿ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.
 

Latest Videos
Follow Us:
Download App:
  • android
  • ios