ದಾವಣಗೆರೆ:(ಸೆ.25) ಬಿಜೆಪಿಗೆ ನೆರೆ ಸಂತ್ರಸ್ತರ ಶಾಪ ತಟ್ಟುತ್ತದೆ ಎನ್ನುವ ಮಾಜಿ ಸಚಿವ  ಎಂ.ಬಿ.ಪಾಟೀಲರು ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡಿರುವ ಶಾಪ ಏಳೇಳು ಜನ್ಮಕ್ಕೂ ವಿಮೋಚನೆಯಾಗದು ಎಂಬುದನ್ನು ಅರಿಯಲಿ. ಹೀಗೆಲ್ಲಾ ಮಾತ ನಾಡಿದಪಕ್ಷದವರು ತಮ್ಮದೇ ಕ್ಷೇತ್ರದಲ್ಲಿ ಗೆಲ್ಲಲಾಗದೇ ಮತ್ತೊಂದು ಕ್ಷೇತ್ರದಲ್ಲಿ ಪರದಾಡಿ ಗೆದ್ದಿರುವುದನ್ನು ಮರೆಯಬಾರದು ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಟಾಂಗ್ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರಸ್ ವಿಧಾನಸಭೆಯಲ್ಲಿ ಸೋತಿದ್ದು ಏಕೆಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಕಾಂಗ್ರೆಸ್-ಜೆಡಿಎಸ್ ತಿಪ್ಪರಲಾಗ ಹಾಕಿದರೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ನರೇಂದ್ರ ಮೋದಿಯಂತಹ ವಿಶ್ವ ನಾಯಕ, ಪಕ್ಷ ಅಧಿಕಾರದಲ್ಲಿರುವುದರಿಂದ ನಮಗೇಕೆ ಭಯ ಎಂದರು.  ನಮ್ಮ ಪಕ್ಷದಲ್ಲಿ ಅಸ್ಪಶ್ಯತೆ ಇಲ್ಲ. ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಅಥವಾ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ತತ್ವ, ಸಿದ್ಧಾಂತಗಳನ್ನು ಒಪ್ಪಿದರೆ ನಮ್ಮ ಪಕ್ಷಕ್ಕೆ ಬರಲಿ ಎಂದರು. 

ಮೈಸೂರು ಸಂಸ್ಕೃತಿಗೆ ತಕ್ಕ ಪದಗಳಲ್ಲ

ಜೆಡಿಎಸ್‌ನ ಮಾಜಿ ಸಚಿವ ಸಾ.ರಾ.ಮಹೇಶ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ವಾಕ್ಸಮರ, ಟೀಕೆ-ಪ್ರತಿ ಟೀಕೆ ವೇಳೆ ಇಬ್ಬರೂ ಬಳಸಿರುವ ಪದಗಳು ಮೈಸೂರು  ಸಂಸ್ಕೃತಿಗೆ ತಕ್ಕ ದ್ದಲ್ಲ. ಸಭ್ಯತೆಗೆ ತಕ್ಕ ಭಾಷೆ ಬಳಸಿಲ್ಲ ಎಂದು ಸಚಿವ ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು. ಸಾ.ರಾ.ಮಹೇಶ್, ಎಚ್.ವಿಶ್ವನಾಥ ಇಬ್ಬರೂ ದೊಡ್ಡವರು. ಇನ್ನಾದರೂ ಮಾತನಾಡುವಾಗ ಮೈಸೂರು ಸಂಸ್ಕೃತಿ, ಸಭ್ಯತೆಗೆ ತಕ್ಕ ಭಾಷೆಯಲ್ಲಿ ಮಾತನಾಡುವುದು ಸೂಕ್ತ ಎಂದರು.

ನೆರೆ ನೆಪದ ಹೋರಾಟ:

ಮಾಜಿ ಸಿಎಂ ಸಿದ್ದರಾಮಯ್ಯಗೆ ದೇವರು ಎಲ್ಲಾ ಸಾಮರ್ಥ್ಯ ಕೊಟ್ಟಿದ್ದು, ನೆರೆ ಪೀಡಿತ ಹತ್ತು ಗ್ರಾಮಗಳನ್ನು ಕಾಂಗ್ರೆಸ್ ಅವರು ದತ್ತು ಪಡೆಯಲಿ. ಬಿಜೆಪಿಯೂ 15  ಗ್ರಾಮ ದತ್ತು ಪಡೆಯುತ್ತದೆ. ಜೆಡಿಎಸ್ ಸುಮ್ಮನಿರದೇ ಕನಿಷ್ಠ 5 ಗ್ರಾಮ ದತ್ತು ತೆಗೆದುಕೊಳ್ಳಲೆಂದು ಹೇಳಿದ್ದೆ. ಇದು ಸಕಾರಾತ್ಮಕ ಸಂದೇಶ ಹೋಗುತ್ತೆಂದು ಕೊಂಡಿದ್ದೆ. ಕಾಂಗ್ರೆಸ್ಸಿನವರಿಗೆ ಪ್ರತಿಭಟನೆಯೇ ಪಾಸಿಟಿವ್ ಲೀಡರ್ ಶಿಪ್ ಅಂತಾದರೆ ನಾವೇನೂ ಮಾಡೋಕಾಗಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ, ಪುನರ್ವಸತಿ ಕಲ್ಪಿಸುವ ಕೆಲಸವನ್ನು ತಮ್ಮ ಸರ್ಕಾರ ಮಾಡುತ್ತಿದೆ. ಹಿಂದೆ ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗದವರು ಈಗ ನೆರೆ ವಿಚಾರದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ ಎಂದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿದರು. 

ರಾಜ್ಯದಲ್ಲಿ ಸುಸ್ಥಿರ ಪ್ರವಾಸಿ ನೀತಿಗೆ ಚಿಂತನೆ

ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.81 ರಷ್ಟು ಹುದ್ದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.61  ರಷ್ಟು ಹುದ್ದೆಗಳ ಕೊರತೆ ಇದ್ದರೂ ಎದೆಗುಂದದೇ, ಎರಡೂ ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಾಗಿ ಉಭಯ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು. ಗುತ್ತಿಗೆ ಆದಾರ, ನಿಯೋ ಜನೆ ಮೇಲೆ ಬಂದ ವರೇ ತಮ್ಮ ಇಲಾಖೆ ಗಳಲ್ಲಿ ಹೆಚ್ಚಾಗಿದ್ದಾರೆ. ಸಿಬ್ಬಂದಿ ಕೊರತೆ ನೆಪ ಮಾಡಿ ಕೈಕಟ್ಟಿ ಕೂಡುವುದಿಲ್ಲ ಎಂದರು. 

ಪ್ರವಾಸಿ ತಾಣ ಅಭಿವೃದ್ಧಿ

ದಾವಣಗೆರೆ ಗಾಜಿನ ಮನೆ, ಸೂಳೆಕೆರೆ, ಸಂತೇ ಬೆನ್ನೂರು ಪುಷ್ಕರಣಿ, ಹರಿಹರೇಶ್ವರ ದೇಗುಲ, ಡಜ್ಜಿ ಕೆರೆ, ಜೋಳ ದಾಳ್, ಹೊದಿಗೆರೆಯ ಷಹಾಜಿ ಬೋಂಸ್ಲೆ ಸಮಾಧಿ, ಯಕೊಂಡದ ಮದಕರಿ ನಾಯಕರ ಸಮಾಧಿ ಹೀಗೆ 25  ಪ್ರವಾಸಿ ತಾಣಗಳನ್ನು ಗುರುತಿಸಿದ್ದು, ವಾರ್ಷಿಕ ಸರಾಸರಿ ೨೫ ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 136  ಮಂದಿ ವಿದೇಶೀಯರೂ ಭೇಟಿ ನೀಡಿದ್ದು, ಈ ಜಿಲ್ಲೆಯನ್ನುಪ್ರವಾಸಿ ತಾಣವಾಗಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯಕ್ಕೆ ಪ್ರವಾಸಿಗಳನ್ನು ಸೆಳೆಯಲು ಒಂದು ರಾಜ್ಯ, ಹಲವು ಜಗತ್ತು ಘೋಷವಾಕ್ಯದಡಿ ಪ್ರವಾಸಿಗರನ್ನು ಆಹ್ವಾನಿಸುತ್ತಿದ್ದೇವೆ. 360  ಕಡಲ ಕಿನಾರೆ, ಹಂಪಿ, ಪಟ್ಟದಕಲ್ಲು- ಬಾದಾಮಿ, ಪಶ್ಚಿಮ ಘಟ್ಟ, ೪೦ ಜಲಪಾತಗಳಿವೆ ಎಂದ ಅವರು, ಸಚಿವರಾಗಿ 28 ದಿನ ಕಳೆದಿದ್ದು, ಇದು ೯ನೇ ಜಿಲ್ಲಾ ಮಟ್ಟದ ಸಭೆ. ಪ್ರವಾಸೋದ್ಯಮ ಇಲಾಖೆಯನ್ನು ಜನಸ್ನೇಹಿ ಮಾಡುವೆ. ಸುಸ್ಥಿರ ಪ್ರವಾಸಿ ನೀತಿಯನ್ನು ತರಲು ಯೋಜನೆ ರೂಪಿಸುತ್ತಿದ್ದೇನೆ ಎಂದರು.