*  ಉದ್ಯಮಿಗಳೊಂದಿಗೆ ಸಭೆ ನಡೆಸಿದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ *  ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮ*  ಹೊರೆಯಾಗದ ಸುಸ್ಥಿರ ಉದ್ದಿಮೆಗಳ ಸ್ಥಾಪನೆಗೆ ಮುಂದಾಗಬೇಕು 

ಕಲಬುರಗಿ(ಆ.24): ಈಗ ಕೃಷಿಯಲ್ಲೂ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಾಗಿದೆ. ಹೀಗಾಗಿ ಉದ್ಯಮಶೀಲರು ಈ ಡಿಜಿಟಲ್ ತಾಂತ್ರಿಕತೆ ಬಳಸಿಕೊಂಡು ಕೃಷಿ ಪದ್ಧತಿಯಲ್ಲಿ ಸುಧಾರಣೆ ಉಂಟುಮಾಡುವ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಮಾಡುವ ಬಗ್ಗೆ ಆಲೋಚಿಸಬೇಕು ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಇಂದು(ಮಂಗಳವಾರ) ನಗರದಲ್ಲಿ ಒಂದು ದಿನದ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಸರ್ಕಾರ ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮದ ಮೂಲಕ ಬೆಂಗಳೂರಿಗೆ ಹೊರತಾದ ಪ್ರದೇಶಗಳಲ್ಲಿಯೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.

ಉದ್ಯಮಗಳಿಗೆ ಬೇಕಾದ ಭೂಮಿ, ಅನುಮತಿ, ಪರವಾನಗಿ ಇತ್ಯಾದಿಯನ್ನು ಲಭ್ಯವಾಗಿಸಲು ಸರ್ಕಾರ ಸರಳವಾದ ನೀತಿಯನ್ನು ಜಾರಿಗೊಳಿಸಿದೆ. ಉದ್ಯಮಿಗಳ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಲು ಪೂರಕ ತರಬೇತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಜೊತೆಗೆ, ಶೈಕ್ಷಣಿಕ ಸಂಸ್ಥೆಗಳು, ಉದ್ದಿಮೆಗಳು ಹಾಗೂ ಸಂಶೋಧಕರನ್ನು ಸಂಯೋಜಿಸುವ ಕಾರ್ಯಕ್ಕೆ ಒತ್ತು ನೀಡಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು. 

2022-23ರಿಂದ ಕನ್ನಡದಲ್ಲಿ ವೃತ್ತಿ ಶಿಕ್ಷಣ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರಿಗೆ ಹೊರತಾದ ಭಾಗದವರು ಕೂಡ ಇಂದು ಉದ್ಯಮಿಗಳಾಗಿ ಗಮನ ಸೆಳೆದಿದ್ದಾರೆ. ಇಂಥವರ ಯಶಸ್ಸಿನ ಕಥನಗಳು ಉದ್ಯಮಶೀಲರಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಬೇಕು. ಉದ್ಯಮಕ್ಕೆ ಮುಂದಾಗುವವರು ಯಾವ ಜಾಗ ಹಾಗೂ ಯಾವ ಸನ್ನಿವೇಶಕ್ಕೆ ಯಾವ ಉದ್ಯಮ ಸೂಕ್ತ ಎಂಬುದನ್ನು ಗುರುತಿಸಿಕೊಳ್ಳುವ ಜೊತೆಗೆ ಮಾರುಕಟ್ಟೆಯ ಬೇಡಿಕೆ-ಪೂರೈಕೆ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಪರಿಸರಕ್ಕೆ ಹೊರೆಯಾಗದ ಸುಸ್ಥಿರ ಉದ್ದಿಮೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. 

ಒಳ್ಳೆಯ ಉದ್ಯಮಿಗಳನ್ನು ಬೆಳೆಸಲು ಉತ್ತಮ ಶಿಕ್ಷಣವೇ ಅಡಿಪಾಯ. ಹೀಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೊಳಿಸುವ ರಾಷ್ಟ್ರೀಯ ಶಿಕ್ಷಣ ನೀತಿಯು ಪೂರಕವಾಗಿದೆ. ಈ ನೀತಿಯು ವಿದ್ಯಾರ್ಥಿ ಹಂತದಲ್ಲೇ ಕೌಶಲಾಭಿವೃದ್ಧಿಗೆ ಗಮನ ನೀಡಿ ಉದ್ಯಮಿಗಳನ್ನು ರೂಪಿಸಲು ನೆರವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು. 

ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಷಿ, ಬಿ.ಜಿ.ಪಾಟೀಲ್, ಉಮಾಶಂಕರ್ ಗುಲ್ಬರ್ಗ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿಗಿ ಇದ್ದರು.