ಆಫೀಸ್ ನಲ್ಲಿ ಕೂತು ಸಮೀಕ್ಷೆ ಮಾಡೋದಲ್ಲ: ಅಧಿಕಾರಿಗಳಿಗೆ ಸಚಿವ ಸಿಸಿ ಪಾಟೀಲ್ ಕ್ಲಾಸ್
ಮಳೆ ಹಾನಿ ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಅಧಿಕಾರಿಳು ಕಾರಿನ ಬಳಿ ನಿಂತಿರುವುದಕ್ಕೆ ಸಚಿವ ಸಿಸಿ ಪಾಟೀಲ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗದಗ, (ಸೆಪ್ಟೆಂಬರ್.09): ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಹಾನಿ ಸಮೀಕ್ಷೆಗೆ ಹೊಂಬಳ ಗ್ರಾಮಕ್ಕೆ ಶುಕ್ರವಾರ ತೆರಳಿದ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಸಚಿವರ ಜತೆ ಇರದೇ ಕಾರಿನ ಬಳಿ ಇದ್ದದ್ದನ್ನು ಕಂಡು ಸಚಿವರು ಕೆಂಡಾಮಂಡಲರಾದರು.
ಸಚಿವರು ಸಿಟ್ಟಾಗುತ್ತಿದ್ದಂತೆ ಓಡೋಡಿ ಬಂದ ಕೃಷಿ ಅಧಿಕಾರಿಗೆ "ಆಫೀಸ್ ರೂಮ್ ನಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡುವುದಲ್ಲ. ಸೂಕ್ತರೀತಿಯಲ್ಲಿ ಸಮೀಕ್ಷೆ ನಡೆಯಬೇಕು ಮತ್ತು ಜನರ ನೋವನ್ನು ತಾಳ್ಮೆಯಿಂದ ಕೇಳಬೇಕು" ಎಂದು ಎಚ್ಚರಿಸಿದರು.
Karnataka Rains: ಬೆಳಿ ನೀರುಪಾಲಾಗೇತ್ರಿ, ನಿರೀಕ್ಷೆ ನುಚ್ಚುನೂರಾಗೇತ್ರಿ, ರೈತರ ಗೋಳು ಕೇಳೋರೇ ಇಲ್ಲ..!
ರೈತ ಮಹಿಳೆ ಕಣ್ಣೀರು
ಎನ್ ಮಾಡ್ಬೇಕು ಹೇಳ್ರಿ. ಹೊಲದ ಮಣ್ಣೆಲ್ಲ ಕೊಚ್ಚಿಕೊಂಡು ಹೋಗೈತ್ರಿ. ಮಣ್ಣು ಎಲ್ಲಿಂದ ತಂದು ಹಾಕಬೇಕ್ರಿ" ಎಂದು ರೈತ ಮಹಿಳೆ ಸುಮಿತ್ರಾ ಸಚಿವ ಸಿಸಿ ಪಾಟೀಲ ಎದುರು ಗಳಗಳನೇ ಕಣ್ಣೀರಿಟ್ಟರು. 8 ಎಕರೆ ಹೊಂದಿರುವ ಸುಮಿತ್ರಾ ಅವರ ಹೊಲ ಹಳ್ಳದ ಪಕ್ಕದಲ್ಲೇ ಇದೆ. ಮಳೆಯಿಂದ ಹಳ್ಳ ಕೋಡಿ ಬಿದ್ದು ಸಂಪೂರ್ಣ ಹೊಲದ ಮಣ್ಣು ಕೊಚ್ಚಿಹೋಗಿದೆ. ಈ ಹಿನ್ನೆಲೆ ರೈತ ಮಹಿಳೆ ಸುಮಿತ್ರಾ ಸಚಿವರ ಬಳಿ ನೋವು ತೋಡಿಕೊಂಡಳು. ಮಹಿಳೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಅಕ್ರಮ ಕಟ್ಟಡ ತೆರವಿಗೆ ಗ್ರಾಮಸ್ಥರ ಆಗ್ರಹ
ಗ್ರಾಮದ ನೀರು ಹರಿದು ಹಳ್ಳಕ್ಕೆ ಸೇರುವ ಮಾರ್ಗದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಹುಸೇನ್ ಸಾಬ್ ಹಾದಿಮನಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರಿಂದ ನೀರು ಮನೆಗಳಿಗೆ ನುಗ್ಗುತ್ತಿದೆ. ಅಕ್ರಮ ಕಟ್ಟಡ ವನ್ನು ತೆರವುಗೊಳಿಸಬೇಕು ಎಂದು ಹೊಂಬಳ ಗ್ರಾಮಸ್ಥರಿಂದ ಸಚಿವ ಸಿ.ಸಿ.ಪಾಟೀಲರಿಗೆ ಆಗ್ರಹಿಸಲಾಯಿತು.
ಅದ್ಯಕ್ಷಾವಧಿಯಲ್ಲಿ ಹುಸೇನ್ ಸಾಬ್ ಹಾದಿಮನಿ ಅಕ್ರಮ ಕಟ್ಟಡ ನಿರ್ಮಿಸಿದ್ದಾನೆ. ಹೀಗಾಗಿ ಗ್ರಾಮದಲ್ಲಿ ಬಿದ್ದ ನೀರು ಹಳ್ಳಕ್ಕೆ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ ಎಂದು ಆರೋಪಿಸಿದರು. ಸ್ಥಳದಲ್ಲೇ ಪಿಡಿಓ ಅವರನ್ನು ಕರೆಸಿದ ಸಚಿವರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಜನರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.