Asianet Suvarna News Asianet Suvarna News

‘ಸಕ್ಕರೆ ಕಾರ್ಖಾನೆಗಳು 37 ಕೋಟಿ 69 ಲಕ್ಷ ಹಣ ಬಾಕಿ ಉಳಿಸಿಕೊಂಡಿವೆ’

ರಾಜ್ಯದ 8 ಸಕ್ಕರೆ ಕಾರ್ಖಾನೆಗಳು 37 ಕೋಟಿ 69 ಲಕ್ಷ ಹಣ ಬಾಕಿ ಉಳಿಸಿಕೊಂಡಿವೆ ಎಂದ  ಸಿ‌.ಟಿ.ರವಿ|ಕಬ್ಬು ಅರಿಯುವ ಮುನ್ನ ಬಾಕಿ ಪಾವತಿಸುವಂತೆ ನೋಡಿಕೊಳ್ಳಲು‌ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ‌ ಕೊಟ್ಟಿದ್ದೇನೆ| ಇಂದು ಸಕ್ಕರೆ ಕಾರ್ಖಾನೆ ಮಾಲೀಕರು, ಇಲಾಖೆಯ ‌ನಿರ್ದೇಶಕರ ಜೊತೆ ಸಭೆ ನಡೆಸಲಿದ್ದೇನೆ|

Minister C T Ravi Talks Over Sugar Factory Pending Money
Author
Bengaluru, First Published Dec 20, 2019, 10:20 AM IST

ಬೆಳಗಾವಿ[ಡಿ.20]: ರಾಜ್ಯದ 8 ಸಕ್ಕರೆ ಕಾರ್ಖಾನೆಗಳು 37 ಕೋಟಿ 69 ಲಕ್ಷ ಹಣ ಬಾಕಿ ಉಳಿಸಿಕೊಂಡಿವೆ ಎಂದು ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ‌.ಟಿ.ರವಿ ಅವರು ತಿಳಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬ್ಬು ಅರಿಯುವ ಮುನ್ನ ಬಾಕಿ ಪಾವತಿಸುವಂತೆ ನೋಡಿಕೊಳ್ಳಲು‌ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ‌ ಕೊಟ್ಟಿದ್ದೇನೆ. ಇಂದು ಸಕ್ಕರೆ ಕಾರ್ಖಾನೆ ಮಾಲೀಕರು, ಇಲಾಖೆಯ ‌ನಿರ್ದೇಶಕರ ಜೊತೆ ಸಭೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದ 69 ಸಕ್ಕರೆ ಕಾರ್ಖಾನೆಗಳಲ್ಲಿ 61 ಸಕ್ಕರೆ ಕಾರ್ಖಾನೆಗಳು ಕಬ್ಬು ಅರಿಯುವ ಕೆಲಸ ಆರಂಭಿಸಿವೆ. ಎಫ್‌ಆರ್‌ಪಿ ಪ್ರಕಾರ ಕಾರ್ಖಾನೆಗಳು 11,948 ಕೋಟಿ ಹಣ ಪಾವತಿಸಬೇಕಾಗಿತ್ತು. ಕೆಲ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚಿಗೆ ಹಣ ಕೊಟ್ಟಿದ್ದು 12,055 ಕೋಟಿ ಹಣ ಪಾವತಿಯಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಆಟೋಮೆಟೆಡ್ ಶುಗರ್ ಡಿಟೇಕ್ಟಿವ್ ಮಷಿನ್ ಅಳವಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅತಿವೃಷ್ಟಿಯಿಂದಾಗಿ 66 ಲಕ್ಷ ಟನ್ ಕಬ್ಬು ಇಳುವರಿ ಕಡಿಮೆ ಆಗುವ ನಿರೀಕ್ಷೆಯಿದೆ. ಫಸಲ್ ಭೀಮಾ ವ್ಯಾಪ್ತಿಗೆ ಕಬ್ಬು ಬೆಳೆ ಸೇರಿಸುವ ಕುರಿತು ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಬ್ಬು, ಕಾಫಿ ಸೇರಿ ವಾಣಿಜ್ಯ ಬೆಳೆಗಳು ಫಸಲ್ ಭೀಮಾ ವ್ಯಾಪ್ತಿಗೆ ಸೇರಿಸುವ ಬಗ್ಗೆಯೂ ಚರ್ಚೆಯಾಗಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ಪ್ರಕಾರ ಹಣ ಪಾವತಿಸಿ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಸಿ‌.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ಗಲಭೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸತ್ಯ ಮತ್ತು ಮಿಥ್ಯದ ಬಗ್ಗೆ ತಿಳುವಳಿಕೆ ಇಲ್ಲದಿದ್ದರಿಂದ ಗಲಭೆಯಾಗಿದೆ. ಟ್ರಿಪಲ್ ತಲಾಖ್, ಅಯೋಧ್ಯೆ ವಿಚಾರದಲ್ಲಿ ಗಲಭೆ ಸೃಷ್ಟಿಸಲು ವಿಪಕ್ಷಗಳು ಯತ್ನಿಸಿದ್ವು, ಅದು ಆಗಲಿಲ್ಲ, ಈಗ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ತಪ್ಪು ಮಾಹಿತಿ ನೀಡಿ ಪ್ರಚೋದನೆ ಮಾಡಿ ಗಲಭೆ ಸೃಷ್ಟಿಸುತ್ತಿವೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿಗಳು ಸೇರಿ ಪ್ರಚೋದನೆ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶದ ಯಾರ ಪೌರತ್ವ ಕಿತ್ತುಕೊಳ್ಳುವ ಕೆಲಸ ಈ ಕಾಯ್ದೆ ಮಾಡಿದೆ ಹೇಳಿ ಎಂದು ಪ್ರಶ್ನಿಸಿದ ಸಚಿವ ಸಿ ಟಿ ರವಿ ಅವರು, ದೇಶದ ಯಾವ ನಾಗರಿಕರ ಹಕ್ಕನ್ನು ನಾವು ಕಸಿದುಕೊಂಡಿಲ್ಲ ಈ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ. ಚಳವಳಿ ನೆಪದಲ್ಲಿ, ವಿರೋಧಿಸುವ ನೆಪದಲ್ಲಿ ಕೋಮುಗಲಭೆ ನಡೆಸುವ ಸಂಚು ನಡೆಸಲಾಗುತ್ತಿದೆ. ಅಲ್ಪಸಂಖ್ಯಾತರಲ್ಲಿ ವಿಷದ ಬೀಜ ಬಿತ್ತಿ ಅವರನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. 
ಹಿಂಸಾಚಾರವನ್ನು ನಮ್ಮ ಸಂವಿಧಾನ ಒಪ್ಪೋದಿಲ್ಲ, ವಿಷಬೀಜ ಬಿತ್ತುವ ಕೆಲಸ ಮಾಡುತ್ತಿರೋದನ್ನು ನಾನು ಖಂಡಿಸುವೆ ಎಂದಿದ್ದಾರೆ.

ರಾಜ್ಯಕ್ಕೆ ಬೆಂಕಿ ಹಾಕುತ್ತೇವೆ ಅಂತಾ ಮಾಜಿ ಸಚಿವ ಸಿ.ಟಿ.ಖಾದರ್ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ಮುಖಂಡರು ಖಾದರ್ ಹೇಳಿಕೆಯನ್ನ ಖಂಡಿಸಲಿಲ್ಲ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಖಂಡಿಸಲಿಲ್ಲ ಎಂದು ಹೇಳಿದ್ದಾರೆ. 

ಮಂಗಳೂರಿನಲ್ಲಿ ನಿನ್ನೆ ಇಬ್ಬರ ಸಾವಿಗೆ ಯು.ಟಿ.ಖಾದರ್ ಮತ್ತು ಅವರ ನಾಯಕರೇ ಕಾರಣರಾಗಿದ್ದಾರೆ. ಪೆಟ್ರೋಲ್ ಬಾಂಬ್ ಇಟ್ಟುಕೊಂಡವರನ್ನು ಅಮಾಯಕರು ಅನ್ನಕ್ಕಾಗಲ್ಲ. ಯು‌‌.ಟಿ.ಖಾದರ್ ಸೇರಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಪೌರತ್ವ ನೀಡುವ ಕಾಯ್ದೆ ತಂದ್ರೆ ಇವರು ಯಾಕೆ ಉರಿಯಬೇಕು? ಈ ಕಾಯ್ದೆ ಫಿರೋಜ್ ಖಾನ್, ಯು.ಟಿ.ಖಾದರ್ ಹಕ್ಕನ್ನು ಕಿತ್ತುಕೊಂಡಿಲ್ಲ, ಇವರು ಹಕ್ಕು ಕಿತ್ತುಕೊಂಡಿಲ್ಲ ಅಂದ್ರೆ ಯಾರ ಸಲುವಾಗಿ ಇವರು ಗಲಭೆ ಮಾಡುತ್ತಿದಾರೆ?, ಪಾಕಿಸ್ತಾನದ ಮುಸ್ಲಿಂರಿಗಾಗಿ ಇವರು ಗಲಭೆ ಮಾಡ್ತಿದಾರಾ ಅಂತಾ ಕಿಡಿ ಕಾರಿದ್ದಾರೆ. 

ಗೋಲಿಬಾರ್ ಮನೆಯಲ್ಲಿ ಇದ್ದವರ ಮೇಲೆ ಆಗಿಲ್ಲ, ಬ್ಯಾಗ್ ನಲ್ಲಿ ಕಲ್ಲಿಟ್ಟುಕೊಂಡು, ಪೆಟ್ರೋಲ್ ಬಾಂಬ್ ಹಿಡಿದವರ ಮೇಲೆ ಗೋಲಿಬಾರ್ ಆಗಿದೆ ಈ ಗೋಲಿಬಾರ್‌‌ಗೆ ಕಾರಣವಾಗಿದ್ದು ಕಾಂಗ್ರೆಸ್ ಪಕ್ಷದ ಪ್ರಚೋದನೆಯಿಂದ ಎಂದು ಹೇಳಿದ್ದಾರೆ. 

Follow Us:
Download App:
  • android
  • ios