ಕೆ.ಎಂ.ಮಂಜುನಾಥ್‌ 

ಹಂಪಿ (ಗಾಯಿತ್ರಿಪೀಠ)(ಜ.12): ಹಂಪಿ ಸ್ಮಾರಕಗಳ ನಡುವೆ ಅದ್ಧೂರಿಯಾಗಿ ನಡೆದ ಎರಡು ದಿನಗಳ ಹಂಪಿ ಉತ್ಸವಕ್ಕೆ ಶನಿವಾರ ಸಂಜೆ ಸಂಭ್ರಮದ ತೆರೆ ಬಿತ್ತು. ಹಂಪಿಯ ಬೀದಿ ಬೀದಿಯಲ್ಲಿ ಸಾಗಿ ಬಂದ ಜನಸ್ತೋಮ ಮುಖ್ಯ ವೇದಿಕೆಯಲ್ಲಿ ಜರುಗಿದ ಸಮಾರೋಪಕ್ಕೆ ಸಾಕ್ಷಿಯಾದರಲ್ಲದೆ, ತಡರಾತ್ರಿವರೆಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.

ಸಮಾರೋಪದಲ್ಲಿ ಭಾಗಹಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಮುಂದಿನ ವರ್ಷ ಮತ್ತಷ್ಟು ಅದ್ಧೂರಿಯಾಗಿ ಹಂಪಿ ಉತ್ಸವ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಂಪಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ ಎಂದು ಹೇಳಿದರು.

ಹಂಪಿ ಎಲ್ಲರ ಸ್ವತ್ತು:

ಹಂಪಿಯಲ್ಲಿರುವ ಸ್ಮಾರಕಗಳು ಬರೀ ಹಿಂದುಗಳಿಗೆ ಸೇರಿದ್ದಲ್ಲ. ಇಡೀ ಭಾರತಿಯರಿಗೆ ಸೇರಿದ್ದಾಗಿದೆ. ವಿಜಯನಗರ ಸಾಮ್ರಾಜ್ಯ ವಿಸ್ತರಣೆಗೆ ಸೀಮಿತವಾಗದೆ ಪರಂಪರೆಯ ವೈಭವವನ್ನು ಸಾರಿದೆ. ನಮಗೆ ವ್ಯಕ್ತಿನಿಷ್ಠೆಗಿಂತ ರಾಷ್ಟ್ರನಿಷ್ಠೆ ಮುಖ್ಯವಾಗಬೇಕು. ಮುಂದಿನ ಉತ್ಸವದಲ್ಲಿ ಪ್ರತಿ ಮನೆಯವರೂ ತಮ್ಮ ಮನೆಯ ಹಬ್ಬದಂತೆ ಆಚರಿಸುವಂತಾಗಬೇಕು. ಎಲ್ಲರ ಮನೆಯಲ್ಲಿ ಹೋಳಿಗೆ ತಯಾರಿಸಿ ಹಬ್ಬ ಆಚರಿಸಿ, ಸಂಭ್ರಮಿಸಬೇಕು. ಉತ್ಸವಕ್ಕಾಗಿ ಬಂಧು ಬಳಗವನ್ನು ಆಮಂತ್ರಿಸಬೇಕು. ಪ್ರತಿ ಮನೆಯನ್ನು ದೀಪಗಳಿಂದ ಅಲಂಕರಿಸಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಮುಂದಿನ ಬಾರಿ ಹಂಪಿ ಉತ್ಸವದಲ್ಲಿ ನೀವು ಸಚಿವರಾಗಿರುತ್ತೀರಿ. ನಿಮ್ಮ ನೇತೃತ್ವದಲ್ಲಿ ಹಂಪಿ ಉತ್ಸವ ನಡೆಯುತ್ತದೆ ಎಂದು ಆನಂದಸಿಂಗ್‌ ಉದ್ದೇಶಿಸಿ ಹೇಳಿದರು.

ವಿಜಯನಗರ ಜಿಲ್ಲೆಯಾಗಲಿ:

ಹೊಸಪೇಟೆ ಶಾಸಕ ಆನಂದಸಿಂಗ್‌ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಕುರಿತು ಬರೀ ಹೊಗಳಿಕೆಗೆ ಸೀಮಿತಗೊಳಿಸುವುದು ಬೇಡ. ಈ ಹಿಂದಿನಿಂದಲೂ ಹೊಗಳಿಕೆಗಳನ್ನು ಕೇಳುತ್ತಲೇ ಬಂದಿದ್ದೇನೆ. ವಿಜಯನಗರ ಜಿಲ್ಲೆಯಾಗಬೇಕು ಎಂಬುದು ನನ್ನ ಮತ್ತು ಈ ಕ್ಷೇತ್ರದ ಜನರ ಒತ್ತಾಸೆಯಾಗಿದೆ. ನಮ್ಮ ಬೇಡಿಕೆಗೆ ನೀವೂ ಕೈ ಜೋಡಿಸಬೇಕು ಎಂದರು. ವಿಜಯನಗರ ಜಿಲ್ಲೆ ಘೋಷಣೆ ಮೂಲಕ ಹೊಗಳಿಕೆ ಶುರುವಾಗಬೇಕಾಗಿದೆ. ಹಂಪಿಗೆ ಬರುವ ಪ್ರವಾಸಿಗರಿಗೆ ಸೌಕರ್ಯಗಳ ಕೊರತೆ ಇದೆ. ಶ್ರೀಮಂತರಿಗಷ್ಟೇ ಹಂಪಿಯಾಗಿದೆ. ಬಡ ಹಾಗೂ ಮಧ್ಯಮವರ್ಗದ ಜನರಿಗಾಗಿ ಯಾತ್ರಿ ನಿವಾಸ ನಿರ್ಮಿಸಬೇಕಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಈ ಬಾರಿಯ ಉತ್ಸವದಲ್ಲಿ ಸುಮಾರು ಮೂರೂವರೆ ಲಕ್ಷದಷ್ಟುಜನರು ಭಾಗವಹಿಸಿ, ಯಶಸ್ವಿಗೊಳಿಸಿದ್ದಾರೆ. ಉತ್ಸವ ಯಶಸ್ವಿಗಾಗಿ ಇಡೀ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಶ್ರಮಿಸಿದೆ ಎಂದು ಹೇಳಿದರು.

ಸಂಸದ ವೈ. ದೇವೇಂದ್ರಪ್ಪ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದೀನಾ ಮಂಜುನಾಥ್‌ ಮತ್ತಿತರರಿದ್ದರು. ಸಮಾರೋಪ ಮುನ್ನ ಅಗಲಿದ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಂ. ವಿನೋದ್‌ ಕಾರ್ಯಕ್ರಮ ನಿರ್ವಹಿಸಿದರು. ಗಾಂಧರ್ವ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.