ಕೊರೋನಾ ಕಾಟ: 'ಮದುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ'
ಸಾಮಾನ್ಯ ಜನರಲ್ಲಿ ಲಾಕ್‌ಡೌನ್ ಸಮಯದಲ್ಲಿ ಇದ್ದ ಶಿಸ್ತು, ಈಗ ಮಾಯ| ಲಾಕ್‌ಡೌನ್ ಸಡಿಲಿಸಲಾಗಿದೆ ಅಷ್ಟೆ, ಕೊರೋನಾ ಸೋಂಕಿನಿಂದ ಮುಕ್ತಿ ದೊರೆತಿಲ್ಲ| ಮದುವೆ ಸಮಾರಂಭಗಳಂತೆ ಶವಸಂಸ್ಕಾರಕ್ಕೂ ಕಡಿಮೆ ಜನ ಸೇರಿ ಅಂತ್ಯಕ್ರಿಯೆ ನೆರವೇರಿಸಬೇಕು| ಮದುವೆ ಸಮಾರಂಭಗಳಿಗೆ 50 ಜನಕ್ಕಿಂತ ಅಧಿಕ ಜನ ಸೇರಬಾರದು: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ|
ಗದಗ(ಜು.02): ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ತಡೆಗೆ ಜಾಗೃತಿಯೇ ಬಹು ಪರಿಣಾಮಕಾರಿ ಕ್ರಮ. ಈ ಹಿನ್ನೆಲೆಯಲ್ಲಿ ಜನರು ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು 3 ದಿನಗಳ ಜಾಗೃತಿ ಕಾರ್ಯಕ್ರಮ ಜಿಲ್ಲಾಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.
ಅವರು ಬುಧವಾರ ಜಿಲ್ಲಾಡಳಿತ ಭವನದಲ್ಲಿ ಕೋವಿಡ್ -19 ಸೋಂಕು ನಿಯಂತ್ರಣ ಕುರಿತ ಚುನಾಯಿತ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯ ನಂತರ ಜರುಗಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಎಲ್ಲರೂ ಅರಿಯಬೇಕು. ಸಾರ್ವಜನಿಕರು, ಸಂಘ -ಸಂಸ್ಥೆಗಳು ಕೋವಿಡ್-19 ಸೋಂಕು ತಡೆಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ಹಾಕಲಾಗುವುದು. ಸಾಮಾನ್ಯ ಜನರಲ್ಲಿ ಲಾಕ್‌ಡೌನ್ ಸಮಯದಲ್ಲಿ ಇದ್ದ ಶಿಸ್ತು, ಈಗ ಮಾಯವಾಗಿದೆ. ಲಾಕ್‌ಡೌನ್ ಸಡಿಲಿಸಲಾಗಿದೆ ಅಷ್ಟೆ, ಕೊರೋನಾ ಸೋಂಕಿನಿಂದ ಮುಕ್ತಿ ದೊರೆತಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಮದುವೆ ಸಮಾರಂಭಗಳಂತೆ ಶವಸಂಸ್ಕಾರಕ್ಕೂ ಕಡಿಮೆ ಜನ ಸೇರಿ ಅಂತ್ಯಕ್ರಿಯೆ ನೆರವೇರಿಸಬೇಕು. ಮದುವೆ ಸಮಾರಂಭಗಳಿಗೆ 50 ಜನಕ್ಕಿಂತ ಅಧಿಕ ಜನ ಸೇರಬಾರದು. ತಹಸೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಮದುವೆ ಸಮಾರಂಭಗಳನ್ನು ನಡೆಸಬೇಕು. ಇದಲ್ಲದೇ ಮದುವೆ ಸಮಾರಂಭಗಳಿಗೆ ಪೆಂಡಾಲ್ ಹಾಕುವ ಮಾಲೀಕರ ಸಂಘದೊಂದಿಗೆ ಸಭೆ ನಡೆಸಿ, ಸರಳ ಮದುವೆಗೆ ಅಗತ್ಯವಿರುವಷ್ಟೆ ಪೆಂಡಾಲ್ ಹಾಕುವಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಗದಗ: 'ಹೆರಿಗೆ ಆಸ್ಪತ್ರೆ ಗರ್ಭಿಣಿಯರಿಗೆ ಮಾತ್ರ ಬಳಸಿ, ಕೋವಿಡ್ ರೋಗಿಗಳಿಗಲ್ಲ'
ಯಾವುದೇ ರೀತಿಯ ಲಕ್ಷಣಗಳು ಕಂಡುಬರದ ಕೋವಿಡ್ -19 ಸೋಂಕಿತರನ್ನು ಆಯಾ ತಾಲೂಕಿನಲ್ಲಿನ ಮೊರಾರ್ಜಿ ವಸತಿ ಹಾಸ್ಟೆಲ್‌ಗಳಲ್ಲಿ ಚಿಕಿತ್ಸೆ ನೀಡಲು ಅಲ್ಲಿ ವೈದ್ಯಕೀಯ ಹಾಗೂ ಇತರೆ ಅಗತ್ಯದ ಮೂಲ ಸೌಕರ್ಯಗಳಿರುವಂತೆ ಕ್ರಮ ವಹಿಸಲು, ಸೋಂಕಿತರಿಗೆ ಹಾಗೂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಉತ್ತಮ ಆಹಾರ ವಸತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಐಎಲ್‌ಐ ಹಾಗೂ ಸಾರಿ ಲಕ್ಷಣಗಳಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು. ಇದನ್ನು ಆಸ್ಪತ್ರೆಯವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಎಲ್ಲರೂ ಪಾಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಡಿಸಿ ಸುಂದರೇಶಬಾಬು ಎಂ, ಜಿಪಂ ಸಿಇಒ ಡಾ. ಆನಂದ ಕೆ, ಎಸ್ಪಿ ಯತೀಶ್ ಎನ್ ಇದ್ದರು.
ಪಿಂಚಣಿ: ಸಮಸ್ಯೆ ಬಗೆಹರಿಸಲಾಗುವುದು
ಜಿಲ್ಲೆಯಲ್ಲಿನ ಸಂಧ್ಯಾ ಸುರಕ್ಷಾ, ವೃದ್ಯಾಪ್ಯ ವೇತನ ಸೇರಿದಂತೆ ಪಿಂಚಣಿ ಪಡೆಯುತ್ತಿರುವವರಿಗೆ ಪಿಂಚಣಿ ಬರುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಸಮಸ್ಯೆಯಾಗಿದ್ದು ಅಪರ ಜಿಲ್ಲಾಧಿಕಾರಿಗಳು ಸಭೆ ನಡೆಸಿ, 15 ದಿನಗಳೊಳಗಾಗಿ ಸಮಸ್ಯೆ ಪರಿಹಾರ ಮಾಡುವ ಮೂಲಕ ಎಲ್ಲ ಪಿಂಚಣಿದಾರರಿಗೂ ಸಕಾಲದಲ್ಲಿ ಪಿಂಚಣಿ ದೊರೆಯುವಂತೆ ಮಾಡಲು ಸೂಚಿಸಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.