ಗದಗ[ಡಿ.14]: ಅಧಿಕಾರಿಗಳು ತಮಗೆ ವಹಿಸಿದ ಕೆಲಸದಲ್ಲಿ ಜವಾಬ್ದಾರಿಯಿಂದ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಸಿದ್ದಾರೆ. 

ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರ ಬದಲಾದ ಸಂದರ್ಭದಲ್ಲಿ ಆಯಾ ಸರ್ಕಾರದ ಪ್ರಣಾಳಿಕೆ ಅವಲಂಬಿಸಿ ಸಚಿವರ ದೃಷ್ಟಿಕೋನದಲ್ಲಿ ಬದಲಾವಣೆ ಇರುತ್ತದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಚಿವರು ಕೆಲಸವನ್ನು ಮಾಡುತ್ತಾರೆ. ಅದಕ್ಕೆ ಪೂರಕವಾಗಿ ಆಡಳಿತ ವರ್ಗದ ಎಲ್ಲ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಮರಳುಗಾರಿಕೆ, ಗಣಿಗಾರಿಕೆ ಕುರಿತಂತೆ ಅಕ್ರಮಗಳ ಕುರಿತು ದೂರುಗಳು ಬಂದಿದ್ದರ ಹಿನ್ನೆಲೆ ಇಲಾಖೆಯಿಂದ ವಿಶೇಷ ತನಿಖಾ ತಂಡಗಳನ್ನು ರಚಿಸಿ ಸತ್ಯಾಸತ್ಯತೆಯ ಪರಿಶೀಲನೆ ನಡೆಸಲಾಗುತ್ತಿದ್ದು, ಅಕ್ರಮ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲಾರಿಗಳು ಒವರ್ ಲೋಡ್ ಹಾಗೂ ಮರಳು ಸಾಗಾಣಿಕೆ ಸಂಬಂಧಿಸಿದ ಇನ್ನಿತರ ದೂರುಗಳಿವೆ. ಸಂಬಂಧಿತ ತಹಸೀಲ್ದಾರರು, ತಾಪಂ ಕಾರ‌್ಯನಿರ್ವಹಣಾಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಿಬ್ಬಂದಿ ಈ ಕುರಿತು ತೀವ್ರ ನಿಗಾ ವಹಿಸಬೇಕು. ಗ್ರಾಪಂ ಪಿಡಿಒಗಳು ತಮ್ಮ ಮೊಬೈಲ್‌ನ್ನು ಚಾಲ್ತಿಯಲ್ಲಿಟ್ಟಿರಬೇಕು. ಜಿಲ್ಲಾ ಉಪವಿಭಾಗಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ಅಕ್ರಮ ಕುರಿತಂತೆ ಗಮನ ತಂದು ಯಾವುದೇ ಪ್ರಭಾವಕ್ಕೆ ಒಳಗಾಗದೇ ಕಾನೂನು ಕ್ರಮ ಜರುಗಿಸಲು ಸೂಚಿಸಿದರು. 

ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಅಭಿವೃದ್ಧಿಗೆ ನೀಡಬೇಕಾದ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಕೊಡಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕೆಲವೆಡೆ ಕಾಮಗಾರಿ ಅರ್ಧವಾಗಿದ್ದರೂ ಪೂರ್ತಿ ಬಿಲ್ ಪಾವತಿಸಿರುವ ದೂರುಗಳಿದ್ದು, ಅದಕ್ಕೆ ಆಸ್ಪದ ನೀಡದಿರಲು ಸಚಿವ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ನೆರೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡಗಳ ಕಾಮಗಾರಿ ತಕ್ಷಣ ಆರಂಭಿಸಬೇಕು. ನೆರೆ ಸಂದರ್ಭದಲ್ಲಿ ಎ ಕೆಟಗರಿಯಲ್ಲಿ ಹಾನಿಗೊಳಗಾದ ಮನೆಗಳನ್ನು ಫಲಾನುಭವಿಗಳು ಬೇರೆಡೆ ತಮ್ಮ ಜಾಗದಲ್ಲಿ ಕಟ್ಟಲು ಅನುಮತಿ ನೀಡಲು ಕ್ರಮ ಜರುಗಿಸಲು ಸೂಚನೆ ನೀಡಿದರು. 

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ನೆರೆ ಸಂತ್ರಸ್ತರಿಗೆ ಮನೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕು. ಎ ಕೆಟಗರಿಯ 400 ಫಲಾನುಭವಿಗಳಿಗೆ ತಲಾ 1 ಲಕ್ಷ ನೀಡಿದ್ದು, ಮನೆ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಫಲಾನುಭವಿಗಳಿಗೆ ತಿಳಿಸಿ ಮನೆ ಕಟ್ಟುವ ಕಾರ್ಯ ಆರಂಭಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಸರ್ಕಾರಿ ಕೆಲಸದಲ್ಲಿ ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಡಾ. ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ 5 ಕೋಟಿ

ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಸಮಗ್ರ ಅಭಿವೃದ್ಧಿಗೆ ಶೀಘ್ರವೇ 5 ಕೋಟಿ ಮಂಜೂರು ಮಾಡಲಾಗುವುದು. ಆ ಮೂಲಕ ಪ್ರಾಣಿ ಸಂಗ್ರಹಾಲಯವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶೇ. 99 ರಷ್ಟು ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಉಳಿದಿರುವ ಸಾಧ್ಯತೆ ಇದೆ. ಇದರ ಬಗ್ಗೆಯೂ ತಹಸೀಲ್ದಾರ್ ನೇತೃತ್ವದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.