Asianet Suvarna News Asianet Suvarna News

'ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮೆ'

ತೊಗರಿ, ಹೆಸರು, ಉದ್ದು, ಸೋಯಾಬಿನ್‌ ಸೇರಿದಂತೆ ಮಳೆಗೆ ವಿವಿಧ ಬೆಳೆಗಳ ಒಟ್ಟಾರೆ 442626 ಹೆಕ್ಟೇರ್‌ ಪ್ರದೇಶ ಹಾನಿ| ಈಗಾಗಲೇ ಪರಿಹಾರಕ್ಕೆ ನೋಂದಣಿಯಾದ 150409 ರೈತರ ಪೈಕಿ 139158 ರೈತರಿಗೆ 6 ಹಂತಗಳಲ್ಲಿ 97.07 ಕೋಟಿ ರು. ಪರಿಹಾರ| ಭಾಗವಾಗಿ 7ನೇ ಹಂತದಲ್ಲಿ 41 ಸಾವಿರ ರೈತರಿಗೆ 29.58 ಕೋಟಿ ರು. ಪರಿಹಾರ| 

Minister BC Patil Talks Over Crop Damage Compensation grg
Author
Bengaluru, First Published Feb 22, 2021, 1:14 PM IST

ಕಲಬುರಗಿ(ಫೆ.22): ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾಗಿ ಕಂಗಾಲಾಗಿರುವ ಕಲಬುರಗಿ ಜಿಲ್ಲೆಯ 41 ಸಾವಿರ ರೈತರಿಗೆ ಬರುವ ಒಂದು ವಾರದಲ್ಲಿ 29.58 ಕೋಟಿ ರು. ಹಣ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ. 

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ತೊಗರಿ, ಹೆಸರು, ಉದ್ದು, ಸೋಯಾಬಿನ್‌ ಸೇರಿದಂತೆ ಮಳೆಗೆ ವಿವಿಧ ಬೆಳೆಗಳ ಒಟ್ಟಾರೆ 442626 ಹೆಕ್ಟೇರ್‌ ಪ್ರದೇಶ ಹಾನಿಗೊಳಗಾಗಿದೆ. ಇದರಲ್ಲಿ ಈಗಾಗಲೆ ಪರಿಹಾರಕ್ಕೆ ನೋಂದಣಿಯಾದ 150409 ರೈತರ ಪೈಕಿ 139158 ರೈತರಿಗೆ 6 ಹಂತಗಳಲ್ಲಿ 97.07 ಕೋಟಿ ರು. ಪರಿಹಾರ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ 7ನೇ ಹಂತದಲ್ಲಿ 41 ಸಾವಿರ ರೈತರಿಗೆ 29.58 ಕೋಟಿ ರು. ಪರಿಹಾರ ವಾರದಲ್ಲಿ ನೀಡಲಾಗುತ್ತಿದೆ ಎಂದರು.

ಈ ವರ್ಷ ಬೆಳೆ ಸಮೀಕ್ಷೆಯನ್ನು ರೈತರಿಂದಲೆ ಮಾಡಿಸಲಾಗುತ್ತದೆ. ಇವರಿಗೆ ನೆರವು ನೀಡಲು 10 ತಿಂಗಳ ಸೇವೆಗೆ ರಾಜ್ಯಾದ್ಯಂತ 6000 ಕೃಷಿಯಲ್ಲಿ ಡಿಪ್ಲೊಮಾ ಪಡೆದ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಒಪ್ಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 21 ಮೆಡಿಕಲ್‌ ಕಾಲೇಜು ಉನ್ನತೀಕರಣ: ಸಚಿವ ಸುಧಾಕರ್‌

ನಕಲಿ ಬೀಜ, ಗೊಬ್ಬರ ಹಾವಳಿಗೆ ಕಡಿವಾಣ ಹಾಕಿ:

ಮುಂದೆ ಏಪ್ರಿಲ್‌-ಮೇ ನಲ್ಲಿ ಬರುವ ಮುಂಗಾರು ಹಂಗಾಮಿಗೆ ಈಗಲೆ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಮಾರಕವಾಗಿರುವ ಮತ್ತು ಅವರ ಜೀವ ಹಿಂಡುವ ನಕಲಿ ಬೀಜ, ಗೊಬ್ಬರ, ಔಷಧಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ನಕಲಿ ಕೀಟನಾಶಕ ಮಾರಾಟದ ಸರಾಸರಿ ನೋಡಿದಾಗ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ.45 ರಷ್ಟಿದ್ದು, ನಕಲಿ ಮಾರಾಟದ ಜಾಲಕ್ಕೆ ಇತಿಶ್ರೀ ಹಾಡಿರೆಂದರು. ಕಳೆದ ವರ್ಷ 17 ಕೋಟಿ ರು ಮೊತ್ತದ ನಕಲಿ ಬೀಜಗಳನ್ನು ಇಲಾಖೆಯ ಜಾಗೃತ ದಳ ಪತ್ತೆ ಹಚ್ಚಿದೆ ಎಂಬುದನ್ನು ಯಾರು ಮರೆಯದಿರಿ ಎಂದರು.

ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗದಂತೆ ಯೂರಿಯಾ ಅಭಾವ ಸೃಷ್ಠಿ ಮಾಡುವ ವ್ಯಾಪಾರಸ್ಥರ ಮೇಲೆ ನಿಗಾ ಇಡಿ. ಕಳೆದ ವರ್ಷ ಇಂತಹ 158 ವ್ಯಾಪಾರಸ್ಥರ ಲೈಸೆನ್ಸ್‌ ಸರ್ಕಾರ ರದ್ದುಗೊಳಿಸಿದೆ ಎಂದರು.
ಬೆಳೆ ವಿಮೆ ವಿಚಾರವಾಗಿ ಪರಿಹಾರ ಕೋರಿ ರೈತರು ಕೃಷಿ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಮತ್ತು ನೇರವಾಗಿ ವಿಮಾ ಕಚೇರಿಗೆ ಸಂಪರ್ಕಿಸಲೆಂದು ವಿಮಾ ಸಂಸ್ಥೆಗಳ ಕಚೇರಿಯನ್ನು ಪ್ರತಿ ತಾಲೂಕಿನಲ್ಲಿ ತೆರೆಯಬೇಕು ಎಂದು ಈಗಾಗಲೆ ಆಯಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಡಾ. ರವಿಂದ್ರನಾಥ ಸುಗೂರು ಅವರು ಇಲಾಖೆಯಿಂದ ವಿವಿಧ ಯೋಜನೆಗಳಲ್ಲಿ ಸಾಧಿಸಲಾದ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರವನ್ನು ಪಿ.ಪಿ.ಟಿ. ಮೂಲಕ ಸಭೆಗೆ ಅಂಕ-ಸಂಖ್ಯೆಯೊಂದಿಗೆ ವಿವರಿಸಿದರು.
ಶಾಸಕರಾದ ಬಿ.ಜಿ.ಪಾಟೀಲ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಪಂ ಸದಸ್ಯ ಗುರುಶಾಂತ ಪಾಟೀಲ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾನಾ, ಜಿಪಂ ಸಿಇಓ ಡಾ.ದಿಲೀಶ್‌ ಸಾಸಿ, ಅಪರ ಕೃಷಿ ನಿರ್ದೇಶಕ ವೆಂಕಟರಾಮರೆಡ್ಡಿ, ಅಂಟೋನಿ ಇದ್ದರು.
 

Follow Us:
Download App:
  • android
  • ios