ಕಲಬುರಗಿ(ಫೆ.22): ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ 21 ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಉನ್ನತಮಟ್ಟಕ್ಕೆ ಏರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಭಾನುವಾರ ಸೇಡಂ ರಸ್ತೆಯಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕರ್ನಾಟಕ ಪ್ರಾದೇಶಿಕ ಕೇಂದ್ರದ ಹೊಸ ಆಡಳಿತ ಕಟ್ಟಡವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ನಿಜವಾದ ಕಲ್ಯಾಣಕ್ಕೆ ಈ ಕ್ರಮ ಬಲ ನೀಡಿದೆ. ಈ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 25 ವರ್ಷ ಕಳೆದಿದೆ. ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಸ್ವಂತ ಕಟ್ಟದ ಕಲಬುರಗಿಯಲ್ಲಿ ಸ್ಥಾಪನೆಯಾಗಿರುವುದು ಇದೇ ಮೊದಲು ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಪ್ರಸ್ತುತ 800 ಕಾಲೇಜುಗಳನ್ನು ಹೊಂದಿದೆ. ಸರ್ಕಾರದ ಆಶಯದಂತೆ ರಾಜ್ಯದ ಎಲ್ಲಾ ಪ್ರದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿಶ್ವವಿದ್ಯಾಲಯದ ಬೆಂಗಳೂರು ಕೇಂದ್ರಸ್ಥಾನದ ಸಹಯೋಗದೊಂದಿಗೆ ಆಡಳಿತ ವಿಕೇಂದ್ರೀಕರಣ ಮಾಡಲು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ವಿವಿ ಸೆನೆಟ್‌ ಸದಸ್ಯರಾದ ಡಾ. ಎಚ್‌. ವೀರಭದ್ರಪ್ಪ ಅವರು ಪ್ರಾದೇಶಿಕ ಆಡಳಿತ ಕೇಂದ್ರಗಳನ್ನು ರಚನೆ ಮಾಡಬೇಕು ಎಂಬ ವಿಷಯ ಪ್ರಸ್ತಾಪಿಸಿದ್ದರು. ಹೀಗಾಗಿ ಇಂತಹ ದೂರದೃಷ್ಟಿಯುಳ್ಳ ನಾಯಕರ ಆಲೋಚನೆಗಳಿದ್ದಲ್ಲಿ ಅಭಿವೃದ್ಧಿ ಯೋಜನೆಗಳಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದರು.

4 ವೈದ್ಯ ಕಾಲೇಜುಗಳಿಗೆ 8.2 ಕೋಟಿ ದಂಡ: ಹೈಕೋರ್ಟ್‌ ಮಹತ್ವದ ಆದೇಶ

ವೈದ್ಯರ ನೇರ ನೇಮಕಾತಿ:

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು ಸರ್ಕಾರದಿಂದ ನೇರ ನೇಮಕಾತಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಇದಲ್ಲದೇ, ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಕಾಯ್ದುಕೊಳ್ಳುವ ಸಂಸ್ಥೆಗಳಿಗೆ ಮಾತ್ರ ಪರವಾನಗಿ ನೀಡಬೇಕು ಎಂದು ಸಚಿವರು ತಿಳಿಸಿದರು.

ಮೀನಮೇಷ ಎಣಿಸದೆ ಲಸಿಕೆ ಪಡೆಯಿರಿ:

ಈಗಾಗಲೇ ರಾಜ್ಯದಲ್ಲಿ ಕೋರೊನಾ ಲಸಿಕೆ ನೀಡಲಾಗುತ್ತಿದ್ದು, ಹಲವರು ಭಯಗೊಂಡು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಮೀನಾಮೇಷಬಿಟ್ಟು ಲಸಿಕೆ ಪಡೆದು ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಸಚಿವ ಕೆ.ಸುಧಾಕರ್‌ ಅವರು ಮನವಿ ಮಾಡಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿದರು. ವಿದ್ಯಾಲಯದ ಕುಲಪತಿ ಡಾ.ಎಸ್‌.ಸಚ್ಚಿದಾನಂದ ಅವರು ಗಣ್ಯರನ್ನು ಸ್ವಾಗತಿಸಿರು. ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಶಶೀಲ್‌ ಜಿ.ನಮೋಶಿ, ಡಾ.ಸಾಯಿಬಣ್ಣ ತಳವಾರ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಅಧ್ಯಕ್ಷ ಚಂದು ಪಾಟೀಲ್‌ ಸೇರಿದಂತೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.