ಹಾವೇರಿ [ಮಾ.08]:  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾಲಮನ್ನಾ ಘೋಷಣೆ ಮಾಡಿದರೇ ಹೊರತು ಅದಕ್ಕಾಗಿ ಸೂಕ್ತ ರೂಪು ರೇಶೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡುವುದು ದೊಡ್ಡ ವಿಷಯವಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿರುಗೇಟು ನೀಡಿದರು.

ಹಿರೇಕೆರೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಿಯಾಗಿ ಯೋಜನೆ ರೂಪಿಸದೆ ಕುಮಾರಸ್ವಾಮಿ ಸಾಲ ಮನ್ನಾ ಘೋಷಣೆ ಮಾಡಿ ಹೋಗಿದ್ದಾರೆ. ಈಗ ರೈತರ ಸಾಲ ಮನ್ನಾ ಖೋತಾ ಆಗಿದೆ ಎಂದು ಅವರು ಅಪಪ್ರಚಾರ ನಡೆಸುತ್ತಿದ್ದಾರೆ. ಗೊಂದಲದಿಂದಾಗಿ ಕುಮಾರಸ್ವಾಮಿ ಕಾಲದಿಂದ ರೈತರಿಗೆ ಸಾಲ ಮನ್ನಾ ಪ್ರಯೋಜನ ಆಗಿರಲಿಲ್ಲ. ನಮ್ಮ ಸರ್ಕಾರ ಯಾವ ರೈತರಿಗೂ ಅನ್ಯಾಯ ಮಾಡುವುದಿಲ್ಲ. ದಾಖಲಾತಿ ಪರಿಶೀಲನೆ ಮಾಡಿ ಕೊಡುತ್ತೇವೆ. ಬಾಯಿಗೆ ಬಂದಂಗೆ ಆಶ್ವಾಸನೆ ಮಾಡಿ ಹೋಗಿದ್ದನ್ನು ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಬಜೆಟ್‌ ಹೊಗಳುವುದಾದರೆ ಅವರು ಏಕೆ ವಿರೋಧ ಪಕ್ಷ ಸ್ಥಾನದಲ್ಲಿರುತ್ತಾರೆ. ವಿರೋಧ ಮಾಡುವುದು ಅವರ ಆ ಜನ್ಮ ಸಿದ್ಧ ಹಕ್ಕು ಎಂದುಕೊಂಡಿದ್ದಾರೆ. ಸಿದ್ದರಾಮಯ್ಯ ಮಾಜಿ ಸಿಎಂ ಆಗಿದ್ದವರು. ಗೌರವಾನ್ವಿತವಾಗಿ ಮಾತನಾಡೋದು ಕಲಿಬೇಕು. ನಮ್ಮ ನಾಲಿಗೆ ನಮ್ಮ ಸಂಸ್ಕೃತಿ ತೋರಿಸುತ್ತದೆ. ಅವರು ಗೌರವಯುತವಾಗಿ ಮಾತನಾಡಬೇಕು ಎಂದು ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ದೊರೆಸ್ವಾಮಿ ಹೇಳಿದ್ದನ್ನೇಕೆ ಯಾರೂ ಹೇಳುತ್ತಿಲ್ಲ : ಬಿ.ಸಿ.ಪಾಟೀಲ್...

ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿ, ಎರಡು ಕೆಜಿ ಜೋಳ ಅಥವಾ ರಾಗಿ ಕೊಡುತ್ತೇವೆ ಎಂದಿದ್ದಾರೆ. ಉತ್ತರ ಕರ್ನಾಟಕದ ಜನ ರೊಟ್ಟಿತಿನ್ನುತ್ತಾರೆ. ಹಳೆ ಮೈಸೂರಲ್ಲಿ ಜನ ಮುದ್ದೆ ಹೆಚ್ಚಾಗಿ ತಿನ್ನುತ್ತಾರೆ. ಹಾಗಾಗಿ ಎರಡು ಕೆಜಿ ಜೋಳ, ರಾಗಿ ಕೊಡುವುದಾಗಿ ಹೇಳಿದ್ದಾರೆ. ಇದ್ದರಿಂದ ಜೋಳ, ರಾಗಿಗೂ ಬೇಡಿಕೆ ಬರುತ್ತೆ. ಇವು ರೈತರನ್ನು ಬದುಕಿಸುವ ಯೋಜನೆಗಳು ಎಂದರು.

ಈ ಅಧಿವೇಶನ ಮುಗಿದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಬಹುದು. ಈ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಬೇಕು. ನಾವು ಬಂದ ಮೇಲೆ ಯಾವ ನಡುಕವೂ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು. ಆರ್‌. ಶಂಕರ್‌ ಸೇರಿದಂತೆ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕಿದೆ. ತಾಂತ್ರಿಕ ತೊಂದರೆಗಳಾಗಿವೆ. ಎಂಎಲ್‌ಸಿ ಸ್ಥಾನ ಖಾಲಿ ಇಲ್ಲ, ಜೂನ್‌, ಜುಲೈನಲ್ಲಿ ಹಲವರು ನಿವೃತ್ತರಾಗುತ್ತಾರೆ. ಆ ಸಮಯದಲ್ಲಿ ಯಡಿಯೂರಪ್ಪ ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂದು ಹೇಳಿದರು.