Asianet Suvarna News Asianet Suvarna News

ಪಾದರಾಯನಪುರ ಗಲಾಟೆ: 'ಜಮೀರ್‌ ಅಹ್ಮದ್‌ಗೆ ಕ್ವಾರಂಟೈನ್‌ಗೆ ಅಧಿಕಾರಿಗಳಿಗೆ ಸೂಚಿಸಿರುವೆ'

ರೋಗ​ಗಳು ಜಾತಿ-ಧರ್ಮ ನೋಡಿ ಬರು​ವು​ದಿ​ಲ್ಲ: ಸಚಿವ ಬಿ. ಶ್ರೀರಾಮುಲು| ಪಾದರಾಯನಪುರ ಗಲಾಟೆ ವಿಚಾರದಲ್ಲಿ ಶಾಸಕ ಜಮೀರ್‌ ಅವರು ನಡೆದುಕೊಂಡ ರೀತಿ ಅತ್ಯಂತ ಬೇಸರ ಮೂಡಿಸಿದೆ| ಕೊರೋನಾ ವೈರಸ್‌ ತಡೆಗೆ ಎಲ್ಲ ಪಕ್ಷದವರು ಸಹಕಾರ ನೀಡುತ್ತಿದ್ದಾರೆ| ಆದರೆ, ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕಾದ ಜಮೀರ್‌  ಅವರ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ|

Minister B Sriramulu Reacts Over MLA Zameer Ahmad Statement About Padarayanapura Incident
Author
Bengaluru, First Published Apr 22, 2020, 10:04 AM IST

ಬಳ್ಳಾರಿ(ಏ.22): ಪಾದರಾಯನಪುರ ಗಲಾಟೆಯನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿರುವ ಶಾಸಕ ಜಮೀರ್‌ ಅಹ್ಮದ್‌ ವಿರುದ್ಧ ಹರಿಹಾಯ್ದಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಶಾಸಕ ಜಮೀರ್‌ ಜನರ ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದಾರೆ. ಜಾತಿ-ಧರ್ಮ ನೋಡಿ ರೋಗಗಳು ಬರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಜಾತ್ಯತೀತ-ಪಕ್ಷಾತೀತವಾಗಿ ಕೆಲಸ ಮಾಡಬೇಕು. ಇದನ್ನು ಜಮೀರ್‌ ಅರ್ಥ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಪಾದರಾಯನಪುರ ಗಲಾಟೆ ವಿಚಾರದಲ್ಲಿ ಶಾಸಕ ಜಮೀರ್‌ ಅವರು ನಡೆದುಕೊಂಡ ರೀತಿ ಅತ್ಯಂತ ಬೇಸರ ಮೂಡಿಸಿದೆ. ಕೊರೋನಾ ವೈರಸ್‌ ತಡೆಗೆ ಎಲ್ಲ ಪಕ್ಷದವರು ಸಹಕಾರ ನೀಡುತ್ತಿದ್ದಾರೆ. ಆದರೆ, ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕಾದ ಜಮೀರ್‌ ಅವರು ಅವರ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ನನ್ನ ಜನ ಹೀಗೆ ಮಾಡಿದರು ಎಂದು ನಂಬಲಾಗುತ್ತಿಲ್ಲ: ಕೊನೆಗೂ ಜಮೀರ್‌ ವಿಷಾದ!

ಜಮೀರ್‌ಗೆ ಕ್ವಾರಂಟೈನ್‌ ಮಾಡಲು ಸೂಚಿಸಿರುವೆ

ಕೊರೋನಾ ಸೋಂಕಿತರ ಶವಸಂಸ್ಕಾರದಲ್ಲಿ ಶಾಸಕ ಜಮೀರ್‌ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ಕ್ವಾರಂಟೈನ್‌ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಇದಕ್ಕೆ ಜಮೀರ್‌ ಅವರು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ. ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಟೆಸ್ಟ್‌ ಮಾಡಬೇಕಾಗಿದ್ದು, ಇಂತಹ ಸಮಯದಲ್ಲಿ ಸಹಕಾರ ನೀಡಬೇಕಾಗುತ್ತದೆ ಎಂದರು.

ಪಾದರಾಯನಪುರ ಘಟನೆ ನಡೆಯುತ್ತಿದ್ದಂತೆಯೇ ಅಧಿಕಾರಿಗಳು ಹೋಗಿದ್ದಾರೆ. ರಾತ್ರಿ ಏಕೆ ಹೋಗಿದ್ದರು ಎಂದು ಜಮೀರ್‌ ಕೇಳಿದ್ದಾರೆ. ಯಾರದೋ ಒಪ್ಪಿಗೆ ಪಡೆದು ಹೋಗಬೇಕು ಎನ್ನುವುದು ಸರಿಯಲ್ಲ. ಒಮ್ಮೆ ಮಂತ್ರಿಯಾಗಿ, ಶಾಸಕರಾಗಿರುವ ಜಮೀರ್‌ ಅವರು ಅರ್ಥ ಮಾಡಿಕೊಳ್ಳಬೇಕು. ಪ್ರಚೋದನೆ ನೀಡುವ ಕೆಲಸದ ಜತೆಗೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಎನ್‌ಆರ್‌ಸಿ ಬೇರೆ, ಸದ್ಯದ ಪರಿಸ್ಥಿತಿಯೇ ಬೇರೆ. ವಿನಾಕಾರಣ ಎನ್‌ಆರ್‌ಸಿ ಹೆಸರಿನಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ. ಎಮೋಷನ್‌ನಲ್ಲಿ ಮಾತನಾಡಿದ್ರೆ ಯಾವ ಪ್ರಯೋಜನವಿಲ್ಲ. ಯಾವ ಜಾತಿಯನ್ನು ನಾವು ಲೇಬಲ್‌ ಮಾಡುವುದಿಲ್ಲ. ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲರಿಗೂ ತಿಳಿವಳಿಕೆ ಹೇಳುವ ಕೆಲಸ ಮಾಡಬೇಕು. ಈ ರೀತಿಯ ಘಟನೆಯಿಂದ ವೈದ್ಯರು ಹಾಗೂ ಕೊರೋನಾ ವೈರಸ್‌ ತಡೆಗೆ ಶ್ರಮಿಸುತ್ತಿರುವ ವಿವಿಧ ಸಿಬ್ಬಂದಿ ಪ್ಯಾನಿಕ್‌ ಆಗುವ ಸಾಧ್ಯತೆ ಇರುತ್ತದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
 

Follow Us:
Download App:
  • android
  • ios