Asianet Suvarna News Asianet Suvarna News

ಜನರಿಂದ ಬೆಳೆದಿದ್ದೇನೆ; ಸದಾ ಅವ​ರ ಜತೆಗೇ ಇರ್ತೇನೆ: ಸಚಿವ ರಾಮುಲು

*  38ನೇ ವಾರ್ಡಿನಲ್ಲಿ ಜನ ಸಂಪರ್ಕ ಕಚೇರಿ ಉದ್ಘಾಟನೆ
*  ಜನರ ಬೆಂಬಲದಿಂದ ನಾನು ಇಷ್ಟು ಎತ್ತರಕ್ಕೆ ಬೆಳದಿದ್ದೇನೆ 
*  ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ 
 

Minister B Sriramulu Inaugurate Public Relations Office in Ballari grg
Author
Bengaluru, First Published Aug 26, 2021, 2:42 PM IST

ಬಳ್ಳಾರಿ(ಆ.26):  ನಗರದ 38ನೇ ವಾರ್ಡಿನ ವ್ಯಾಪ್ತಿಯಲ್ಲಿ ದೇವಿನಗರದ ಮುಖ್ಯ ರಸ್ತೆಯ ಬಸವ ಕುಂಟೆ ಹತ್ತಿರದ ಫೀರ್‌ಸಾಬ್‌ ಮಕಾನ್‌ ಹತ್ತಿರದ ಬಿಜೆಪಿ ಮುಖಂಡರಾದ ವಿ. ಅನೂಪ್‌ ಕುಮಾರ್‌ ಅವರ ನೂತನ ಜನ ಸಂಪರ್ಕ ಕಚೇರಿಯನ್ನು ಸಾರಿಗೆ ಸಚಿವ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದ್ದಾರೆ. 

ಇದೇ ವೇಳೆ ಮಾತನಾಡಿದ ಅವರು, ಬಸವನಕುಂಟೆ, ದೇವಿನಗರ ಜನರು ನನ್ನ ಕೈ ಬಿಡಲ್ಲ ಎಂಬ ವಿಶ್ವಾಸವಿತ್ತು. ಆದರೆ, ಕಾರ್ಪೂರೇಷನ್‌ ಚುನಾವಣೆಯಲ್ಲಿ ಫಲಿತಾಂಶ ಬೇರೆ ರೀತಿ ಬಂತು. ಕಾರಣಂತರಗಳಿಂದ ನಿಮ್ಮಿಂದ ದೂರ ಆಗಿದ್ದು ನಿಜ. ಆದರೆ, ಬಸವನಕುಂಟೆ ಮತ್ತು ದೇವಿನಗರ ಜನರ ಬೆಂಬಲದಿಂದ ನಾನು ಇಷ್ಟು ಎತ್ತರಕ್ಕೆ ಬೆಳದಿದ್ದೇನೆ ಎಂಬುದನ್ನು ನಾನೂ ಮರೆತಿಲ್ಲ ಎಂದು ತಿಳಿಸಿದ್ದಾರೆ. 

38ನೇ ವಾರ್ಡಿನ ಜನರು ನಮ್ಮೊಂದಿಗೆ ಶ್ರೀರಾಮುಲು, ಸೋಮಶೇಖರ ರೆಡ್ಡಿ ಇಲ್ಲ ಎಂದು ಕಾರ್ಪೂರೇಷನ್‌ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ನಿಮ್ಮಿಂದ ದೂರವಾದ ನೋವು ನನಗೂ ಇದೆ. ಕಾರ್ಪೂರೇಷನ್‌ ಚುನಾವಣೆಯಲ್ಲಿ ಸೋತರು ಬಿಜೆಪಿ ಯುವ ಮುಖಂಡರಾದ ವಿ. ಅನೂಪ್‌ ಕುಮಾರ್‌ ಜನರೊಂದಿಗೆ ಇರಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಸೇವೆ ಮಾಡಬೇಕು ಎಂದು ಜನ ಸಂಪರ್ಕ ಕಚೇರಿ ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಶಾಸಕರಾದ ಸೋಮಶೇಖರ ರೆಡ್ಡಿ ಈ ಕಚೇರಿಗೆ ಬಂದು ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಮೂಲಕ ನಿಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ಇರುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. 

ರೆಡ್ಡಿ ಮನೆಗೆ ಭೇಟಿ ನೀಡಿದ ಸಚಿವ ಬಿ.ಶ್ರೀರಾಮುಲು

ನಗರ ಶಾಸಕ ಸೋಮಶೇಖರ್‌ ರೆಡ್ಡಿ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಕಾರ್ಪೂರೇಟರ್‌ಗಳೇ ಕಚೇರಿ ಪ್ರಾರಂಭಿಸಿಲ್ಲ. ಆದರೆ, ಚುನಾವಣೆಯಲ್ಲಿ ಸೋತರು ಕಚೇರಿ ಆರಂಭಿಸಿರುವ ವಿ. ಅನೂಪ್‌ಕುಮಾರ್‌ಅವರನ್ನು ಅಭಿನಂದಿಸುತ್ತೇನೆ. ಈ ಜನ ಸಂಪರ್ಕ ಕಚೇರಿಯಿಂದ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.

ಬಿಜೆಪಿ ಯುವ ಮುಖಂಡರಾದ ವಿ. ಅನೂಪ್‌ ಕುಮಾರ್‌ ಮಾತನಾಡಿ, ಚುನಾವಣೆ ಪ್ರಚಾರ ಸಮಯದಲ್ಲಿ ಕೊಟ್ಟ ಮಾತಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕಚೇರಿ ಪ್ರಾರಂಭಿಸಿದ್ದೇನೆ. ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಅಲ್ಲದೇ ವಾರ್ಡಿನಲ್ಲಿನ ಕುಡಿಯುವ ನೀರು, ವಿದ್ಯುತ್‌, ಚರಂಡಿ ದುರಸ್ತಿ ಸಮಸ್ಯೆ, ಸ್ವಚ್ಛತೆ, ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಾರ್ಡಿನಲ್ಲಿನ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದರು.

ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಂಸ್ಥಾಪಕ ಸಂಪಾದಕ ವಿ. ವಿಜಯ್‌ಕುಮಾರ್‌ಮಾತನಾಡಿದರು. ಮಾಜಿ ಸಂಸದರಾದ ಸಣ್ಣ ಫಕ್ಕೀರ, ರಾಬಕೋ ನಿರ್ದೇಶಕರಾದ ವೀರ ಶೇಖರ್‌ರೆಡ್ಡಿ, ವಿ.ವಿ. ಸಂಘದ ಗೋನಾಳ್‌ರಾಜ ಶೇಖರ್‌ಗೌಡ, ಪಾಲಿಕೆ ಸದಸ್ಯರಾದ ಇಬ್ರಾಹಿಂ ಬಾಬು, ಶ್ರೀನಿವಾಸ್‌ಮೊತ್ಕರ್‌, ಕೋನಂಕಿ ತಿಲಕ್‌, ಹನುಮಂತ ಗುಡಿಗಂಟೆ, ಹನುಮಂತು, ಗೋವಿಂದ ರಾಜು, ಅಶೋಕ್‌, ಬಿಜೆಪಿ ಮುಖಂಡರಾದ ದಿವಾಕರ್‌, ಓಬಳೇಶ, ಪ್ರಸಾದ್‌, ವೆಂಕಟ ರಾಮರೆಡ್ಡಿ, ಉಜ್ವಲಾ, ಭೀಮಲಿಂಗ, ವಿ.ಕೆ ಬಸಪ್ಪ, ವಾರ್ಡಿನ ಮುಖಂಡರು ಇದ್ದರು.
 

Follow Us:
Download App:
  • android
  • ios