ಹುಬ್ಬಳ್ಳಿ(ಮಾ.07): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಜೋಡೆತ್ತುಗಳು ಅಲ್ಲ. ಅವರು ಕಾದಾಟದ ಹೋರಿಗಳು. ಸಿಎಂ ಕುರ್ಚಿ ಆಸೆಗಾಗಿ ಬಡಿದಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

"

ಇಂದು(ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ರಾಜಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಹಲವರ ಕೈವಾಡ ಇದೆ. ಕಾಂಗ್ರೆಸ್ ನಾಯಕರು, ಸಂಘ ಸಂಸ್ಥೆಗಳು, ಬೇರೆ ಯಾರೆಲ್ಲಾ ಇದ್ದಾರೆ ಅನ್ನೋದು ತನಿಖೆಯಿಂದ ಹೊರ ಬರಬೇಕಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರ ತೇಜೋವಧೆ ಯತ್ನ ನಡೆಯುತ್ತಿದೆ. ಇದೇ ಕಾರಣಕ್ಕೆ 6 ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

'ಮೋದಿ ಟೀಕಿಸಲು ಎಚ್‌.ಕೆ. ಪಾಟೀಲ್‌ಗೆ ಹಕ್ಕಿಲ್ಲ'

ಸಿಡಿ ಅಂದ ಕೂಡಲೇ ರಾಸಲೀಲೆ, ಹನಿಟ್ರ್ಯಾಪ್‌ ಇರಲ್ಲ. ಫೋನ್ ಸಂಭಾಷಣೆ. ದಾಖಲಾತಿ ವಿಚಾರ ಸಹ ಸಿಡಿಯಲ್ಲಿ ಇರಬಹುದು. ತೇಜೋವಧೆ ಆದ ನಂತರ ನಾಯಕರ ಗೌರವ ಕಡಿಮೆ ಆಗುತ್ತೆ. ಹೀಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿ ಸರ್ಕಾರ ಹಾಗೂ ಸಚಿವರ  ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಶ್ರೀರಾಮುಲು ಶಕ್ತಿ ಕುಂದಿಲ್ಲ. ನಾನು ರಾಜ್ಯ ಪ್ರವಾಸ ಮಾಡುತ್ತಾ ಅಭಿವೃದ್ಧಿ ಮಾಡುತ್ತಿದ್ದೇನೆ. ಸ್ಥಾನಮಾನ ನೀಡುವ ಬಗ್ಗೆ ನಾನು ಏನನ್ನು ಕೇಳಲ್ಲ, ಬೇಸರವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.