ಸಿದ್ದರಾಮಯ್ಯಗಿಂತ ಹೆಚ್ಚು ಕಾನೂನು ನಂಗೊತ್ತು: ಬಿ.ಸಿ.ಪಾಟೀಲ್
ಸುಪ್ರೀಂ ಕೋರ್ಟ್, ಜನತಾ ನ್ಯಾಯಾಲಯಕ್ಕಿಂತ ನೀವು ದೊಡ್ಡವ್ರಾ?|ಸಿದ್ದರಾಮಯ್ಯ ಲೇವಡಿ ಮಾಡಿದ ನೂತನ ಸಚಿವ ಬಿ. ಸಿ. ಪಾಟೀಲ|ಪೊಲೀಸ್ ಅಧಿಕಾರಿಯಾಗಿ 25 ವರ್ಷದ ಸೇವೆ ಮಾಡಿದ್ದೇನೆ|ಸಿದ್ದರಾಮಯ್ಯ ಸಹ ಜೆಡಿಎಸ್‌ನಿಂದ ರಾಜಿನಾಮೆ ಕೊಟ್ಟು, ಕಾಂಗ್ರೆಸ್ಸಿಗೆ ಬಂದವರು|
ದಾವಣಗೆರೆ(ಫೆ.10): ಕಾನೂನಿನ ಬಗ್ಗೆ ಸಿದ್ದರಾಮಯ್ಯಗಿಂತ ಹೆಚ್ಚು ಅರಿವು ನನಗಿದೆ. 25 ವರ್ಷ ಪೊಲೀಸ್ ಇಲಾಖೆ ಸೇವೆ ಸಲ್ಲಿಸಿದವನು ನಾನು ಎನ್ನುವ ಮೂಲಕ ನೂತನ ಸಚಿವ ಬಿ.ಸಿ.ಪಾಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿಗೆ ಅಷ್ಟೇ ತೀಕ್ಷವಾಗಿ ತಿರುಗೇಟು ನೀಡಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ 25 ವರ್ಷದ ಸೇವೆಯಲ್ಲಿ 1015 ಸಾವಿರ ಎಫ್‌ಐಆರ್, ಚಾರ್ಚ್ ಶೀಟ್‌ಗೆ ಸಹಿ ಮಾಡಿದವನು ನಾನು. ಆ ಕೇಸ್‌ಗಳು ನ್ಯಾಯಾಲಯಕ್ಕೆ ಹೋದ ಮೇಲೆ ವಕೀಲರು ಕೆಲಸ ಮಾಡುತ್ತಾರೆ ಎಂದು ಸಿದ್ದರಾಮಯ್ಯಗೆ ಅವರು ಟಾಂಗ್ ಕೊಟ್ಟರು.
ಹರಿಹರ ತಾ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್‌ಪಿಸಿ, ಐಪಿಸಿ ಕಾಯ್ದೆಗಳ ಬಗ್ಗೆ ಪೊಲೀಸ್ ಇಲಾಖೆ ಪ್ರೊಬೇಷನರಿ ಅವಧಿಯಲ್ಲಿ ತರಬೇತಿ ನೀಡುತ್ತಾರೆ. ಆ ತರಬೇತಿ ಪಡೆದೇ ನಾನು ಪೊಲೀಸ್ ಇಲಾಖೆಯಲ್ಲಿ 25 ವರ್ಷದ ಕಾಲ ಕೆಲಸ ಮಾಡಿದ್ದೇನೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲದೇ, ಕಾನೂನಿನ ಅರಿವಿಲ್ಲದಿದ್ದರೆ ಪೊಲೀಸ್ ಇಲಾಖೆಯಲ್ಲಿ ಎರಡೂವರೆ ದಶಕದ ಕಾಲ ನಾನು ಕೆಲಸವನ್ನೇ ಮಾಡಲು ಆಗುತ್ತಿರಲಿಲ್ಲ. ಕಾನೂನಿನ ಬಗ್ಗೆ ವಿಪಕ್ಷ ನಾಯಕನಿಗಿಂತಲೂ ಹೆಚ್ಚಿನ ಅರಿವು, ಜ್ಞಾನವಂತೂ ನನಗಿದೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.
ಅನರ್ಹರೆಂಬ ಸಿದ್ದು ಹೇಳಿಕೆ, 'ಬಿಸಿ’ಪಾಟೀಲ್ ತಿರುಗೇಟು
ಜನತಾ ನ್ಯಾಯಾಲಯಕ್ಕಿಂತಲೂ ದೊಡ್ಡ ನ್ಯಾಯಾಲಯ ಮತ್ತೊಂದು ಇಲ್ಲ ಎಂಬುದನ್ನು ಪದೇಪದೇ ಅನರ್ಹ ಶಾಸಕರೆಂದು ಟೀಕಿಸುತ್ತಿರುವ ಸಿದ್ದರಾಮಯ್ಯ ಅರಿಯಲಿ ಎಂದು ಕಿವಿಮಾತು ಹೇಳಿದ್ದಾರೆ.
ಹರಿಹರ ತಾ. ರಾಜನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ನ್ಯಾಯಾಲಯದಲ್ಲಿ ಗೆದ್ದರೆ ಅರ್ಹರಾಗುತ್ತಾರೆಂಬುದಾಗಿ ಸರ್ವೋಚ್ಛ ನ್ಯಾಯಾಲಯವೇ ಹೇಳಿತ್ತು. ಜನತಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಬೆಲೆ ನೀಡಿದೆ ಎಂದರು.
ನಾನೂ ಸೇರಿದಂತೆ ಅನೇಕರು ಇದೇ ಜನತಾ ನ್ಯಾಯಾಲಯದಲ್ಲಿ ಗೆದ್ದು ಮಂತ್ರಿಯಾಗಿದ್ದೇವೆ. ಈಗ ಅನರ್ಹತೆಯ ಪ್ರಶ್ನೆ ಎಲ್ಲಿ ಬರುತ್ತದೆ ಸಿದ್ದರಾಮಯ್ಯನವರೇ? ಕಾನೂನು ಪದವೀಧರರಾದ, ವಕೀಲರೂ ಆಗಿ ಸೇವೆ ಸಲ್ಲಿಸಿದ್ದೇನೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಯಾವ ರೀತಿಯ ಕಾನೂನು ತಿಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಏನು ಸುಪ್ರೀಂ ಕೋರ್ಟ್‌ಗಿಂತಲೂ ದೊಡ್ಡವರಾ? ಜನತಾ ನ್ಯಾಯಾಲಯಕ್ಕಿಂತಲೂ ದೊಡ್ಡವರಾ? ಸಿದ್ದರಾಮಯ್ಯ ಸಹ ಜೆಡಿಎಸ್‌ನಿಂದ ರಾಜಿನಾಮೆ ಕೊಟ್ಟು, ಕಾಂಗ್ರೆಸ್ಸಿಗೆ ಬಂದವರು ಎಂಬುದನ್ನು ಮರೆಯಬಾರದು ಎಂದು ಟಾಂಗ್ ನೀಡಿದರು.
ಬಾದಾಮಿಯಲ್ಲಿ ಕಾಂಗ್ರೆಸ್‌ನ ಇದೇ ಮಾಜಿ ಮುಖ್ಯಮಂತ್ರಿ ಇದೇ ಸಿದ್ದರಾಮಯ್ಯ ಗೆದ್ದಿದ್ದು ಕೇವಲ 154 ಮತಗಳ ಅಂತರದಲ್ಲಿ. ಆದರೆ, ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್ ಗೆದ್ದಿದ್ದು 29,067 ಮತಗಳಿಂದ. ಜನರು ನಮ್ಮ ನಿರ್ಣಯಕ್ಕೆ ಬೆಂಬಲ ನೀಡಿದ್ದಾರೆ. ಜನತಾ ನ್ಯಾಯಾಲಯದಲ್ಲೂ ನಾವು ಗೆದ್ದಿದ್ದೇವೆ ಎಂದು ಸಿದ್ದರಾಮಯ್ಯಟೀಕೆಗಳಿಗೆ ಬಿ.ಸಿ.ಪಾಟೀಲ್ ಸರಣಿ ವಾಗ್ದಾಳಿ ನಡೆಸಿದರು.