Asianet Suvarna News Asianet Suvarna News

ರೈತರ ಬೆಳೆ ಅಪ್‌ಲೋಡ್‌ಗೆ ಪ್ರತ್ಯೇಕ ಆ್ಯಪ್‌: ಕೃಷಿ ಸಚಿವ ಬಿ.ಸಿ. ಪಾಟೀಲ

ಇನ್ಮುಂದೆ ರೈತರೇ ತಮ್ಮ ಬೆಳೆಯನ್ನು ದಾಖಲಿಸಲಿ| ಅಧಿಕಾರಿಗಳ ಯಡವಟ್ಟಿನಾಗುತ್ತಿರುವ ತಪ್ಪಿಗೆ ಪರಿಹಾರ| ಸರ್ಕಾರದಿಂದ ಶೀಘ್ರವೇ ಬರಲಿದೆ ಕೃಷಿ ಆ್ಯಪ್‌| ಮುಂಗಾರಿಗೆ ಆಗದಿದ್ದರೂ ಹಿಂಗಾರಿಗಂತೂ ಅನುಷ್ಠಾನ ಮಾಡಲಾಗುವುದು: ಕೃಷಿ ಸಚಿವ ಬಿ.ಸಿ. ಪಾಟೀಲ|
 

Minister B C Patil Says Separate app for farmers crop upload
Author
Bengaluru, First Published Jun 7, 2020, 7:13 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.07): ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ ರೈತರಿಗೆ ವರವಾಗಿದ್ದರೂ ತಾಂತ್ರಿಕ ಸಮಸ್ಯೆ ಮತ್ತು ಅಧಿಕಾರಿಗಳ ಅಸಡ್ಡೆತನದಿಂದ ರೈತರಿಗೆ ಸಿಗುವ ಲಾಭ ತಪ್ಪುತ್ತಿದೆ. ಹೀಗಾಗಿ, ಇದನ್ನು ಸರಿದಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್‌ ಸಿದ್ಧ ಮಾಡಿದ್ದು, ಪ್ರಸಕ್ತ ವರ್ಷದ ಮುಂಗಾರು ಬೆಳೆಗೆ ಆಗದಿದ್ದರೂ ಹಿಂಗಾರು ಬೆಳೆಯ ವೇಳೆಗೆ ಅನುಷ್ಠಾನಕ್ಕೆ ಬರಲಿದೆ.

ಇದರಿಂದ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯ ಜೊತೆಗೆ ರಾಜ್ಯದ ರೈತರು ವಾಸ್ತವವಾಗಿ ಏನೇನು ಬೆಳೆಯುತ್ತಿದ್ದಾರೆ. ಯಾವ ಬೆಳೆಯಿಂದ ಎಷ್ಟುಉತ್ಪಾದನೆ ಬರಬಹುದು ಎನ್ನುವ ಲೆಕ್ಕಾಚಾರವೂ ಸಿಗಲಿದೆ ಎನ್ನುವುದು ರಾಜ್ಯ ಸರ್ಕಾರದ ಲೆಕ್ಕಾಚಾರ. ಹೀಗಾಗಿ, ಈಗಾಗಲೇ ಆ್ಯಪ್‌ ಸಿದ್ಧ ಮಾಡಲಾಗಿದ್ದು, ಇದನ್ನು ಅನುಷ್ಠಾನ ಮಾಡುವ ಕಾರ್ಯ ಭರದಿಂದ ಸಾಗಿದೆ.

ಕೋವಿಡ್‌ ವಿರುದ್ಧ ಹೋರಾಟ: ಕೊಪ್ಪಳದಲ್ಲಿ ಕೊರೋನಾ ಲ್ಯಾಬ್‌ ಆರಂಭ

ಏನಿದು ಆ್ಯಪ್‌:

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ ಸೇರಿದಂತೆ ರೈತರು ಸರ್ಕಾರದ ಸೌಲಭ್ಯವನ್ನು ಪಡೆಯಲು ಈಗ ಹೊಲದಲ್ಲಿ ಏನೇನು ಬೆಳೆದಿದ್ದಾರೆ ಎನ್ನುವುದನ್ನು ಅಪ್‌ಲೋಡ್‌ ಮಾಡುವ ಪ​ದ್ಧತಿ ಇದೆ. ಇದರಲ್ಲಿ ರೈತ ಅನುವುಗಾರರು ಸೇರಿದಂತೆ ವಿವಿಧ ಹಂತದ ನೌಕರರು ಅಪ್‌ಲೋಡ್‌ ಮಾಡುತ್ತಾರೆ. ಹೀಗೆ, ಅಪ್‌ಲೋಡ್‌ ಮಾಡುವ ವೇಳೆಯಲ್ಲಿ ಒಂದೇ ಸರ್ವೇ ನಂಬರ್‌ನಲ್ಲಿ ನಾಲ್ಕಾರು ರೈತರ ಭೂಮಿ ಇರುವುದರಿಂದ ತಪ್ಪು, ತಪ್ಪಾಗಿ ಅಪ್‌ಲೋಡ್‌ ಆಗುತ್ತದೆ. ಇದರಿಂದ ರೈತರಿಗೆ ಪರಿಹಾರ ಸಿಗದಂತೆ ಆಗುತ್ತಿದೆ. ಈ ದೋಷವನ್ನು ಸರಿ ಮಾಡಿ, ರೈತರ ಬೆಳೆ ಅಫ್‌ಲೋಡ್‌ಗಾಗಿ ಪ್ರತ್ಯೇಕ ಆ್ಯಪ್‌ ಸಿದ್ಧ ಮಾಡಲಾಗಿದೆ.

ರೈತರು ಅಪ್‌ಲೋಡ್‌ ಮಾಡಲಿ:

ರೈತರೇ ತಮ್ಮ ಹೊಲದಲ್ಲಿ ಏನು ಬೆಳೆದಿದ್ದೇವೆ ಎನ್ನುವುದನ್ನು ತಾವೇ ತಮ್ಮ ಹೊಲದಲ್ಲಿ ನಿಂತು ಫೋಟೋ ತೆಗೆದು ಅಪ್‌ಲೋಡ್‌ ಮಾಡಬೇಕು. ಹೀಗೆ ಮಾಡುವುದರಿಂದ ರೈತರು ತಾವು ಬೆಳೆದಿದ್ದ ಬೆಳೆಯನ್ನೇ ಪೋಟೋದಲ್ಲಿ ಮತ್ತು ನಮೂನೆಯಲ್ಲಿ ದೃಢೀಕರಿಸುವುದರಿಂದ ಸಮಸ್ಯೆಯಾಗುವುದಿಲ್ಲ. ಅಲ್ಲದೆ ಬೆಳೆ ವಿಮಾ ಪರಿಹಾರ ಸೇರಿದಂತೆ ಸರ್ಕಾರ ನೀಡುವ ಸಹಾಯಧನವನ್ನು ಒಳಗೊಂಡು ರೈತರಿಗೆ ಅನು​ಕೂ​ಲ​ವಾ​ಗಲಿದೆ.

ಕೈತಪ್ಪಿದ ಪರಿಹಾರ:

ಈ ಹಿಂದೆ ನಾಲ್ಕು ವರ್ಷ ಸತತ ಬರ ಬಿದ್ದಾಗ ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆಗೆ ಅರ್ಹವಾಗಿದ್ದರೂ ಬೆಳೆ ನಮೂದಿಸುವಲ್ಲಿ ಆದ ತಪ್ಪಿನಿಂದಾಗ ರೈತರು ಬೆಳೆ ವಿಮಾ ಪರಿಹಾರದಿಂದ ವಂಚಿತರಾಗಿದ್ದಾರೆ. ಈ ಕುರಿತು ರಾಜ್ಯಾದ್ಯಂತ ಹಲವು ಜಿಲ್ಲೆಯಲ್ಲಿ ಸಾವಿರಾರು ರೈತರು ಇದರ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ಇದನ್ನು ಇತ್ಯರ್ಥ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಆದರೂ ಅದು ನಿವಾರಣೆಯಾಗುತ್ತಲೇ ಇಲ್ಲ. ಹೀಗಾಗಿ, ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್‌ ಮಾಡುವ ಮೂಲಕ ಸಮಸ್ಯೆ ನಿವಾರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ರೈತರ ಬೆಳೆ ದಾಖಲಿಸುವಲ್ಲಿ ಆಗುತ್ತಿರುವ ದೋಷದಿಂದ ರೈತರಿಗೆ ಸಿಗಬೇಕಾದ ಸಹಾಯಧನ ಮತ್ತು ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಿಂದ ರೈತರು ವಂಚಿತರಾಗುವಂತಾಗಿದೆ. ಹೀಗಾಗಿ, ಇದಕ್ಕಾಗಿ ಪ್ರತ್ಯೇಕ ಆ್ಯಪ್‌ ಸಿದ್ಧ ಮಾಡಲಾಗಿದ್ದು, ಮುಂಗಾರಿಗೆ ಆಗದಿದ್ದರೂ ಹಿಂಗಾರಿಗಂತೂ ಅನುಷ್ಠಾನ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios