ಕೊಪ್ಪಳ(ಜೂ.06): ಇಲ್ಲಿ​ನ ಕಿಮ್ಸ್‌ನಲ್ಲಿ ಕೋವಿಡ್‌-19 ಸ್ಕ್ರೀನಿಂಗ್‌ ಪರೀಕ್ಷೆ ಹಾಗೂ ಆರ್‌ಟಿಪಿಸಿಆರ್‌ ಪ್ರಯೋಗಾಲಯದಿಂದ ಕೋವಿಡ್‌ ನೆಗೆಟಿವ್‌ ಮತ್ತು ಇತರೆ ಲಕ್ಷಣಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್‌ ಹೇಳಿದರು.

ಶುಕ್ರವಾರ ಕೊಪ್ಪಳದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌)ನಲ್ಲಿ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಉದ್ಘಾಟನೆ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಈ ಪ್ರಯೋಗಾಲಯಕ್ಕೆ ಎಸ್‌ಡಿಆರ್‌ಎಫ್‌ ನಿಧಿಯಲ್ಲಿ ಸಿವಿಲ್‌ ಕಾಮಗಾರಿಗೆ 23.70 ಲಕ್ಷ ಹಣ ಖರ್ಚು ಮಾಡಲಾಗುತ್ತಿದ್ದು, ಪ್ರಯೋಗಾಲಯದ ಉಪಕರಣಗಳ ಖರೀದಿ ಮೊತ್ತ 111.93 ಲಕ್ಷ ಆಗಲಿದೆ. ಟ್ರೂನಾಟ್‌ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 20 ರಿಂದ 25 ಜನ ಹಾಗೂ ಪ್ರತಿ ದಿನ 40 ರಿಂದ 50 ಪರೀಕ್ಷೆಗಳನ್ನು ಮಾಡಲಾಗುತ್ತದೆ. ಆರ್‌ಟಿಪಿಸಿಆರ್‌ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 70 ರಿಂದ 75 ಜನರು ಹಾಗೂ ಪ್ರತಿದಿನ 140-145 ಪರೀಕ್ಷೆಗಳನ್ನು ಮಾಡಲಾಗುವುದು. ಸ್ಕ್ರೀನಿಂಗ್‌ ಪರೀಕ್ಷೆ, ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಸಂಶೋಧನಾ ವಿಜ್ಞಾನಿಗಳು, ಸಂಶೋಧನಾ ಸಹಾಯಕರು, ಪ್ರಯೋಗಶಾಲಾ ತಜ್ಞರು ಮಾಡುತ್ತಾರೆ ಎಂದು ಸಚಿವರು ತಿಳಿಸಿದರು.

ಶಾಸಕರ ಮನೆಗೆ ಊಟಕ್ಕೆ ಹೋ​ಗಲು ಭಯವಾಗುತ್ತದೆ: ಸಚಿವ ಬಿ.ಸಿ. ಪಾಟೀಲ್‌

ಆರಂಭದಲ್ಲಿ ಪ್ರಾಯೋಗಿಕವಾಗಿ 55 ಪರೀಕ್ಷೆಗಳನ್ನು ಮಾಡಿದ್ದು, ಎಲ್ಲ 55 ಪರೀಕ್ಷೆಗಳು ನೆಗೆಟಿವ್‌ ಬಂದಿವೆ. ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರೂ ಯಾರೂ ಗಾಬರಿ ಪಡಬೇಕಾಗಿಲ್ಲ. ಏಕೆಂದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ವಯಸ್ಸಾದವರು ಮರಣ ಹೊಂದುತ್ತಿದ್ದರೂ, ಮರಣ ಪ್ರಮಾಣ ಬಹಳ ಕಡಿಮೆ ಇದೆ. ಕೆಲವೊಬ್ಬರಿಗೆ ಯಾವುದೇ ಕೊರೋನಾ ಲಕ್ಷಣಗಳು ಕಂಡುಬರದಿದ್ದರೂ ಅವರಿಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ಕಂಡುಬಂದಿದೆ. ಬಹುತೇಕ ಮಹಾರಾಷ್ಟ್ರದಿಂದ ಬಂದವರಿಂದಲೇ ಪಾಸಿ​ಟಿವ್‌ ವರದಿ ಬಂದಿ​ದೆ ಎಂದು ಮಾಹಿತಿ ನೀಡಿದರು.

ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೆಜ್‌ ಅನ್ನು ಘೋಷಣೆ ಮಾಡಿದೆ. ರಾಜ್ಯ ಸರ್ಕಾರದಿಂದಲೂ ಕೂಡ ಸಂಕಷ್ಟದಲ್ಲಿರುವ ವರ್ಗಗಳಿಗೆ ಪರಿಹಾರವನ್ನು ನೀಡಿದ್ದು, ಮೆಕ್ಕೆಜೋಳಕ್ಕಾಗಿ 500 ಕೋಟಿ ಅನುದಾನವನ್ನು ರೈತರಿಗಾಗಿ ರಾಜ್ಯ ಸರ್ಕಾರ ಘೊಷಿಸಿದೆ. ರೈತರು ತಮ್ಮ ಬ್ಯಾಂಕ್‌ ಖಾತೆಗೆ ಚಾಲ್ತಿಯಲ್ಲಿರುವ ಆಧಾರ್‌ ಕಾರ್ಡ್‌ ಜೋಡಣೆ ಮಾಡಬೇಕು. ಕೆಲವೊಂದು ರೈತರು ಖಾತೆಯ ಸರಿಯಾದ ಮಾಹಿತಿ ನೀಡದ ಕಾರಣದಿಂದ ರೈತರ ಖಾತೆಗೆ ಹಾಕಿದ ಹಣ ಬೇರೆ ಬೇರೆ ಖಾತೆಗೆ ಸಂದಾಯವಾಗಿರುವ ದೂರುಗಳು ಕೇಳಿಬಂದಿದೆ ಎಂದು ಸಚಿವರು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಅನುವುಗಾರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯುವುದಿಲ್ಲ. ಅವರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. 2015-16ನೇ ಸಾಲಿನ ವಿಮೆಗಾಗಿ ಅಧಿಕಾರಿಗಳ ಸಭೆ ಕರೆದು, ಸೆಟೆಲ್‌ಮೆಂಟ್‌ ಮಾಡಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಚ್‌. ವಿಶ್ವನಾಥ ರೆಡ್ಡಿ, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಪಾಟೀಲ್‌ ಬಯ್ಯಾಪೂರ, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್‌ ಮೂರ್ತಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಶೇಖ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗರಾಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್‌.ಬಿ. ದಾನರೆಡ್ಡಿ, ಕಿಮ್ಸ್‌ ನಿರ್ದೇಶಕ ಡಾ. ವಿಜಯನಾಥ ಇಟಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವೀಕ್ಷಣೆ:

ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು.

ಚೆಕ್‌ ವಿತರಣೆ:

ಕೊಪ್ಪಳ ತಾಲೂಕಿನ ಹೊಸನಿಂಗಾಪುರ ಗ್ರಾಮದ ಬ್ರೈನ್‌ ಟ್ಯೂಮರ್‌ನ ಕಾರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 40,000 ಗಳ ಚೆಕ್‌ನ್ನು ಸಚಿವರು ವಿತರಿಸಿದರು.