ಕೊಪ್ಪಳ: ಬೆಟಗೇರಿ ಏತನೀರಾವರಿ ಯೋಜನೆ ವಿವಾದ, ಉಸ್ತುವಾರಿ ಸಚಿವರ ಮಧ್ಯ ಪ್ರವೇಶ

ಮರು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ| ಪೂರ್ಣಗೊಂಡಿರುವ ಬೆಟಗೇರಿ ಏತನೀರಾವರಿ ಯೋಜನೆ ಮರು ಪರಾಮರ್ಶೆ| ಸರ್ಕಾರದ ಅಂಗಳಕ್ಕೆ ಮರು ಪ್ರಸ್ತಾವನೆ| ರೈತರ ಅನುಕೂಲಕ್ಕಾಗಿ ಅಗತ್ಯ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದ ಸಂಸದ ಸಂಗಣ್ಣ ಕರಡಿ|

Minister B C Patil Interfear on Betageri Irrigation Project Controversy in Koppal

ಕೊಪ್ಪಳ(ಜೂ.08): ಸುಮಾರು 6 ಸಾವಿರ ಎಕರೆ ಪ್ರದೇಶಕ್ಕೆ ನೀರೊದಗಿಸುವ ಬೆಟಗೇರಿ ಏತನೀರಾವರಿ ಯೋಜನೆಗೆ ಈಗಾಗಲೇ 86 ಕೋಟಿ ವೆಚ್ಚ ಮಾಡಿದ್ದರೂ ಸ್ಥಳೀಯವಾಗಿಯೇ ಬೆಟಗೇರಿ ಗ್ರಾಮದ ಸೀಮೆ ವ್ಯಾಪ್ತಿಗೆ ನೀರಿಲ್ಲ ಎನ್ನುವ ಕಾರಣಕ್ಕಾಗಿ ವಿವಾದಕ್ಕೀಡಾಗಿದೆ. ಯೋಜನೆ ಪೂರ್ಣಗೊಂಡು, ಇನ್ನೇನು ವಿದ್ಯುತ್‌ ಸಂಪರ್ಕ ನೀಡಿದರೆ ಸಾಕು, ರೈತರ ಭೂಮಿಗೆ ನೀರುಣಿಸಬಹುದಾಗಿದೆ. ವಿವಾದಕ್ಕೀಡಾಗಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಈ ಯೋಜನೆಯ ಕುರಿತು ಸಾಕಷ್ಟು ಸಭೆಗಳಾಗಿವೆ ಮತ್ತು ಸಂಧಾನ ಮಾಡುವ ಪ್ರಯತ್ನವೂ ನಡೆದಿದೆ. ಇದರ ನಡುವೆಯೂ ನ್ಯಾಯಾಲಯದ ಕದ ತಟ್ಟ​ಲಾ​ಗಿ​ದೆ

ಸಚಿವರ ಎಂಟ್ರಿ:

ಕೊಪ್ಪಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಈ ಕುರಿತು ಪ್ರತ್ಯೇಕ ಸಭೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಬೆಟಗೇರಿ ಗ್ರಾಮಸ್ಥರ ಅಹವಾಲು ಆಲಿಸಿ, ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಸುಮಾರು ವರ್ಷಗಳ ಹೋರಾಟದ ಫಲವಾಗಿ ಬೆಟಗೇರಿ ಏತನೀರಾವರಿ ಯೋಜನೆ ಜಾರಿ ಮಾಡಲಾಗಿದೆ. ಈಗ ಬೆಟಗೇರಿ ಏತನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 6 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಪ್ರದೇಶ ಗುರುತಿಸಿದ್ದರೂ ಬೆಟಗೇರಿ ಗ್ರಾಮದ ಸೀಮಾಕ್ಕೆ ಹನಿ ನೀರು ಬರುತ್ತಿಲ್ಲ.

ಕೋವಿಡ್‌ ವಿರುದ್ಧ ಹೋರಾಟ: ಕೊಪ್ಪಳದಲ್ಲಿ ಕೊರೋನಾ ಲ್ಯಾಬ್‌ ಆರಂಭ

ಬೆಟಗೇರಿ ಗ್ರಾಮ ಸೀಮಾ ಈಗಾಗಲೇ ಸಿಂಗಟಾಲೂರು ಏತನೀರಾವರಿ ಯೋಜನೆಯ ವ್ಯಾಪ್ತಿಗೆ ಬರುತ್ತಿರುವುರಿಂದ ಮತ್ತೊಂದು ಯೋಜನೆಯ ವ್ಯಾಪ್ತಿಗೆ ಸೇರಿಸಲು ಬರುವುದಿಲ್ಲ ಎಂದು ಕೈಬಿಡಲಾಗಿತ್ತು. ಆದರೆ, ಈ ಕುರಿತು ಬೆಟಗೇರಿ ಗ್ರಾಮದ ಕೆಲವರು ಬಲವಾಗಿ ವಿರೋಧಿಸಿದ್ದು, ಅಲ್ಲದೆ ನಮ್ಮೂರಿಗೆ ನೀರು ಕೊಡದಿದ್ದರೆ ಯೋಜನೆ ಜಾರಿಗೆ ಅವ​ಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ವಿವಾದವಾಯಿತು.

ಮಧ್ಯ ಪ್ರವೇಶ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬೆಟಗೇರಿ ಗ್ರಾಮದ ರೈತರಿಗೂ ಅನುಕೂಲವಾಗಲಿ ಎಂದು ಡಿಲೇವರಿ ಚೇಂಬರ್‌ ಅಳವಡಿಸಿದರು. ಸ್ವತಃ ನೀರಾವರಿ ಇಲಾಖೆಯ ಎಂಜಿನೀಯರ್‌ ಲಿಖಿತವಾಗಿ ಬರೆದುಕೊಟ್ಟು, ನೀರಾವರಿ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಈಗ ಬೆಟಗೇರಿ ಗ್ರಾಮಕ್ಕೂ ಪ್ರತ್ಯೇಕ ಡಿಲೇವರಿ ಚೇಂಬರ್‌ ಕೂಡಿಸಲಾಗಿದೆ. ಆದರೆ, ಇದು ನೀರಾವರಿ ಇಲಾಖೆಯ ಪ್ರಕಾರ ಅಧಿಕೃತವಲ್ಲ. ಅಲ್ಲದೆ ಉಪಕಾಲುವೆ ನಿರ್ಮಾಣ ಮಾಡಿಲ್ಲ ಎಂದು ಬೆಟಗೇರಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಯೋಜನೆಯಲ್ಲಿಯೇ ಬೆಟಗೇರಿ ಗ್ರಾಮದ ಸೀಮಾಕ್ಕೂ ನೀರು ನೀಡುವ ಕುರಿತು ಡಿಪಿಆರ್‌ ಆಗಲಿ ಎಂದು ಪಟ್ಟು ಹಿಡಿದಿದ್ದಾರೆ.

ಮಧ್ಯ ಪ್ರವೇಶ:

ಈಗ ಸಂಸದ ಸಂಗಣ್ಣ ಕರಡಿ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ರೈತರ ಅನುಕೂಲಕ್ಕಾಗಿ ಅಗತ್ಯ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು ಎನ್ನಲಾಗಿದೆ. ಈ ವೇಳೆಯಲ್ಲಿ ಕೂಡಲೇ ಇದರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು. ಇದಕ್ಕಾಗಿ ಬೇಕಾಗುವ ಮೊತ್ತ ಸುಮಾರು . 3 ಕೋಟಿಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಸಚಿವ ಬಿ.ಸಿ. ಪಾಟೀಲ ಅವರು ಭರವಸೆ ನೀಡಿದ್ದಾರೆ. ಅಲ್ಲದೆ ಬೆಟಗೇರಿ ಗ್ರಾಮ ಸೀಮಾ ವ್ಯಾಪ್ತಿಗೆ ನೀರು ನೀಡುವುದಕ್ಕೆ ಹಾಗೂ ಉಪಕಾಲುವೆ ನಿರ್ಮಾಣಕ್ಕೂ ಆದೇಶ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ರೈತರ ಎದುರಲ್ಲೇ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ ಗುಂಗೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, ಕೂಡಲೇ ಸಮಸ್ಯೆ ಇತ್ಯರ್ಥ ಮಾಡುವಂತೆ ಸೂಚಿಸಿದ್ದಾರೆ. ಸ್ಥಳೀಯ ನೀರಾವರಿ ಇಲಾಖೆಯ ಅಧಿಕಾರಿಗಳು ಅದಕ್ಕೆ ಅಗತ್ಯ ಪ್ರಸ್ತಾವನೆಯನ್ನು ಸೋಮವಾರವೇ ಕಳುಹಿಸಿಕೊಡುವಂತೆಯೂ ಸೂಚಿಸಿದ್ದಾರೆ

ಸಚಿವರು ಬೆಟಗೇರಿ ಏತನೀರಾವರಿ ಯೋಜನೆಯಲ್ಲಿ ಬೆಟಗೇರಿ ಗ್ರಾಮದ ವ್ಯಾಪ್ತಿಯ ಸೀಮಾಕ್ಕೂ ನೀರು ನೀಡುವ ಕುರಿತು ಉಪಕಾಲುವೆಯನ್ನು ನಿರ್ಮಾಣ ಮಾಡುವುದಕ್ಕೆ 3 ಕೋಟಿಯನ್ನು ಸರ್ಕಾರದಿಂದ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರಸ್ತಾವನೆಯನ್ನು ಕಳುಹಿಸುವಂತೆ ನಮ್ಮೆದುರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಬೆಟ​ಹೇರಿ ಗ್ರಾಮದ ಮುಖಂಡ ವೀರೇಶ ಸಜ್ಜನ ಅವರು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios