ಕೆ.ಸಿ ಜನರಲ್ ಆಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿಗೆ ಫುಡ್ ಕಿಟ್ ವಿತರಣೆ
- ಗ್ರೂಪ್ ಡಿ ಸಿಬ್ಬಂದಿ ಹೆಚ್ಚು ಅಪಾಯದಲ್ಲಿ ಕೆಲಸ ಮಾಡುತ್ತಾರೆಂದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
- ಕೆ.ಸಿ ಜನರಲ್ ಆಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿಗೆ ಫುಡ್ ಕಿಟ್ ವಿತರಣೆ
ಬೆಂಗಳೂರು (ಆ.14): ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸದಾ ಕಾಲ ಜೀವವನ್ನು ಒತ್ತೆ ಇಟ್ಟೇ ಕೆಲಸ ಮಾಡುತ್ತಾರೆ. ಒಂದಿಲ್ಲೊಂದು ಸೋಂಕು-ಕಾಯಿಲೆಗಳ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಾರೆ. ಅದರಲ್ಲೂ ಗ್ರೂಪ್ ಡಿ ಸಿಬ್ಬಂದಿ ಹೆಚ್ಚು ಅಪಾಯದಲ್ಲಿ ಕೆಲಸ ಮಾಡುತ್ತಾರೆಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಆಕ್ಸಾ ಹಾಗೂ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ವತಿಯಿಂದ ನೀಡಲಾದ ಆಹಾರ ಕಿಟ್ ಗಳನ್ನು ಗ್ರೂಪ್ ಡಿ ಸಿಬ್ಬಂದಿಗೆ ವಿತರಿಸಿದರು.
ವೈದ್ಯ ಶಿಕ್ಷಣದಲ್ಲಿ ಆರ್ಥಿಕ ದುರ್ಬಲರಿಗೆ 10% ಮೀಸಲು
ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುವ, ರೋಗಿಗಳ ಹಾಸಿಗೆಗಳ ಬಟ್ಟೆಗಳನ್ನು ಬದಲಿಸುವ, ನೆಲ ಗುಡಿಸುವ, ಒರೆಸುವ ಸಿಬ್ಬಂದಿಯ ಬಗ್ಗೆ ಎಲ್ಲರೂ ಗೌರವಭಾವದಿಂದ ವರ್ತಿಸಬೇಕು. ಅವರ ಕರ್ತವ್ಯಪ್ರಜ್ಞೆಯಿಂದಲೇ ಇಡೀ ಆಸ್ಪತ್ರೆ ಸ್ವಚ್ಛವಾಗಿರುತ್ತದೆ ಎಂದರು.
ಸರಕಾರವೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ವೈದ್ಯರು, ನರ್ಸ್ ಗಳು, ಅರೆ ವೈದ್ಯ ಸಿಬ್ಬಂದಿ, ಗ್ರೂಪ್ ಡಿ ನೌಕರರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ. ಭತ್ಯೆಗಳನ್ನೂ ಹೆಚ್ಚಿಸಲಾಗಿದೆ. ಕೋವಿಡ್ ವಾರಿಯರ್ ಗಳಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಇವರೆಲ್ಲರಿಗೂ ಸರಕಾರ ಬೆನ್ನೆಲುಬಾಗಿ ನಿಂತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಒಟ್ಟು 130 ಸಿಬ್ಬಂದಿ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ಆಕ್ಸಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶ್ರೀಕೃಷ್ಣ, ರಾಜ್ಯ ಸರಕಾರದ ಸಿಎಸ್‌ಆರ್ ಸಂಯೋಜಕ ಕೆ.ವಿ. ಮಹೇಶ್, ಕೆ.ಸಿ ಜನರಲ್ ಆಸ್ಪತ್ರೆಯ ಅಧೀಕ್ಷಕ ಡಾ.ವೆಂಕಟೇಶಯ್ಯ, ಹಿರಿಯ ವೈದ್ಯರು, ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.