Asianet Suvarna News Asianet Suvarna News

ಕೊರೋನಾ ಸ್ಫೋಟ: ಜಿಂದಾಲ್‌ ಸಂಪೂರ್ಣ ಲಾಕ್‌ಡೌನ್‌ಗೆ ಹಿಂದೇಟಿಲ್ಲ, ಸಚಿವ ಸಿಂಗ್‌

ಜಿಂದಾಲ್‌ನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆ: ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಹೇಳಿಕೆ| ಕೊರೋನಾ ವೈರಸ್‌ ಶಂಕಿತ ಹಾಗೂ ಸೋಂಕಿತರ ಗಂಟಲು ದ್ರವ್ಯದ ಮಾದರಿಯನ್ನು ಕೇವಲ ಅರ್ಧಗಂಟೆಯೊಳಗೆ ತಪಾಸಣೆ ನಡೆಸಿ ವರದಿ ನೀಡುವ 4 ಸಾವಿರ ರಾರ‍ಯಪಿಡ್‌ ಆ್ಯಂಟಿಜೆನ್‌ ಕಿಟ್‌ಗಳನ್ನು ಡಿಎಂಎಫ್‌ ಅನುದಾನದ ಅಡಿ ಖರೀದಿಸಲು ನಿರ್ಧಾರ|

Minister Anand Singh Talks Over Jindal Factory Lockdown
Author
Bengaluru, First Published Jun 25, 2020, 8:02 AM IST

ಬಳ್ಳಾರಿ(ಜೂ.25):  ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ ಹಬ್ಬುವಿಕೆಯ ಪ್ರಮಾಣ ಹೆಚ್ಚಾಗಿದೆ. ಪ್ರಾಥಮಿಕ ಸಂಪರ್ಕಿತರ ಶೇಕಡಾವಾರು ಲೆಕ್ಕಾಚಾರದಲ್ಲಿ ಜಿಂದಾಲ್‌ ಶೇ. 15.71 ರಷ್ಟಿದ್ದರೆ, ಜಿಂದಾಲ್‌ ಹೊರತುಪಡಿಸಿ ಶೇ. 2.40ರಷ್ಟು ಮಾತ್ರ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದ್ದಾರೆ. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಂದಾಲ್‌ನಲ್ಲಿ ಈ ವರೆಗೆ 296 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 73 ಜನರು ಗುಣಮುಖರಾಗಿದ್ದಾರೆ. ಇನ್ನು 223 ಜನ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಜಿಂದಾಲ್‌ನಲ್ಲಿ ಸೋಂಕಿನ ಏರಿಕೆಯ ಪ್ರಮಾಣ ತೀವ್ರವಾಗಿದ್ದು ಇದು ನಿಯಂತ್ರಣವಾಗದಿದ್ದರೆ ಜಿಂದಾಲ್‌ ಸಂಪೂರ್ಣ ಲಾಕ್‌ಡೌನ್‌ ಮಾಡಲು ಹಿಂಜರಿಯುವುದಿಲ್ಲ. ನಮಗೆ ಜಿಂದಾಲ್‌ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಸುಗೂಸುಗಳಿಗೂ ಮಹಾಮಾರಿ ಕೊರೋನಾ ಕಾಟ: ಪೋಷಕರಲ್ಲಿ ಹೆಚ್ಚಿದ ಆತಂಕ

ಜಿಲ್ಲೆಯ ಜನರಲ್ಲಿ ಜಿಂದಾಲ್‌ನಿಂದಾಗಿಯೇ ಕೋವಿಡ್‌ ಹೆಚ್ಚಾಗುತ್ತಿದೆ ಎಂಬ ಭಾವನೆ ಇದೆ. ಸದ್ಯದ ಜಿಂದಾಲ್‌ ಹೊರಗಡೆ ಮತ್ತು ಒಳಗಡೆ ಸೋಂಕು ಹರಡುವಿಕೆಯ ಶೇಕಡಾವಾರು ಪ್ರಮಾಣ ಗಮನಿಸಿದರೆ ಈ ಭಾವನೆ ಬರುವುದು ಸಹಜ. ಜಿಂದಾಲ್‌ನಲ್ಲಿ ಇದೇ ರೀತಿಯಲ್ಲಿ ಸೋಂಕು ಸ್ಫೋಟ ಮುಂದುವರಿದಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಇಡೀ ಕಾರ್ಖಾನೆಯನ್ನು ಲಾಕ್‌ಡೌನ್‌ ಮಾಡಿಸುವ ನಿರ್ಧಾರಕ್ಕೆ ಬರುತ್ತೇವೆ ಎಂದು ಪುನರುಚ್ಚರಿಸಿದರು.

4 ಸಾವಿರ ಕಿಟ್‌ಗಳ ಖರೀದಿ:

ಕೊರೋನಾ ವೈರಸ್‌ ಶಂಕಿತ ಹಾಗೂ ಸೋಂಕಿತರ ಗಂಟಲು ದ್ರವ್ಯದ ಮಾದರಿಯನ್ನು ಕೇವಲ ಅರ್ಧಗಂಟೆಯೊಳಗೆ ತಪಾಸಣೆ ನಡೆಸಿ ವರದಿ ನೀಡುವ 4 ಸಾವಿರ ರಾರ‍ಯಪಿಡ್‌ ಆ್ಯಂಟಿಜೆನ್‌ ಕಿಟ್‌ಗಳನ್ನು ಡಿಎಂಎಫ್‌ (ಜಿಲ್ಲಾ ಖನಿಜನಿಧಿ) ಅನುದಾನದ ಅಡಿ ಖರೀದಿಸಲು ನಿರ್ಧರಿಸಲಾಗಿದೆ. ಇವುಗಳಿಂದ ಸೊಂಕು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ನಗರದ ಟ್ರಾಮಾಕೇರ್‌ ಸೆಂಟರ್‌ ಜು. 10ರೊಳಗೆ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಎರಡು ಕೊರೋನಾ ತಪಾಸಣಾ ಯಂತ್ರಗಳನ್ನು ನೀಡಲು ಜಿಂದಾಲ್‌ ಒಪ್ಪಿಕೊಂಡಿದ್ದು, 15 ದಿನದೊಳಗೆ ಅವುಗಳನ್ನು ತಂದು ವಿಮ್ಸ್‌ನಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು. ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್‌, ಎಡಿಸಿ ಮಂಜುನಾಥ ಮತ್ತಿತರರು ಇದ್ದರು.

Follow Us:
Download App:
  • android
  • ios