ಹೊಸಪೇಟೆ(ಫೆ.12): ವಿಶ್ವ ಪರಂಪರೆ ತಾಣ ಹಂಪಿಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 480 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ಮೂಲಭೂತ ಸೌಕರ್ಯ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪುರಂದರ ಆರಾಧನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಂಪಿ ಸ್ಮಾರಕಗಳ ಗುಚ್ಛ ಇಡೀ ವಿಶ್ವದಲ್ಲೇ ಎಲ್ಲೂ ಇಲ್ಲ. ಹಂಪಿಯ ವೈಭವವನ್ನು ಎಲ್ಲರೂ ಅರಿಯಬೇಕು. ಹಂಪಿಯ ಶೃಂಗಾರ ಬಾಗಿಲು, ಭೀಮಾ ಗೇಟ್‌ ದಿಂದ ಶ್ರೀ ವಿರೂಪಾಕ್ಷೇಶ್ವರ ದೇಗುಲದ ವರೆಗೆ 25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಹಂಪಿ ಸ್ಮಾರಕಗಳ ಸಮಗ್ರ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಲಾಗುವುದು. ಹಂಪಿಯ ಸಮಗ್ರ ಸಂಶೋಧನೆ ನಡೆಯಬೇಕು. ಇಲ್ಲಿಯ ವರೆಗೆ ಶೇ. 10ರಷ್ಟು ಉತ್ಖನನ ನಡೆದಿಲ್ಲ. ಇನ್ನೂ ಶೇ. 90ರಷ್ಟು ಉತ್ಖನನ ನಡೆಯಬೇಕು. ಹಂಪಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಉಳಿಸಬೇಕು. ಇತಿಹಾಸದ ಪುಟದಲ್ಲಿ ಉಳಿಯುವ ಕಾರ್ಯ ಮಾಡಬೇಕು ಎಂದರು.

ವಿಜಯನಗರ ಜಿಲ್ಲೆ ರಚನೆ ಉತ್ಸಾಹ:

ಹಂಪಿಯಲ್ಲಿ ಮೊದಲ ಬಾರಿಗೆ ಪುರಂದರದಾಸರ ಆರಾಧನೋತ್ಸವ ಸಾಂಗವಾಗಿ ನೆರವೇರುತ್ತಿದೆ. ದಕ್ಷಿಣ ಭಾರತದ ಸಾಮ್ರಾಜ್ಯವಾಗಿದ್ದ ವಿಜಯನಗರ ಮತ್ತೆ ಜಿಲ್ಲೆಯಾಗಿದೆ. ಹೀಗಾಗಿ ಪಶ್ಚಿಮ ತಾಲೂಕುಗಳ ಜನ ಹಾಗೂ ಇಡೀ ಕರ್ನಾಟಕದ ಜನತೆ ಹೆಮ್ಮೆ ಪಡುತ್ತಿದೆ. ಹೀಗಾಗಿ ಹಂಪಿಯ ಜನತೆಗೆ ಈಗ ಖುಷಿಯಾಗಿದೆ ಎಂದರು.

ಹಂಪಿ ಹರೇಶಂಕರ ಮಂಟಪದೊಳಗೆ ಬಸ್‌ ಸಿಲುಕಿ ಸ್ಮಾರಕಕ್ಕೆ ಧಕ್ಕೆ

ಅರ್ಚಕ ಶ್ರೀನಿವಾಸ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೊರನೂರು ಕೊಟ್ರಪ್ಪ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ನಾಗವೇಣಿ ಬಸವರಾಜ್‌, ಸದಸ್ಯ ಪಾಲಪ್ಪ, ಗ್ರಾಪಂ ಅಧ್ಯಕ್ಷ ತಳವಾರ ಹನುಮಂತಪ್ಪ, ಮುಖಂಡರಾದ ಧರ್ಮೇಂದ್ರ ಸಿಂಗ್‌, ಬಸವರಾಜ್‌, ವಿರೂಪಾಕ್ಷಿ, ಸದಸ್ಯರಾದ ಸ್ವಾತಿ ಸಿಂಗ್‌, ರೂಪಕಲಾ, ಹಂಪಮ್ಮ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಪಂ ಸಿಇಒ ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ತಹಸೀಲ್ದಾರ್‌ ಎಚ್‌. ವಿಶ್ವನಾಥ, ವಾರ್ತಾಧಿಕಾರಿ ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮತ್ತಿತರರಿದ್ದರು. ಬಳಿಕ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.