ಬಳ್ಳಾರಿ(ಜು.02): ಮೊನ್ನೆಯಷ್ಟೇ ಮಹಾಮಾರಿ ಕೊರೋನಾಗೆ ಬಲಿಯಾದ 7 ಮಂದಿಯ ಅಂತ್ಯಸಂಸ್ಕಾರವನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನವೀಯವಾಗಿ ಮಾಡಿದ್ದರು. ಒಂದೇ ಗುಂಡಿಯಲ್ಲ 7 ಕೊರೋನಾ ಮೃತದೇಹಗಳನ್ನ ಬೇಕಾಬಿಟ್ಟಿ ಎಸೆದಿದ್ದರು. ಈ ಘಟನೆಯ ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿಯ ವರ್ತನೆಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 

"

ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೆರಡು ಘಟನೆಗಳು ನಡೆದಿವೆ. ಇಂತಹ ಘಟನೆಗಳಿಂದ ಇಡಿ ಮಾನವ ಕುಲಕ್ಕೆ ಅವಮಾನ ಮಾಡಿದ ಹಾಗೇ ಎಂದು ಸಾವರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ಆಸ್ಪತ್ರೆಯ ಆವರಣಲ್ಲಿ ಭಾರೀ ಮಳೆ ಸುರಿಯುತ್ತಿರುವ ವೇಳೆಯೂ ಮೃತದೇಹವನ್ನ ಮಳೆಯಲ್ಲೇ ಬಿಟ್ಟು ಹೋಗಲಾಗಿತ್ತು.  ಇನ್ನು ಮತ್ತೊಂದು ಘಟನೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೋನಾ ಸೋಂಕಿತ ಶವವನ್ನ ಸೈಕಲ್‌ನಲ್ಲಿ ತರಲಾಗಿತ್ತು. 

ಬಳ್ಳಾರಿ: ಅಮಾನವೀಯ ಘಟನೆ, ಮಳೆಯ ನಡುವೆಯೇ ಅನಾಥವಾಗಿದ್ದ ಮೃತದೇಹ

ಈ ಘಟನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್‌ ಸಿಂಗ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿ, ಸೈಕಲ್‌ನಲ್ಲಿ ಶವ ಸಾಗಿಸಿದ ಘಟನೆಯ ಬಗ್ಗೆ ನನಗೆ ಮಾಹಿತಿ ಬಂದಿಲ್ಲ, ಮಾಹಿತಿ ತರಿಸಿಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಒಂದೇ ಗುಂಡಿಯಲ್ಲಿ 7 ಮಂದಿಯ ಅಂತ್ಯಸಂಸ್ಕಾರ ಮಾಡಿದ ಸಿಬ್ಬಂದಿಯನ್ನ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

"

ಇನ್ನು ಇವೆಲ್ಲ ಘಟನೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಡಿಹೆಚ್‌ಓ ಜನಾರ್ದನ್‌ ಅವರು, ಇಂತಹ ಘಟನೆಗಳು ನಡೆದಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಹೊಸಪೇಟೆಯಲ್ಲಿ ಘಟನೆಗಳು ನಡೆದ ಕೂಡಲೇ ನಾನು ಆರೋಗ್ಯಾಧಿಕಾರಿ ಜೊತೆ ಮಾತನಾಡಿದ ಕೋವಿಡ್‌ ನಿಯಮಾವಳಿ ಪ್ರಕಾರ ಮೃತದೇಹಗಳ ಸಾಗಾಟ ಹಾಗೂ ಅಂತ್ಯಕ್ರಿಯೆ ಮಾಡುವಂತೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.