Anand Singh: ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಬದ್ಧ: 15 ದಿನದೊಳಗೆ ನೀಲನಕ್ಷೆ ಸಿದ್ಧ
ಅಂಜನೇಯ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಪರಿಣಿತ ವಾಸ್ತುಶಿಲ್ಪ ತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ದಪಡಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ವಿಜಯನಗರ
ವಿಜಯನಗರ (ಜು.13): ಅಂಜನೇಯ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಪರಿಣಿತ ವಾಸ್ತುಶಿಲ್ಪ ತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ದಪಡಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತಂತೆ ಹೊಸಪೇಟೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿವೃದ್ದಿ ಕುರಿತಂತೆ ಪರಿಣಿತ ವಾಸ್ತುಶಿಲ್ಪ ತಜ್ಞರ ಏಜೆನ್ಸಿಯನ್ನು ಆಹ್ವಾನಿಸಿ ಅವರಿಂದ ನೀಲನಕ್ಷೆ ಸಿದ್ದಪಡಿಸಲಾಗುವುದು ಎಂದು ಹೇಳಿದರು. ಶೌಚಾಲಯ, ಸ್ನಾನಗೃಹ, ಪಾರ್ಕಿಂಗ್, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇನ್ನೀತರ ಸೌಕರ್ಯಗಳನ್ನು ಒಳಗೊಂಡ ನೀಲನಕ್ಷೆಯನ್ನು ಸಿದ್ದಪಡಿಸಲಾಗುವುದು ಮತ್ತು ಮೊದಲ ಹಂತದಲ್ಲಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ಮೀಸಲು: ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ 100 ಕೋಟಿ ರೂ.ಗಳು ಮೀಸಲಿಟ್ಟಿದ್ದು, ಆ ಹಣವನ್ನು ಹಂತಹಂತವಾಗಿ ಹಣಕಾಸು ಇಲಾಖೆ ಒದಗಿಸಲಿದೆ. ಇನ್ನೂ ಹೆಚ್ಚುವರಿ ಹಣ ಅವಶ್ಯವಿದ್ದಲ್ಲಿ ಸರ್ಕಾರ ಒದಗಿಸಲಿದೆ ಎಂದು ಸಭೆಯಲ್ಲಿ ಸಚಿವ ಆನಂದ ಸಿಂಗ್ ವಿವರಿಸಿದರು.
ಅಂಜನಾದ್ರಿ ಸುತ್ತಮುತ್ತ ಹೋಂ ಸ್ಟೇಗಿಲ್ಲ ಅನುಮತಿ: ಆನಂದ ಸಿಂಗ್
ಸಿಎಂ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಭೇಟಿ: ಇದೇ ತಿಂಗಳ 20ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಮಾಹಿತಿ ನೀಡಲಿದ್ದೇವೆ ಎಂದು ಸಚಿವ ಆನಂದ ಸಿಂಗ್ ತಿಳಿಸಿದರು.
ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ: ಅಂಜನಾದ್ರಿ ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ 62 ಎಕರೆ ರೈತರ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಅಂಜನೇಯನ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ. ರೈತರಿಗೆ ಪ್ರತಿ ಎಕರೆ ಜಮೀನಿಗೆ ಗರಿಷ್ಠ 42ಲಕ್ಷ ರೂ. ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದಲೂ ರೈತರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಇನ್ನೂ ತಾವು ಕೂಡ ತಮ್ಮ ತಾಲೂಕಿನ ರೈತರೊಂದಿಗೆ ಸಮಾಲೋಚನೆ ನಡೆಸಿ ಮನವರಿಕೆ ಮಾಡಿಕೊಡಿ ಎಂದು ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಅವರಿಗೆ ಸೂಚನೆ ನೀಡಿದರು. ಇನ್ನೂ ಹೆಚ್ಚಿನ ಹಣಕ್ಕೆ ರೈತರು ಪಟ್ಟುಹಿಡಿದಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ಇನ್ನೀತರ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸುವಂತೆ ಸ್ಥಳದಲ್ಲಿದ್ದ ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಸೂಚನೆ ನೀಡಿದರು.
ಸಾವಿರಾರು ಭಕ್ತರು ಭೇಟಿ: ನಿತ್ಯ ಅಂಜನಾದ್ರಿ ಬೆಟ್ಟದಲ್ಲಿನ ಅಂಜನೇಯನ ದರ್ಶನಕ್ಕೆ 5 ಸಾವಿರ ಜನರು ಬರುತ್ತಿದ್ದಾರೆ. ವಾರಂತ್ಯದಲ್ಲಿ 25 ಸಾವಿರದಷ್ಟು ಜನರಿದ್ದರೇ ಹಬ್ಬ-ಹರಿದಿನಗಳ ಸಂದರ್ಭದಲ್ಲಿ 50 ಸಾವಿರದಷ್ಟು ಜನರು ದರ್ಶನಕ್ಕೆ ಬರುತ್ತಿದ್ದಾರೆ. ಅವರೆಲ್ಲರಿಗೂ ಅಗತ್ಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಕಲ್ಪಿಸುವುದು ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಮೂಲಭೂತ ಸೌಲಭ್ಯಗಳಿಗೆ ಮೊದಲು ಆದ್ಯತೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯ್ತು. ಇನ್ನೂ ಭೂಸ್ವಾಧೀನಕ್ಕೆ ಹೆಚ್ಚು ಹಣ ಖರ್ಚಾಗಲಿದೆ. ಉಳಿದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯ್ತು.
ಪಿಪಿಪಿ ಮಾಡಲ್‍ನಲ್ಲಿ ರೋಪ್ ವೇ: ಅಂಜನಾದ್ರಿ ಬೆಟ್ಟಕ್ಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ಅಳವಡಿಸಲು ಉದ್ದೇಶಿಸಲಾಗಿದೆ. ಐಡೆಕ್ ಸಂಸ್ಥೆ ವತಿಯಿಂದ ವಿಸಿಬಲಿಟಿ ಸ್ಟಡೀಸ್ ಮಾಡಿದ ನಂತರ ಟೆಂಡರ್ ಹಾಗೂ ಇನ್ನೀತರ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಭಾರತ ಸರಕಾರವು ಪರ್ವತ ಮಾಲಾ ಯೋಜನೆ ಅಡಿ ರಾಜ್ಯದಲ್ಲಿ ಅಂಜನಾದ್ರಿ ಮತ್ತು ಕೊಡಚಾದ್ರಿಗೆ ರೋಪ್ ವೇ ನಿರ್ಮಿಸಲು ಯೋಜನೆ ಹಾಕಿಕೊಂಡು ಟೆಂಡರ್ ಕರೆಯಲು ಉದ್ದೇಶಿಸಿದೆ. ಮೊದಲ ಹಂತವಾಗಿ ವಿಸಿಬಲಿಟಿ ಸ್ಟಡೀಸ್‍ಗೆ ತಂಡ ಆಗಮಿಸಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ವೆಂಕಟೇಶ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಭಾರತ ಸರ್ಕಾರದ ವತಿಯಿಂದ ಅಂಜನಾದ್ರಿಗೆ ರೋಪ್‍ವೇ ನಿರ್ಮಿಸುವ ಅಗತ್ಯವಿಲ್ಲ. ಅದನ್ನು ನಮ್ಮ ರಾಜ್ಯ ಸರ್ಕಾರದ ವತಿಯಿಂದಲೇ ಪಿಪಿಪಿ ಮಾಡಲ್ ನಡಿ ರೋಪ್ ವೇ ನಿರ್ಮಿಸೋಣಮ ಇದನ್ನು ಸದರಿ ಅಧಿಕಾರಿಗಳಿಗೆ ತಿಳಿಸಿ ಎಂದು ಸಚಿವ ಸಿಂಗ್ ಅವರು ಸೂಚನೆ ನೀಡಿದರು.
120 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿ: ಸಚಿವ ಆನಂದ್ ಸಿಂಗ್
400 ಕೋಟಿ ರೂ.ವೆಚ್ಚದಲ್ಲಿ 35 ಕಿ.ಮೀ ರಸ್ತೆ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ತಿಂಗಳು ಸಭೆ ನಡೆಸಿ ನೀಡಿದ ಸೂಚನೆ ಅನ್ವಯ ಅಂಜನಾದ್ರಿಗೆ ಸಂಪರ್ಕ ಕಲ್ಪಿಸಲು ಹಿಟ್ನಾಳ್ ಕ್ರಾಸ್‍ನಿಂದ ಗಂಗಾವತಿಯವರೆಗಿನ 35 ಕಿ.ಮೀ ಚತುಷ್ಪತ ರಸ್ತೆ ನಿರ್ಮಿಸಲು ಉದ್ದೇಶಿಸಿ ವಿಸೃತ ವರದಿ ಸಿದ್ದಪಡಿಸಲಾಗಿದೆ. 148 ಎಕರೆ ಭೂಸ್ವಾಧೀನ ಸೇರಿ 400ಕೋಟಿ ರೂ. ಈ ರಸ್ತೆ ನಿರ್ಮಾಣಕ್ಕೆ ಅಂದಾಜು ವೆಚ್ಚವಾಗಲಿದೆ ಎಂದು ಸಚಿವ ಆನಂದಸಿಂಗ್ ಅವರು ತಿಳಿಸಿದರು.