ಅಂಜನಾದ್ರಿ ಸುತ್ತಮುತ್ತ ಹೋಂ ಸ್ಟೇಗಿಲ್ಲ ಅನುಮತಿ: ಆನಂದ ಸಿಂಗ್
* ಅಂಜನಾದ್ರಿಯಲ್ಲಿ ಸಚಿವರಿಗೆ ಮನವಿ ಮಾಡಿಕೊಂಡ ರೆಸಾರ್ಟ್ ಮಾಲೀಕರು
* ಪ್ರವಾಸಿಗರು ನೈಸರ್ಗಿಕ ಸಂಪತ್ತು ಬಿಟ್ಟು ನಿಮ್ಮ ಹೋಂ ಸ್ಟೇ ನೋಡಬೇಕಾ: ಆನಂದ ಸಿಂಗ್ ಪ್ರಶ್ನೆ
* ಹಂಪಿ ಪ್ರಾಧಿಕಾರದ ಆಯುಕ್ತರು ಫೋನ್ ರೀಸಿವ್ ಮಾಡಲ್ಲ: ಮುನವಳ್ಳಿ
ಗಂಗಾವತಿ(ಜೂ.14): ಪ್ರಸಿದ್ಧ ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶ ಪ್ರೇಕ್ಷಣೀಯ ಸ್ಥಳವಾಗಿದೆ. ಹೀಗಾಗಿ ಹೋಂ ಸ್ಟೇಗೆ ಅನುಮತಿ ನೀಡಿದರೆ ಕ್ಷೇತ್ರವು ಕಲುಷಿತಗೊಳ್ಳುತ್ತದೆ. ಅದಕ್ಕಾಗಿ ಅನುಮತಿ ನೀಡುವುದು ಕಷ್ಟ ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದರು.
ಅಂಜನಾದ್ರಿಯಲ್ಲಿ ರೆಸಾರ್ಟ್ ಮಾಲೀಕರು ಸಚಿವರಿಗೆ ಮನವಿ ಮಾಡಿಕೊಂಡಾಗ ಸಚಿವರು ತಮ್ಮ ನಿಲುವು ವ್ಯಕ್ತಪಡಿಸಿದರು. ಪದೇ ಪದೇ ಅನುಮತಿಗಾಗಿ ಕೇಳಬೇಡಿ. ಕಾನೂನು ತೊಡಕು ಇದೆ ಎಂದ ಅವರು, ರೆಸಾರ್ಟ್ ನಿರ್ಮಾಣವಾದರೆ ಬರುವ ಪ್ರವಾಸಿಗರು ದೇವಸ್ಥಾನ ನೋಡುವುದನ್ನು ಬಿಟ್ಟು ನಿಮ್ಮ ಹೋಂ ಸ್ಟೇ ನೋಡಬೇಕಾ? ಎಂದು ಮರುಪ್ರಶ್ನಿಸಿದರು.
ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ!
ಇದಕ್ಕೆ ಹೋಂ ಸ್ಟೇ ಮಾಲೀಕರು ಕಳೆದ 6 ತಿಂಗಳಿನಿಂದ ರೆಸಾರ್ಟ್ ಬಂದ್ ಆಗಿದ್ದರಿಂದ ನಮಗೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಅನುಮತಿ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಇದಕ್ಕೆ ಒಪ್ಪದ ಸಚಿವರು, ನಿಮ್ಮ ಸಮಸ್ಯೆ ಅರ್ಥವಾಗಿದೆ. ಆದರೆ ಕಾನೂನು ಅಡ್ಡಿಯಾಗುತ್ತಿದ್ದರಿಂದ ಅನುಮತಿ ಕೊಡಲು ಸಾಧ್ಯವಾಗುವದಿಲ್ಲ. ಆದರೂ ಸರ್ಕಾರಕ್ಕೆ ಕೆಲವೊಂದು ಷರತ್ತುಗಳನ್ನು ಸಡಿಲಗೊಳಿಸಿ ಪ್ರಾರಂಭಕ್ಕೆ ಶ್ರಮಿಸುತ್ತೇನೆ ಎಂದರು.
ಈ ಹಿಂದೆ ಅನಧಿಕೃತ ರೆಸಾರ್ಟ್‌ಗಳಿದ್ದರಿಂದ ಕಾನೂನುಬಾಹಿರ ಚಟುವಟಿಕೆಗಳ ನಡೆದಿರುವುದರ ಬಗ್ಗೆ ಮಾಹಿತಿ ಸರ್ಕಾರಕ್ಕೆ ಬಂದಿದೆ. ಇದನ್ನು ಮುಂದುವರಿಸಿಕೊಂಡು ಹೋದರೆ ಬರುವ ಜನರಿಗೆ ತೊಂದರೆಯಾಗುತ್ತಿದೆ ಎಂದರು.
ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಒ ಗೌಜಿಯಾ ತರನ್ನುಮ್, ವಿಭಾಗೀಯ ಆಯುಕ್ತ ಎನ್.ವಿ. ಪ್ರಸಾದ್, ಪ್ರವಾಸೋದ್ಯಮ ನಿರ್ದೇಶಕ ಮಂಜುನಾಥ, ಪ್ರಾಧಿಕಾರದ ಆಯುಕ್ತ ಸಿದ್ರಾಮೇಶ್ವರ, ತಹಸೀಲ್ದಾರ್ ನಾಗರಾಜ್ ಉಪಸ್ಥಿತರಿದ್ದರು.
ರೆಸಾರ್ಟ್ ಮಾಲೀಕರು, ಸಚಿವ ಸಿಂಗ್ ನಡುವೆ ಮಾತಿನ ಚಕಮಕಿ
ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೋಂ ಸ್ಟೇ ಪ್ರಾರಂಭಿಸುವುದಕ್ಕೆ ಸಚಿವರು ಅನುಮತಿ ನೀಡದ ಕಾರಣ ರೆಸಾರ್ಟ್ ಮಾಲೀಕರು ಮತ್ತು ಸಚಿವ ಆನಂದ ಸಿಂಗ್ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಈಗಾಗಲೇ ಹೊಸಪೇಟೆ ಮತ್ತು ಕಮಲಾಪುರ ಬಳಿ ಅನಧಿಕೃತವಾಗಿ ರೆಸಾರ್ಚ್‌ಗಳು ಪ್ರಾರಂಭವಾಗಿವೆ. ಆದರೆ ಅಂಜನಾದ್ರಿ ಬಳಿ ಏಕೆ ಅನುಮತಿ ನೀಡುವುದಿಲ್ಲ ಎಂದು ಮಾಲೀಕರು ಸಚಿವರ ವಿರುದ್ಧ ಹರಿಹಾಯ್ದರು. ಅಲ್ಲದೇ ಹಂಪಿಗೊಂದು ನ್ಯಾಯ, ನಮಗೊಂದು ನ್ಯಾಯ ಎಂದು ಪ್ರಶ್ನಿಸಿದರು. ಕೂಡಲೆ ಅನುಮತಿ ಕೊಡಿ ಎಂದು ಕೋರಿದರು.
ರಾಜಕೀಯ ಮಾಡುವ ಉದ್ದೇಶ ಇಲ್ಲ: ಜನಾರ್ದನ ರೆಡ್ಡಿ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೊಸಪೇಟೆ ಮತ್ತು ಕಮಲಾಪುರ ಬಳಿ ಒಂದು ಹೋಂ ಸ್ಟೇ ತೋರಿಸಿ. ಅಂಥವುಗಳನ್ನು ಕಿತ್ತು ಹಾಕಿಸುತ್ತೇನೆ ಎಂದು ತಿಳಿಸಿದಾಗ, ನಾವು ಬಂದು ತೋರಿಸುತ್ತೇವೆ ಎಂದು ಮಾಲೀಕರು ಸಚಿವರಿಗೆ ತಿಳಿಸಿದರು. ಕಾನೂನು ಎಲ್ಲರಿಗೂ ಒಂದೆ. ಆ ಕಡೆ ರೆಸಾರ್ಚ್ ಇಲ್ಲ. ನೀವೆ ತೋರಿಸಬನ್ನಿ ಎಂದು ಮಾಲೀಕರನ್ನು ಸಚಿವರು ಕರೆದರು.
ಅನಧಿಕೃತವಾಗಿದ್ದರೆ ಸೀಜ್ ಮಾಡಿ ಎಂದು ಅಲ್ಲಿಯೇ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಸಂತೋಷ ಕೆಲೋಜಿ ಇದ್ದರು.
ಹಂಪಿ ಪ್ರಾಧಿಕಾರದ ಆಯುಕ್ತರು ಫೋನ್ ರೀಸಿವ್ ಮಾಡಲ್ಲ: ಮುನವಳ್ಳಿ
ಯಾವುದೇ ಸಮಸ್ಯೆ ಮತ್ತು ಮಾಹಿತಿ ಕೇಳಬೇಕಾದರೆ ಹಂಪಿ ಪ್ರಾಧಿಕಾರದ ಆಯುಕ್ತರು ಫೋನ್ ರೀಸಿವ್ ಮಾಡುವುದಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಅಕ್ರೋಶ ವ್ಯಕ್ತಪಡಿಸಿದರು. ಹಲವಾರು ಬಾರಿ ಈ ಭಾಗದ ಸಮಸ್ಯೆಗಳ ಬಗ್ಗೆ ಫೋನ್ ಮಾಡಿದರೆ ತೆಗೆಯಲ್ಲ. ಮಿಸ್ಡ್ ಕಾಲ್ ಇದ್ದರೆ ವಾಪಸ್ ಮಾಡಬೇಕೆನ್ನುವ ಪ್ರಜ್ಞೆಯೂ ಅವರಿಗಿಲ್ಲ. ನಮಗೇ ಹೀಗಾದರೆ ಸಾಮಾನ್ಯ ಜನರ ಗತಿ ಏನು ಎಂದು ಜಿಲ್ಲಾಧಿಕಾರಿಗಳ ಮುಂದೆ ಹೇಳಿದರು. ಮೊದಲಿಗೆ ಫೋನ್ ರೀಸಿವ್ ಮಾಡುವುದನ್ನು ಕಲಿಯಲಿ ಎಂದು ಅಧಿಕಾರಿಗೆ ಸಚಿವರು ಎಚ್ಚರಿಕೆ ನೀಡಿದರು.