ಹೊಸಪೇಟೆ(ಏ.13): ಲಾಕ್‌ಡೌನ್‌ನಿಂದ ಕೆಲ ಬಡವರಿಗೆ ಬಹಳ ತೊಂದರೆ ಉಂಟಾಗಿರುವುದನ್ನು ಮನಗೊಂಡು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಸುಮಾರು 60 ಸಾವಿರ ಕುಟುಂಬಗಳಿಗೆ ಅರಣ್ಯ ಸಚಿವ ಆನಂದ್‌ಸಿಂಗ್‌ ಆಹಾರ ಕಿಟ್‌ಗಳನ್ನು ನೀಡಲು ಮುಂದಾಗಿದ್ದಾರೆ.

ಒಂದು ಕುಟುಂಬಕ್ಕೆ ಸುಮಾರು 1015 ಮೌಲ್ಯದ ಒಂದು ಆಹಾರ ಸಾಮಗ್ರಿಗಳ ಕಿಟ್‌ನಲ್ಲಿ 6 ಕೆಜಿ ಜೋಳ, 3 ಕೆಜಿ ತೊಗರಿ ಬೆಳೆ, 2 ಲೀಟರ್‌ ಎಣ್ಣೆ, 400 ಗ್ರಾಂ ಖಾರದಪುಡಿ, 250 ಗ್ರಾಂ ಹಾಲಿನ ಪೌಡರ್‌, 100 ಗ್ರಾಂ ಅರಿಶಿನ, 100 ಗ್ರಾಂ ಸಾಸಿವೆ, 100 ಗ್ರಾಂ ಜೀರಿಗೆ, 500 ಗ್ರಾಂ, ಬೆಳ್ಳುಳ್ಳಿ, 1 ಕೆಜಿ ಉಪ್ಪು ನೀಡಲಾಗುತ್ತಿದೆ. ಸುಮಾರು 6.9 ಕೋಟಿ ವೆಚ್ಚದಲ್ಲಿ ಸುಮಾರು 60 ಸಾವಿರ ಆಹಾರ ಕಿಟ್‌ಗಳನ್ನು ಜನರಿಗೆ ವಿತರಿಸಲಾಗುತ್ತಿದೆ.

ಲಾಕ್‌ಡೌನ್‌: ಹಂಪಿ ವಿರೂಪಾಕ್ಷೇಶ್ವರ ರಥೋತ್ಸವದ ಫೋಟೋಸ್‌

ಸಚಿವ ಆನಂದ್‌ ಸಿಂಗ್‌ ಮಾತನಾಡಿ, ಕೆಲ ದಿನಗಳ ಹಿಂದೆ ಕ್ಷೇತ್ರದಲ್ಲಿ ಸಂಚಾರ ಮಾಡಿದಾಗ ಬಡವರ ಮನೆಯಲ್ಲಿರುವ ಸ್ವಲ್ಪ ಬೇಳೆ, ಸ್ವಲ್ಪ ಎಣ್ಣೆ, ಒಣಗಿದ ಮೆಣಸಿನಕಾಯಿ, ಒಣಗಿದ ಕರಿಬೇವು ಇರುವುದನ್ನು ಖುದ್ದಾಗಿ ನೋಡಿದೆ. ಆಗ ನಾನು ಯಾವುದೋ ಸಂದರ್ಭದಲ್ಲಿ ಜನರಿಗೆ ಒಳ್ಳೆಯದು ಮಾಡುವುದಕ್ಕಿಂತ ಜನರು ಕಷ್ಟದ ದಿನಗಳಲ್ಲಿರುವಾಗ ಸಹಾಯ ಮಾಡುವುದು ಒಳಿತು ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಬಡಜನರಿಗೆ ಕನಿಷ್ಠ ಒಂದು ವಾರಕ್ಕೆ ಅಥವಾ ಹದಿನೈದು ದಿನಗಳವರಿಗೆ ಆಗುವಷ್ಟುಆಹಾರ ಸಾಮಗ್ರಿಗಳನ್ನು ನೀಡಬೇಕು ಎಂದುಕೊಂಡೆ. ಈ ಆಹಾರ ಕಿಟ್‌ಗಳನ್ನು ನ್ಯಾಯಬೆಲೆ ಅಂಗಡಿಗಲ್ಲಿ ಈಗಾಗಲೇ ಬಡವರು ಅಂದರೆ ಪಡಿತರ ಕಾರ್ಡ್‌ಗಳನ್ನು ಹೊಂದಿರುವವರಿಗೆ ಸಾಮಾಜಿಕ ಅಂತರದೊಂದಿಗೆ ಏ. 17ರಿಂದ ಎಲ್ಲರಿಗೆ ವಿತರಿಸಲಾಗುವುದು ಎಂದರು.