ಉಡುಪಿ(ಜೂ.21): ಕೊರೋನಾ ಪರಿಸ್ಥಿಯಿಂದಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು 30 ಕೋಟಿ ರು.ಗಳಷ್ಟುಇಳಿಕೆಯಾಗಿದೆ. ಇದನ್ನು ಸರಿದೂರಿಸಲು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ಬೆಲೆ ಪ್ರತಿ ಲೀಟರಿಗೆ 1 ರು.ಗಳಷ್ಟುಕಡಿಮೆ ಮಾಡಲಾಗುತ್ತದೆ. ಹಾಲು ಉತ್ಪಾದಕರು ಸಹಕರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.

ಒಕ್ಕೂಟದಲ್ಲಿ ದಿನವಹಿ 5 ಲಕ್ಷ ಕೆ.ಜಿ.ಗೂ ಮೀರಿ ಹಾಲು ಸಂಗ್ರಹಣೆಯಾಗುತ್ತಿದೆ. ಹೊಟೇಲ…, ರೆಸ್ಟೊರೆಂಟ್‌, ಕ್ಯಾಂಟೀನ್‌ ಮತ್ತು ವಿದ್ಯಾಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರವಾಸೋದ್ಯಮ ಸ್ಥಗಿತಗೊಂಡು, ಹಾಲಿನ ಮಾರಾಟ ಏಳು ವರ್ಷಗಳ ಹಿಂದಿಗಿಂತಲೂ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಈ ವರ್ಷ 20 ಕೋಟಿ ರು.ಗೂ ನಷ್ಟವಾಗುವ ಸಾಧ್ಯತೆಯಿದೆ.

ಸೈನೆಡ್‌ ಮೋಹನ್‌ ಕೊನೆಯ ಕೇಸ್‌ ಕೂಡಾ ಸಾಬೀತು

ಶಾಲೆಗಳ ಪ್ರಾರಂಭ ವಿಳಂಬವಾಗುತ್ತಿರುವುದರಿಂದ, ಕೆನೆಭರಿತ ಹಾಲಿನ ಪುಡಿ ಮಾರಾಟವೂ ಸ್ಥಗಿತಗೊಂಡಿದೆ. ಇದೇ ಪರಿಸ್ಥಿತಿಯಲ್ಲಿ ಸಪ್ಟೆಂಬರ್‌ ಅಂತ್ಯಕ್ಕೆ 150 ಲಕ್ಷ ಕೆಜಿ ಹಾಲಿನ ಹುಡಿ ಉತ್ಪಾದನೆಯಾಗಿ ದಾಸ್ತಾನು ಉಳಿಯಲಿದೆ. ಒಕ್ಕೂಟದಲ್ಲಿ ಹಾಲಿನ ಪುಡಿ ಮತ್ತು ಬೆಣ್ಣೆ ದಾಸ್ತಾನಿಗೆ ಸ್ಥಳಾವಕಾಶ ಸಾಕಾಗದೆ ಖಾಸಗಿ ಮಳಿಗೆಗಳಲ್ಲಿ ದುಬಾರಿ ಬಾಡಿಗೆಗೆ ದಾಸ್ತಾನು ಮಾಡಲಾಗಿದೆ.

ಈ ಆರ್ಥಿಕ ನಷ್ಟವನ್ನು ಸರಿದೂಗಿಸಲು ಅಮೂಲ್‌ ಸಂಸ್ಥೆ ಕೂಡ ಖರೀದಿ ದರ ಕಡಿತ ಮಾಡಿದೆ. ರಾಜ್ಯದ ಇತರ ಒಕ್ಕೂಟಗಳಲ್ಲಿ ಪ್ರತೀ ಲೀಟರಿಗೆ 2.20 ರು.ನಿಂದ 4.70 ರು.ರವರೆಗೆ ಖರೀದಿ ದರ ಕಡಿಮೆ ಮಾಡಲಾಗಿದೆ. ಆದರೆ, ರಾಜ್ಯದಲ್ಲಿಯೇ ಹಾಲು ಉತ್ಪಾದಕರಿಗೆ ಗರಿಷ್ಟದರ ನೀಡುವ ಹೆಗ್ಗಳಿಕೆಯ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಷ್ಟವನ್ನು ಸರಿದೂಗಿಸಲು ಜೂ.21ರಿಂದ ಖರೀದಿ ದರವನ್ನು 1 ರು.ನಷ್ಟುಕಡಿಮೆ ಮಾಡುತ್ತಿದೆ ಎಂದು ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಹಾಮಂಡಳಿಗೆ ಶೇ. 25 ವ್ಯವಹಾರ ನಷ್ಟ

ಕರ್ನಾಟಕ ಹಾಲು ಮಹಾಮಂಡಳಿಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ.25ರಷ್ಟುಕುಸಿತವಾಗಿದೆ. ಮಹಾಮಂಡಳಿಯಲ್ಲಿ ಪ್ರತಿದಿನ 86.73 ಲಕ್ಷ ಲೀ. ಹಾಲು ಸಂಗ್ರಹಣೆಯಾಗುತ್ತದೆ. ಅದರಲ್ಲಿ 39.54 ಲಕ್ಷ ಲೀ. ಮಾರಾಟವಾಗಿ, 47.19 ಲಕ್ಷ ಲೀ. ಹಾಲಿನ ಪುಡಿಯಾಗಿ ಪರಿವರ್ತನೆಯಾಗುತ್ತಿದೆ. 9.5 ಲಕ್ಷ ಕೆ.ಜಿ. ಬೆಣ್ಣೆ ಮಾರಾಟವಾಗದೇ ದಾಸ್ತಾನು ಉಳಿದಿದೆ. 2020ನೇ ಮಾರ್ಚ್ ತಿಂಗಳಲ್ಲಿ ಪ್ರತೀ ಕೆಜಿ ಕೆನೆರಹಿತ ಹಾಲಿನ ಪುಡಿಗೆ 340 ರು. ಇದ್ದುದು, ಪ್ರಸ್ತುತ ದೇಶದಾದ್ಯಂತ ಹಾಲಿನ ಹುಡಿ ದಾಸ್ತಾನು ಹೆಚ್ಚಾಗಿ ಪ್ರತಿ ಕೆ.ಜಿ.ಗೆ 160 ರು. ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ.