ವಿಜಯಪುರ(ಜೂ.10): ಮಹಾರಾಷ್ಟ್ರದಿಂದ ವಲಸಿಗರು ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದು, ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಿಂದ ವಲಸಿಗರು ಅಕ್ರಮವಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಾರೆ.

ಭೀಮಾ ನದಿಯಲ್ಲಿ ಸದ್ಯಕ್ಕೆ ನೀರಿಲ್ಲ. ಹೀಗಾಗಿ ಬಹಳಷ್ಟು ಜನ ವಲಸಿಗರು ರಾತ್ರಿ ಹೊತ್ತಿನಲ್ಲಿ ಚೆಕ್‌ ಪೋಸ್ಟ್‌ಗಳ ಕಡೆಗೆ ಹೋಗದೆ ನದಿಯಲ್ಲಿ ನಡೆದುಕೊಂಡು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ರೀತಿ ಒಬ್ಬರು ಇಬ್ಬರು ಬರುತ್ತಿಲ್ಲ. ದಿನಂಪ್ರತಿ ನೂರಾರು ಜನರು ಬರುತ್ತಿದ್ದಾರೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲು ವಲಸೆ ಕಾರ್ಮಿಕರಿಗೆ ರೈಲ್ವೆ, ಬಸ್ಸಿನ ಸೌಕರ್ಯ ಮಾಡಲಾಗಿದೆ. ಆದರೂ ಕಳ್ಳದಾರಿಯಿಂದ ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಾರೆ.

ಮಹಾರಾಷ್ಟ್ರದ ತೆಲಗಾಂವದಿಂದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಜ ಮೂಲಕ ಜಿಲ್ಲೆಯ ಗಡಿಯೊಳಗೆ ಅಕ್ರಮವಾಗಿ ನುಗ್ಗುತ್ತಿದ್ದಾರೆ. ರೈಲು, ಬಸ್ಸಿನ ಸೇವೆಯನ್ನು ಸರ್ಕಾರ ಕಲ್ಪಿಸಿದ್ದರೂ ಕ್ವಾರಂಟೈನ್‌ ಭಯದಿಂದ ಕಳ್ಳದಾರಿ ಹಿಡಿದಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಜಿಲ್ಲೆಗೆ ಆಗಮಿಸಿದ ತಕ್ಷಣ ಬಸ್‌ಗಳನ್ನು ಹಿಡಿದುಕೊಂಡು ಜಿಲ್ಲೆಯ ಯಾವುದೇ ಮೂಲೆಗೆ ತೆರಳುತ್ತಿದ್ದಾರೆ. ಇಂಥ ಕಳ್ಳದಾರಿಗಳನ್ನು ಬಂದ್‌ ಮಾಡಿದಷ್ಟುಕ್ಷೇಮ. ಇಲ್ಲದಿದ್ದರೆ ಕೊರೋನಾ ಹರಡಲು ಈ ಕಳ್ಳದಾರಿಯೇ ರಹದಾರಿಯಾಗಿ ಜಿಲ್ಲೆಯ ಜನರು ರೋಗಕ್ಕೆ ತುತ್ತಾಗಿ ಪಡಬಾರದ ಕಷ್ಟಪಡುವಂತಾಗುತ್ತದೆ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅಕ್ರಮವಾಗಿ ನುಸುಳುವವರನ್ನು ಹಗಲು ಇರುಳು ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯಬೇಕು. ಇಲ್ಲದಿದ್ದರೆ ಜಿಲ್ಲೆಯ ಜನರಿಗೆ ಅಪಾಯ ತಪ್ಪಿದ್ದಲ್ಲ.

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ:

ವಲಸಿಗರು ಮಹಾರಾಷ್ಟ್ರದಿಂದ ಭೀಮಾ ನದಿಯ ಮೂಲಕ ಕಳ್ಳದಾರಿಯಿಂದ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ತಿಳಿಸಿದ್ದಾರೆ.

ಅಕ್ರಮವಾಗಿ ನುಸುಳುವವರನ್ನು ತಡೆಯಲು 13 ಕಡೆ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅನಧಿಕೃತ ಮಾರ್ಗಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಅಕ್ರಮವಾಗಿ ಬರುವವರನ್ನು ತಡೆಯಲು ಗ್ರಾಮ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಮಾಡಲಾಗಿದೆ. ಆದರೂ ಕೆಲವರು ರಾತ್ರಿ ಹೊತ್ತಿನಲ್ಲಿ ಕಣ್ತಪ್ಪಿಸಿ ಅನಧಿಕೃತವಾಗಿ ಬರುತ್ತಿದ್ದಾರೆ. ಇಂಥವರ ಬಗ್ಗೆ ಗ್ರಾಮೀಣ ಪ್ರದೇಶದ ಜನರು ಕೂಡಾ ಮಾಹಿತಿ ನೀಡುತ್ತಿದ್ದಾರೆ. ಅಂಥವರನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಥ್ರೋಟ್‌ ಸ್ಕ್ಯಾಬ್‌, ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದೂ ತಿಳಿಸಿದರು.