ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದು ಕೇವಲ ₹1280 ಸಾಲ ಬಾಕಿ ಇದ್ದ ಕಾರಣ 7 ವರ್ಷದ ಬಾಲಕಿಯನ್ನು ಅಪಹರಿಸಿದೆ. ಈ ಘಟನೆ ಮಕ್ಕಳ ಹಕ್ಕುಗಳ ಸಮಿತಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದ್ದು, ಸಂಸ್ಥೆಯ ಅಮಾನವೀಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಮಾನುಷ ವರ್ತನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೆಲವೇ ರೂಪಾಯಿಗಳ ಸಾಲ ತೀರಿಸದ ಕಾರಣ ಅದರಲ್ಲೂ ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಅಪಹರಿಸಿರುವುದು ಸಂಸ್ಥೆಗಳ ಸಿಬ್ಬಂದಿಯ ಕ್ರೂರತೆಯನ್ನು ತೋರಿಸಿದ್ದು, ಈ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಗ್ರಾಮದ ನಿವಾಸಿ ನವೀನ್ ಹಾಗೂ ಅವರ ಪತ್ನಿ ಪ್ರಮೀಳಾ ಜೀವನೋಪಾಯಕ್ಕಾಗಿ ಬಜಾಜ್ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ₹30,000 ಸಾಲ ಪಡೆದಿದ್ದರು. ಇವರು 13 ತಿಂಗಳುಗಳವರೆಗೆ ನಿಯಮಿತವಾಗಿ ಕಂತು ತೀರಿಸುತ್ತಿದ್ದರು. ಈ ತಿಂಗಳು ಕೇವಲ ನಾಲ್ಕು ದಿನಗಳ ತಡವಾದ ಕಾರಣ ಸಂಸ್ಥೆಯ ಸಿಬ್ಬಂದಿಗಳು ಮನೆಗೆ ಬಂದು ನವೀನ್ ಅವರ ತಾಯಿಗೆ ಬೈದು ಹಣ ಕಟ್ಟುವಂತೆ ಹಿಂಸೆ ನೀಡಿದ್ದಾರೆ. ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದರು.
ಇಷ್ಟಕ್ಕೇ ಸುಮ್ಮನಾಗದ ಸಿಬ್ಬಂದಿ, ಪಕ್ಕದ ಊರಿನಲ್ಲಿ ಇರುವ ನವೀನ್ ಅವರ ಏಳುವರ್ಷದ ಮಗಳ ಬಳಿ ಹೋಗಿ, "ನಿನ್ನ ತಾಯಿ ಎಲ್ಲಿ?" ಎಂದು ಕೇಳುತ್ತಾ ಆ ಮಗುವನ್ನು ಕೂಡ ಹೆದರಿಸಿ ಕಿರುಕುಳ ನೀಡಿದ್ದಾರೆ. ಮಾತ್ರವಲ್ಲ ಮಗುವನ್ನು ಬಲವಂತದಿಂದ ಕರೆದುಕೊಂಡು ಹೋದ ಘಟನೆ ನಡೆದಿದೆ.
ತಾಳಿ ಅಡವಿಟ್ಟು ಹಣ ಕೊಡ್ತೀವಿ ಸಂಜೆ ಬನ್ನಿ ಎಂದು ಭರವಸೆ ನೀಡಿದರೂ ಕೂಡ ಕೇಳದೆ "ಈಗಲೇ ಹಣ ಬೇಕು" ಎಂದು ಸಿಬ್ಬಂದಿ ಪೀಡಿಸಿದ್ದರು ಎಂಬುದಾಗಿ ಕುಟುಂಬದವರು ತಿಳಿಸಿದ್ದಾರೆ. ಈ ಘಟನೆಯು ನಾಲ್ಕು ದಿನಗಳ ಹಿಂದೆ ನಡೆದಿದೆ. ಮೈಸೂರು ಮಕ್ಕಳ ಹಕ್ಕುಗಳ ಸಮಿತಿ ಕಾರ್ಯಾಚರಣೆ ವೇಳೆ ಘಟನೆ ಬಹಿರಂಗವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ಆದೇಶಗಳಿಗೂ ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿವಿಗೊಡದೇ, 'ಡೋಂಟ್ ಕೇರ್' ನಿಲುವು ತಾಳಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳನ್ನು ಬಳಸಿ ಹಣ ವಸೂಲಿ ಮಾಡುವ ಕ್ರೂರ ವ್ಯವಹಾರ ತಕ್ಷಣವೇ ನಿಲ್ಲಬೇಕು ಎಂದು ನಾಗರಿಕ ಸಮಾಜ ಒತ್ತಾಯಿಸುತ್ತಿವೆ.
ಮೈಸೂರಿನಲ್ಲಿ ಮಗು ಅಪಹರಣ ಪ್ರಕರಣ ಗೃಹ ಸಚಿವರ ಪ್ರತಿಕ್ರಿಯೆ
ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಏಳುವರ್ಷದ ಮಗಳನ್ನು ಕರೆದೊಯ್ಯುವ ಮೂಲಕ ಮಾನವೀಯತೆಯನ್ನು ಮರೆಯುವಂತಹ ಕ್ರೂರ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೇ ಕಠಿಣ ಕಾನೂನುಗಳನ್ನು ನಾವು ತಂದಿದ್ದೇವೆ. ಇಂದೇ ನಾನು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಯವರ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಮಗು ಕರೆದೊಯ್ಯುವಂತಹ, ಅಪಹರಣ ಮಾಡುವಂತಹ ಕ್ರಿಯೆ ಖಂಡನೀಯ. ಇದನ್ನು ಮಾಡುವವರು ಕಠಿಣ ಹೃದಯಿಗಳು, ಮಾನವೀಯತೆ ಇಲ್ಲದವರು ಎಂದು ಅವರು ತಿಳಿಸಿದ್ದಾರೆ.
ವಸತಿ ಯೋಜನೆ – ಲಂಚ ಆರೋಪಕ್ಕೆ ಸ್ಪಷ್ಟನೆ
ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ಇಲಾಖೆಯಿಂದ ಮನೆ ಪಡೆಯಲು ಲಂಚ ನೀಡಬೇಕು ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ನಾನು ಮಾಧ್ಯಮಗಳಲ್ಲಿ ಈ ಹೇಳಿಕೆಯನ್ನು ನೋಡಿದ್ದೇನೆ. ಅವರು ನೇರವಾಗಿ ಲಂಚ ವಿಚಾರವನ್ನು ಹೇಳಿದ್ದಾರೆ ಎಂಬ ಮಾಹಿತಿ ನನಗೆ ಇಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದರು ಎನ್ನುವುದು ಸ್ಪಷ್ಟವಿಲ್ಲ. ಆದರೆ, ಯಾರು ಲಂಚ ಕೇಳುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ದೂರು ನೀಡಿದರೆ, ವಸತಿ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಮೀಸಲಾತಿ ಕುರಿತು ಸ್ಪಷ್ಟನೆ
ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಮೀಸಲಾತಿ ನೀಡುವುದು ಕುರಿತು ನಡೆದ ಚರ್ಚೆಯ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವರು, “ಯಾರಿಗೆ ಮನೆ ಇಲ್ಲವೋ ಅವರಿಗೆ ಮನೆ ಕೊಡಬೇಕಾಗುತ್ತದೆ. ಇಲ್ಲಿ 15% ಅಥವಾ 20% ಎಂಬ ಅಂಶವೇ ಇಲ್ಲ. ಯಾರಿಗೆ ಮನೆ ಇಲ್ಲವೋ ಅವರ ಅವಶ್ಯಕತೆಯನ್ನೇ ಆದ್ಯತೆ ನೀಡಬೇಕು. ಈ ವರ್ಷ ಒಂದು ಸಮುದಾಯಕ್ಕೆ ಹೆಚ್ಚು ಮನೆ ಕೊಡಲಾದರೆ, ಮುಂದೆ ಅವರ ಶೇಕಡಾವಾರು ಕಡಿಮೆಯಾಗಬಹುದು. ಇದು ಧರ್ಮಾಧಾರಿತ ಮೀಸಲಾತಿ ವಿಷಯವೇ ಅಲ್ಲ. ಹಿಂದೆ ಪರಿಶಿಷ್ಟರಿಗೆ ಕಡಿಮೆ ಮನೆ ಸಿಕ್ಕಿದ್ದನ್ನು ಮನಗಂಡು ಈಗ ಅವರಿಗೆ ಹೆಚ್ಚು ಕೊಡಲಾಗುತ್ತಿದೆ. ಮುಂದೆಯೂ ಇದೇ ರೀತಿಯಲ್ಲಿ ಸಮತೋಲನ ಕಾಪಾಡಲಾಗುವುದು” ಎಂದು ಸ್ಪಷ್ಟಪಡಿಸಿದರು.
