ಬೆಂಗಳೂರು [ಜ.02]:  ಕನ್ನಡ ನಾಮಫಲಕ ಅಳವಡಿಕೆ ಪ್ರಶ್ನಿಸಿದ್ದ ಬಹುರಾಷ್ಟ್ರೀಯ ಕಂಪನಿ ‘ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಹೈಕೋರ್ಟ್‌ನ ತೀಕ್ಷ್ಣ ಕಿವಿ ಮಾತು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ತನ್ನ ಮಳಿಗೆಗಳ ನಾಮಫಲಕಗಳನ್ನು ಕನ್ನಡ ಭಾಷೆಗೆ ಬದಲಾಯಿಸಿದೆ.

ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಿ ಬಿಬಿಎಂಪಿ ನೀಡಿರುವ ನೋಟಿಸ್‌ ರದ್ದುಪಡಿಸುವಂತೆ ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕಳೆದ ಶುಕ್ರವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ‘ನಾವು ಇರುವುದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಿ ಪಾಲನೆ ಮಾಡಬೇಕು’ ಎಂದು ಕಂಪನಿಗೆ ಕಿವಿಮಾತು ಹೇಳಿತ್ತು.

ಈ ಮಧ್ಯ ಕನ್ನಡ ನಾಮಫಲಕ ಅಳವಡಿಕೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಮೆಟ್ರೋ ಕಂಪನಿ ಹಾಗೂ ಇತರೆ ಉದ್ದಿಮೆಗಳ ವಿರುದ್ಧ ಕನ್ನಡಿಗರಿಂದ ಸಾಕಷ್ಟುಆಕ್ರೋಶ ವ್ಯಕ್ತವಾಗಿತ್ತು. ಕಳೆದ ಸೋಮವಾರ ‘ಕನ್ನಡ ಗ್ರಾಹಕ ಕೂಟ’ ಟ್ವಿಟರ್‌ನಲ್ಲಿ ಹಮ್ಮಿಕೊಂಡಿದ್ದ ‘ನೋ ಕನ್ನಡ, ನೋ ಬ್ಯುಸಿನೆಸ್‌’ ಅಭಿಯಾನಕ್ಕೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದ ಬೆಚ್ಚಿಬಿದ್ದ ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನಗರದ ವೈಟ್‌ಫೀಲ್ಡ್‌, ಮೈಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಯಶವಂತಪುರದ ತನ್ನ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟುಕನ್ನಡ ಬಳಸಿ, ನಾಮಫಲಕ ಬದಲಾವಣೆ ಮಾಡಿಕೊಂಡ ಫೋಟೋಗಳನ್ನು ಕಂಪನಿ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಜತೆಗೆ ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಭಾರತದಾದ್ಯಂತ ಇರುವ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯನ್ನು ಗೌರವಿಸುತ್ತಿದೆ. ಬೆಂಗಳೂರಿನ ಸಂಸ್ಥೆಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಪ್ರಧಾನವಾಗಿ ಬಳಸಲಾಗುವುದು. ನಾಮಫಲಕದಲ್ಲಿ ಶೇ.60 ರಷ್ಟುಕನ್ನಡ ಶೇ.40ರಷ್ಟುಅನ್ಯ ಭಾಷೆ ಬಳಸುವ ಸಂಬಂಧ ಹೊರಡಿಸಿರುವ ಆದೇಶವನ್ನು ಗೌರವಿಸಿ ಪಾಲಿಸುತ್ತೇವೆ ಎಂದು ತನ್ನ ಸಂಸ್ಥೆಯ ಟ್ವೀಟರ್‌ ಖಾತೆಯಲ್ಲಿ ಹೇಳಿಕೊಂಡಿದೆ.

ಸರ್ಕಾರ ರೂಪಿಸುವ ನೀತಿಯ ವಿರುದ್ಧ ಕೋರ್ಟ್‌ ಮೊರೆ ಹೋಗುವವರಿಗೆ ತಕ್ಕ ಪಾಠವಾಗಲಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ನಗರದ ಎಲ್ಲ ಉದ್ದಿಮೆದಾರರು ಕೂಡಲೇ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳಬೇಕು.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ.