ಒಂದೂವರೆ ಕಿಮೀ ದೂರದ ಪ್ರಯಾಣಕ್ಕೆ ಕನಿಷ್ಠ 30 ರುಪಾಯಿ, ನಂತರ ಒಂದು ಕಿಮೀ ಗೆ ಹದಿನೈದು ರುಪಾಯಿ ನಿಗದಿಯಾಗಿದೆ. 18 ರುಪಾಯಿ ಇದ್ದ ದರ ಒಮ್ಮೆಲೆ 30 ರುಪಾಯಿ ನಿಗದುಯಾಗಿರುವುದು ಆಟೋ ಚಾಲಕರಲ್ಲಿ ಸಂತಸ ತಂದಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಒಂದುವರೆ ಪಟ್ಟು ದರ ನೀಡಬೇಕಾಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಮಾ.01):  ಚಿತ್ರದುರ್ಗದಲ್ಲಿ ಇನ್ಮೇಲೆ ಆಟೋ ಚಾಲಕರ ಮುಂದೆ ಚಂದ್ರವಳ್ಳಿಗೆ ಬರ್ತಿಯೇನಪ್ಪ, ಎಷ್ಟುಕೊಡಬೇಕು ಎಂಬಿತ್ಯಾದಿ ದುಡ್ಡಿನ ಚೌಕಾಸಿ ಮಾತುಗಳ ಪ್ರಶ್ನೆಯೇ ಎದುರಾಗದು. ಆಟೋ ಹತ್ತಿ ಕುಳಿತುಕೊಂಡ್ರೆ ಸಾಕು, ನೀವು ಹೋಗುವ ಸ್ಥಳಕ್ಕೆ ದುಡ್ಡು ಎಷ್ಟಾಗುತ್ತೆ ಎಂಬುದನ್ನು ಮೀಟರ್‌ ತೋರಿಸುತ್ತದೆ. ಅಷ್ಟುಹಣ ಪಾವತಿ ಮಾಡಿ. ಚಾಲಕರ ಸಂಗಡ ಕೊಸರಾಡುವ, ಇಲ್ಲವೇ ಜಾಸ್ತಿಯಾಯಿತೆಂದು ಜಗಳವಾಡುವ ಸಂದರ್ಭ ಸೃಷ್ಟಿಯಾಗದು.

ಚಿತ್ರದುರ್ಗದಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಿದ್ದು ಮಾರ್ಚ್‌ 1 (ಬುಧವಾರ)ದಿಂದ ಜಾರಿಗೆ ಬರುತ್ತಿದೆ. ಆಟೋ ಹತ್ತುವ ಮುನ್ನವೇ ಮೀಟರ್‌ ಹಾಕಿ ಎಂದು ಹೇಳುವ ಪರಿಪಾಠ ಪ್ರಯಾಣಿಕರು ಬೆಳೆಸಿಕೊಳ್ಳಬೇಕಿದೆ. ಆಟೋ ಚಾಲಕರು ದುಬಾರಿ ಮೊತ್ತ ವಸೂಲು ಮಾಡುತ್ತಿದ್ದಾರೆಂಬ ಸಾರ್ವಜನಿಕ ಆರೋಪಗಳು ಹಾಗೂ ಕನ್ನಡಪ್ರಭ ಮಾಡಿದ ಸರಣಿ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ದಿವ್ಯಾಪ್ರಭು ಹಾಗೂ ಎಸ್ಪಿ ಪರುಶುರಾಂ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಪ್ರಮುತೇಶ್‌ ಈ ಸಂಬಂಧ ಆಟೋ ಚಾಲಕರ ಸಭೆ ಕರೆದು ಚರ್ಚಿಸಿ ದರ ಪರಿಷ್ಕರಣೆ ಮಾಡುವ ತೀರ್ಮಾನಕ್ಕೆ ಮುಂದಾದರು.

ಚಿತ್ರದುರ್ಗದ ಕಿರು ಮೃಗಾಲಯಕ್ಕೆ ಬೆಂಗಾಲ್ ಟೈಗರ್ಸ್ ಎಂಟ್ರಿ, ಪುಳಕಿತರಾದ ಪ್ರವಾಸಿಗರು

ದರ ಪರಿಷ್ಕರಣೆಗೂ ಮುನ್ನ ಆಟೋಗಳಿಗೆ ಮೀಟರ್‌ ಅಳವಡಿಸಬೇಕು ಹಾಗೂ ಮಾಪನಾಂಕ ನಮೂದಾಗುವಂತೆ ನೋಡಿಕೊಳ್ಳಬೇಕೆಂಬ ಬಿಗಿ ನಿರ್ದೇಶನ ನೀಡಿ ಗಡವು ವಿಧಿಸಿದರು. ನಂತರವೇ ದರ ಪರಿಷ್ಕರಣೆಗೆ ಮುಂದಾದರು. ಪರಿಣಾಮ ಒಂದೂವರೆ ಕಿಮೀ ದೂರದ ಪ್ರಯಾಣಕ್ಕೆ ಕನಿಷ್ಠ 30 ರುಪಾಯಿ, ನಂತರ ಒಂದು ಕಿಮೀ ಗೆ ಹದಿನೈದು ರುಪಾಯಿ ನಿಗದಿಯಾಗಿದೆ. 18 ರುಪಾಯಿ ಇದ್ದ ದರ ಒಮ್ಮೆಲೆ 30 ರುಪಾಯಿ ನಿಗದುಯಾಗಿರುವುದು ಆಟೋ ಚಾಲಕರಲ್ಲಿ ಸಂತಸ ತಂದಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಒಂದುವರೆ ಪಟ್ಟು ದರ ನೀಡಬೇಕಾಗಿದೆ.

ಪೂರ್ಣ ಪ್ರಮಾಣದ ಮೀಟರ್‌ಗಳಿಲ್ಲ

ಸಾರಿಗೆ ಪ್ರಾಧಿಕಾರದ ಸಭೆ ನೀಡಿದ ಬಿಗಿ ನಿರ್ದೇಶನದ ನಡುವೆಯೂ ಕೆಲ ಆಟೋ ಚಾಲಕರು ತೂಕ ಮತ್ತು ಅಳತೆ ಇಲಾಖೆ ವತಿಯಿಂದ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳುವಲ್ಲಿ ಉದಾಸೀನ ತೋರಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ಪ್ರಕಾರ ಚಿತ್ರದುರ್ಗದಲ್ಲಿ 3627 ಆಟೋಗಳಿವೆ. ಫೆಬ್ರವರಿ 28 ರವರೆಗೆ 678 ಆಟೋಗಳಿಗೆ ಮಾತ್ರ ಸತ್ಯಾಪನೆ ಮತ್ತು ಮುದ್ರ ಮಾಡಲಾಗಿದೆ. ಉಳಿದ 2950 ಆಟೋಗಳು ಮೀಟರ್‌ ರೀಡಿಂಗ್‌ನಿಂದ ಹೊರಗಿದ್ದು,

ಪ್ರಯಾಣಿಕರೊಂದಿಗೆ ಜಗಳವಾಡುವ ಸಾಧ್ಯತೆಗಳಿವೆ.

2023ರ ಜನವರಿ 23ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ನಡಾವಳಿಯನ್ವಯ ಆಟೋರೀಕ್ಷಾ ಪ್ರಯಾಣ ದರವನ್ನು ಜಿಲ್ಲೆಯಾದ್ಯಂತ ಪರಿಷ್ಕರಿಸಲಾಗಿದ್ದು, ಚಿತ್ರದುರ್ಗ ನಗರ ಮಿತಿಯಲ್ಲಿ ಆಟೋರಿಕ್ಷಾ ಮೀಟರ್‌ಗಳ ಮಾಪನಾಂಕಗೊಳಿಸಲು ಫೆಬ್ರವರಿ 28 ರವರೆಗೆ ಗಡುವು ನೀಡಲಾಗಿತ್ತು. ಆಟೋರಿಕ್ಷಾ ಮೀಟರ್‌ಗಳ ಮಾಪನಾಂಕ ಮತ್ತು ಅಳವಡಿಕೆಯ ಬಗ್ಗೆ ತನಿಖಾ ಕಾರ್ಯವನ್ನು ಮಾಚ್‌ರ್‍ 1ರಿಂದ ಹಮ್ಮಿಕೊಳ್ಳಲಾಗಿದೆ. ಮೀಟರ್‌ಗಳ ಮಾಪನಾಂಕ ಅಳವಡಿಸಿಕೊಳ್ಳದ ಆಟೋರಿಕ್ಷಾ ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಅಂತ ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್‌ ತಿಳಿಸಿದ್ದಾರೆ.