Asianet Suvarna News Asianet Suvarna News

ಮೆಸ್ಕಾಂ: ಗಾಳಿ, ಮಳೆಗೆ 21, 702 ಕಂಬಗಳಿಗೆ ಹಾನಿ, 33 ಕೋಟಿ ರು.ಗೂ ಅಧಿಕ ನಷ್ಟ

ಮುಂಗಾರು ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 21,702 ವಿದ್ಯುತ್ ಕಂಬಗಳು ಧಾರಾಶಾಯಿಯಾಗಿದ್ದು ಪರಿವರ್ತಕಗಳು ಸೇರಿದ೦ತೆ ಒಟ್ಟು 33.40 ಕೋಟಿ ರು. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ

Mescom Wind  rain damage 21,702 poles, loss over Rs 33 crore snr
Author
First Published Aug 6, 2024, 12:34 PM IST | Last Updated Aug 6, 2024, 12:34 PM IST

 ಮಂಗಳೂರು  : ಮುಂಗಾರು ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 21,702 ವಿದ್ಯುತ್ ಕಂಬಗಳು ಧಾರಾಶಾಯಿಯಾಗಿದ್ದು ಪರಿವರ್ತಕಗಳು ಸೇರಿದ೦ತೆ ಒಟ್ಟು 33.40 ಕೋಟಿ ರು. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ. 2024 ರ ಏ.1 ರಿಂದ ಆ.1 ರ ಅವಧಿಯಲ್ಲಿ ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10,14,46,000 ರು. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 9,67,53,000 ರು. ಮೊತ್ತದ ಆಸ್ತಿಗಳಿಗೆ ಹಾನಿಯಾಗಿದೆ. ಉಳಿದ೦ತೆ ಉಡುಪಿ ಜಿಲ್ಲೆಯಲ್ಲಿ 8,48,31,000 ರು. ಮತ್ತು ಶಿವಮೊಗ್ಗದಲ್ಲಿ 5,09,34,000 ರು. ಮೊತ್ತದ ಆಸ್ತಿಗಳು ಹಾನಿಗೊಳಗಾಗಿದೆ. ಹಾನಿಗೊಳಗಾದ ಬಹುತೇಕ ವಿದ್ಯುತ್‌ ಕಂಬಗಳು ಪರಿವರ್ತಕಗಳು ಹಾಗೂ ವಿದ್ಯುತ್‌ ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್‌ ಪೂರೈಕೆ ಸುಗಮಗೊಳಿಸಲಾಗಿದೆ. ಆದಾಗ್ಯೂ ಕೆಲವೊಂದು ಕಡೆ ದುರಸ್ತಿ ಮತ್ತು ಬದಲಾವಣೆ ಕಾರ್ಯ ಮುಂದುವರಿದಿದೆ.

ದ.ಕ.ದಲ್ಲಿ ಅತೀ ಹೆಚ್ಚು ಕಂಬಗಳಿಗೆ ಹಾನಿ: ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಹೋಲಿಸಿದರೆ ಗಾಳಿ-ಮಳೆಗೆ ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 6,369 ಕಂಬಗಳಿಗೆಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 5,597, ಶಿವಮೊಗ್ಗದಲ್ಲಿ 4,960 , ಉಡುಪಿ ಜಿಲ್ಲೆಯಲ್ಲಿ 4,776 ಕಂಬಗಳು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ 21,702 ವಿದ್ಯುತ್ ಕಂಬಗಳ ಪೈಕಿ 21,245 ಕಂಬಗಳನ್ನು ಬದಲಾಯಿಸಲಾಗಿದೆ.

ಅದೇ ರೀತಿ ಒಟ್ಟಾರೆ 4 ಜಿಲ್ಲೆಗಳಲ್ಲಿ 316 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ದ.ಕ.ದಲ್ಲಿ 75, ಉಡುಪಿ ಜಿಲ್ಲೆಯಲ್ಲಿ 22, ಶಿವಮೊಗ್ಗದಲ್ಲಿ 212 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ. ವಿದ್ಯುತ್ ಪರಿವರ್ತಕಗಳಿಗೆ ಸ೦ಬ೦ಧಿಸಿದ೦ತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಹಾನಿ ಸಂಭವಿಸಿದ್ದು, 7 ಪರಿವರ್ತಕಗಳಿಗೆ ಹಾನಿಯಾಗಿವೆ. ಹಾನಿಗೊಳಗಾಗಿರುವ 316 ವಿದ್ಯುತ್ ಪರಿವರ್ತಕಗಳ ಪೈಕಿ ಎಲ್ಲ 316 ಪರಿವರ್ತಕಗಳನ್ನೂ ದುರಸ್ತಿ, ಬದಲಾಯಿಸಲಾಗಿದೆ.

ಇದಲ್ಲದೆ 614.30 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಂಡಿವೆ. ದ.ಕ.ದಲ್ಲಿ 318.15 ಕಿ.ಮೀ., ಉಡುಪಿ ಜಿಲ್ಲೆಯಲ್ಲಿ86.39 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 111.94 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 97.82 ಕಿ.ಮಿ. ವಿದ್ಯುತ್ ಮಾರ್ಗ ಹಾನಿಗೊಂಡಿದೆ. ಇದರಲ್ಲಿ 604.43 ಕಿ.ಮೀ. ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಸಹಕರಿಸಲು ಮೆಸ್ಕಾಂ ಮನವಿ 

ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಳಿ, ಮಳೆ ಲೆಕ್ಕಿಸದೆ ಅವಿರತವಾಗಿ ಶ್ರಮಿಸಿ, ಗ್ರಾಹಕರ ಸಹಕಾರದಿಂದ ವಿದ್ಯುತ್‌ ಪೂರೈಕೆಯಲ್ಲಿನ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ಇನ್ನೂ ಹಲವೆಡೆ ದುರಸ್ಥಿ ಕಾರ್ಯ ಮುಂದುವರಿದಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

Latest Videos
Follow Us:
Download App:
  • android
  • ios