ಬೆಳಗಾವಿ ಪಾಲಿಕೆ ಗೆಲ್ಲಲು ಮಹತ್ವದ ಮೈತ್ರಿ : ಕುತೂಹಲದ ಚುನಾವಣಾ ಕಣ
- ಗಡಿ, ಭಾಷೆ ವಿವಾದವನ್ನೇ ತನ್ನ ರಾಜಕೀಯ ಬಂಡವಾಳವಾಗಿಸಿಕೊಂಡಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ
- ಪಾಲಿಕೆ ಚುನಾವಣೆ ವೇಳೆ ‘ಎಂ ಪ್ಲಸ್ ಎಂ’ ಎಂಬ ಹೊಸ ನಾಟಕ
ಬೆಳಗಾವಿ (ಆ.29): ಗಡಿ, ಭಾಷೆ ವಿವಾದವನ್ನೇ ತನ್ನ ರಾಜಕೀಯ ಬಂಡವಾಳವಾಗಿಸಿಕೊಂಡಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೆ ಇದೀಗ ಪಾಲಿಕೆ ಚುನಾವಣೆ ವೇಳೆ ‘ಎಂ ಪ್ಲಸ್ ಎಂ’ ಎಂಬ ಹೊಸ ನಾಟಕ ಆರಂಭಿಸಿದೆ.
ರಾಜಕೀಯ ಪಕ್ಷಗಳು ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಮಾಡಿರುವುದು ಎಂಇಎಸ್‌ಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಭಾಷೆ, ಗಡಿ ವಿಚಾರ ಪ್ರಸ್ತಾಪಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಎಂಇಎಸ್ ಈ ಬಾರಿ ಯಾವ ವಿಚಾರದ ಮೇಲೆ ಚುನಾವಣೆ ಎದುರಿಸಬೇಕು ಎಂದು ದಿಕ್ಕು ತೋಚದೆ ಕಂಗಾಲಾಗಿದೆ. ಇದೀಗ ಮರಾಠಿ ಪ್ಲಸ್ ಮುಸ್ಲಿಂ(ಎಂ ಪ್ಲಸ್ ಎಂ) ಎಂಬ ಸೂತ್ರ ಕಂಡುಕೊಂಡಿದೆ.
ಬೆಳಗಾವಿ: ಕಾಂಗ್ರೆಸ್ಸಿಗೇ ಪಾಲಿಕೆ ಅಧಿಕಾರದ ಗದ್ದುಗೆ, ಸತೀಶ ಜಾರಕಿಹೊಳಿ
ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂ.6ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುಜಮ್ಮಿಲ್ ಹಕೀಂ ಎಂಬುವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಎಂಇಎಸ್ ಘೋಷಣೆ ಮಾಡಿದೆ. ಅಲ್ಲದೇ, ಎಂಇಎಸ್ ಯುವ ನಾಯಕ ಶುಭಂ ಶೆಳಕೆ ಸೇರಿದಂತೆ ಮತ್ತಿತರ ನಾಯಕರು ಮುಸ್ಲಿಂ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಮುಸ್ಲಿಂ ಪ್ಲಸ್ ಮರಾಠಿ ಸೂತ್ರದೊಂದಿಗೆ ಚುನಾವಣೆ ಎದುರಿಸೋಣ, ರಾಜಕೀಯ ನಾಯಕರನ್ನು ಸದೆ ಬಡಿಯೋಣ ಎಂದು ಎಂಇಎಸ್ ನಾಯಕರು ಬಹಿರಂಗವಾಗಿ ಕರೆ ಕೊಟ್ಟಿದ್ದಾರೆ.
ಮಾರಾಮಾರಿ ಎಂದರ್ಥ
‘ಎಂ+ಎಂ’ ಎಂದರೆ ಮಾರಾಮಾರಿ ಎಂದರ್ಥ. ಎಂಇಎಸ್‌ನ ಈ ಸೂತ್ರದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು.
- ಲಕ್ಷ್ಮಣ ಸವದಿ, ಮಾಜಿ ಡಿಸಿಎಂ
ಎಂಇಎಸ್ ಈವರೆಗೆ ಎಂದಿಗೂ ಮುಸ್ಲಿಂ ಅಭ್ಯರ್ಥಿ ಪರವಾಗಿ ನಿಲುವು ಹೊಂದಿರಲಿಲ್ಲ. ಬೆಳಗಾವಿ ಪಾಲಿಕೆ ಚುನಾವಣೆ ವಿಚಾರದಲ್ಲಿ ಕನ್ನಡ- ಉರ್ದು ಭಾಷಿಕರು ಒಂದಾಗುತ್ತ ಬಂದಿದ್ದರು. ಆದರೆ, ಈ ಬಾರಿ ಎಂಇಎಸ್ ಮುಸ್ಲಿಮರೊಂದಿಗೆ ಕೈಜೋಡಿಸಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಈ ಬೆಳವಣಿಗೆ ಕನ್ನಡ- ಉರ್ದು ಭಾಷಿಕರ ಸೌಹಾರ್ದತೆಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಎಂಇಎಸ್‌ನ ಎಂ ಪ್ಲಸ್ ಎಂ ಷಡ್ಯಂತ್ರ ರೂಪಿಸಿರುವುದು ಉರ್ದು ಭಾಷಿಕರಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಅಭಿವೃದ್ಧಿ, ಹಿಂದೂತ್ವದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಎದುರಿಸುತ್ತೇವೆ. ಎಂ ಪ್ಲಸ್ ಎಂ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡಲಾಗುವುದು. ಇದು ಮಾರಾ ಮಾರಿ. ಎಂ ಪ್ಲಸ್ ಎಂ ಬಗ್ಗೆ ಪ್ರತಿ ಮತದಾರರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಎಂ ಪ್ಲಸ್ ಎಂ ಅಂದರೆ ಮಾರಾ ಮಾರಿ. ಮಹಾನಗರ ಪಾಲಿಕೆ ಚುನಾವಣೆ ಭಾಷಾ ಆಧಾರದ ಮೇಲೆ ನಡೆಯುತ್ತಿತ್ತು. ನಮ್ಮ ಪಕ್ಷ ತೀರ್ಮಾನ ಮಾಡಿ ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಲು ಈ ಚುನಾವಣೆಯಲ್ಲಿ ಗೆಲವು ಸಾಧಿಸುತ್ತೇವೆ ಎನ್ನುವ ಪ್ರಯೋಗ ಮಾಡಿದ್ದೇವೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎನ್ನುವ ವಿಶ್ವಾಸವಿದೆ
- ಲಕ್ಷ್ಮಣ ಸವದಿ, ಮಾಜಿ ಡಿಸಿಎಂ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್, ಎಂ ಪ್ಲಸ್ ಎಂ (ಎಂಇಎಸ್ ಪ್ಲಸ್ ಮುಸ್ಲಿಂ) ಫಾರ್ಮೂಲಾ ಮಾಡಿಕೊಂಡಿದ್ದು, ಅದಕ್ಕೆ ಮತದಾರರೇ ತಕ್ಕ ಶಾಸ್ತಿ ಕಲಿಸುತ್ತಾರೆ
- ಅಭಯ ಪಾಟೀಲ, ಬೆಳಗಾವಿ ದಕ್ಷಿಣ ಶಾಸಕ