ಲಾಕ್‌ಡೌನ್ ಮಧ್ಯೆ ವೇತನ ಏರಿಕೆ: ಡಿಪ್ಲೋಮಾ ಕಾಲೇಜು ಬೋಧಕರಿಂದಲೇ ಅಸಮಾಧಾನ!
ಲಾಕ್‌ಡೌನ್ ವೇಳೆಯಲ್ಲಿ ವೇತನ ಪರಿಷ್ಕರಣೆ ಅಗತ್ಯವಿರಲಿಲ್ಲ| 7ನೇ ವೇತನ ಆಯೋಗದ ಶಿಫಾರಸಿಗೆ ಸರ್ಕಾರದ ಒಪ್ಪಿಗೆ| ತಾಂತ್ರಿಕ ಶಿಕ್ಷಣ ಇಲಾಖೆಗೆ ವಾರ್ಷಿಕ 150 ಕೋಟಿ ಹೊರೆ| ಆರ್ಥಿಕ ಪರಿಸ್ಥಿತಿ ಸುಧಾರಿಸಲಿ| ಆಮೇಲೆ ವೇತನ ಪರಿಷ್ಕರಿಸಲಿ. ಅಲ್ಲಿವರೆಗೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.02): ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲೇ ತಾಂತ್ರಿಕ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಿಪ್ಲೊಮಾ ಕಾಲೇಜುಗಳ ಬೋಧಕರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಏರಿಕೆ ಆಗಿರುವುದಕ್ಕೆ ಸ್ವತಃ ಫಲಾನುಭವಿ ಬೋಧಕರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ಕೊರೋನಾದಿಂದ ರಾಜ್ಯ ಸುಧಾರಿಸಲಿ, ಆ ಮೇಲೆ ನಮಗೆ ಸಂಬಳ ಹೆಚ್ಚಿಸಿ ಎನ್ನುವ ಕಳಕಳಿ ಅವರದು!
ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಡಿಪ್ಲೊಮಾ ಕಾಲೇಜ್ ಉಪನ್ಯಾಸಕರಿಗೆ 7ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆ ಮಾಡಿದ್ದು, ಸರ್ಕಾರ ಅದಕ್ಕೆ ಅಸ್ತು ಎಂದಿದೆ. ಪರಿಷ್ಕೃತ ವೇತನವೂ ಲಾಕ್‌ಡೌನ್ ಮುಗಿದ ಬಳಿಕ ದೊರೆಯುವ ಸಾಧ್ಯತೆ ಇದೆ. ಇದರಿಂದ ವರ್ಷಕ್ಕೆ ಸುಮಾರು 150 ಕೋಟಿ ಹೊರೆಯಾಗಲಿದೆ.
ರಾಜ್ಯದಲ್ಲಿ 88 ಸರ್ಕಾರಿ ಹಾಗೂ 44 ಅನುದಾನಿತ, 170 ಅನುದಾನ ರಹಿತ ಪಾಲಿಟೆಕ್ನಿಕ್ ಕಾಲೇಜ್‌ಗಳಿವೆ. ಇದಲ್ಲದೇ, 13 ಸರ್ಕಾರಿ ಮತ್ತು 9 ಅನುದಾನಿತ ಎಂಜಿನಿಯರಿಂಗ್ ಕಾಲೇಜ್‌ಗಳಲ್ಲೂ ಡಿಪ್ಲೊಮಾ ಕೋರ್ಸ್‌ಗಳು ನಡೆಯುತ್ತಿವೆ. ಎಂಜಿನಿಯರಿಂಗ್ ಹೋಗಲು ಅವಕಾಶ ಸಿಗದವರು ಅಥವಾ ವೃತ್ತಿಪರ ಕೋರ್ಸ್‌ಗಳನ್ನು ಮಾಡಬೇಕೆನ್ನುವವರು ಹೆಚ್ಚಾಗಿ ಡಿಪ್ಲೊಮಾ ಪ್ರವೇಶ ಪಡೆಯುವುದು ಮಾಮೂಲು. ಹಾಗೆ ನೋಡಿದರೆ ಡಿಪ್ಲೊಮಾ ಪ್ರವೇಶ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಲೇ ಸಾಗಿದೆ. 2015-16ರಲ್ಲಿ 61 ಸಾವಿರದಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ, 2019-20ರ ಸಾಲಿಗೆ ಇದರ ಪ್ರಮಾಣ 41 ಸಾವಿರಕ್ಕೆ ಇಳಿಕೆಯಾಗಿದೆ. 5ವರ್ಷಗಳಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾದಂತಾಗಿದೆ. ಎಲ್ಲ ಕಾಲೇಜ್‌ಗಳನ್ನು ಪರಿಗಣಿಸಿದರೆ ಪ್ರತಿವರ್ಷ 30 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿಯೇ ಉಳಿದಿರುತ್ತವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಮೂಲಗಳು ತಿಳಿಸುತ್ತವೆ.
ಕೋತಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿರುವ ಪಿಎಸ್‌ಐ: ಖಾಕಿಧಾರಿಯ ಮಾನವೀಯತೆ
ಅನುದಾನಿತ ಕಾಲೇಜುಗಳಲ್ಲಿ 1000 ಜನ ಬೋಧಕರಿದ್ದರೆ, ಸರ್ಕಾರಿ ಕಾಲೇಜುಗಳಲ್ಲಿ 3900 ಜನ ಬೋಧಕರಿದ್ದಾರೆ. ಇವರೆಲ್ಲರೂ 7ನೇ ಪೇ ಸ್ಕೇಲ್‌ನ ಲಾಭ ಪಡೆಯಲಿದ್ದಾರೆ. ಪ್ರತಿಯೊಬ್ಬರ ಸಂಬಳವೂ ಶೇ. 20-25ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ತಾಂತ್ರಿಕ ಶಿಕ್ಷಣ ಇಲಾಖೆಗೆ ವರ್ಷಕ್ಕೆ . 150 ಕೋಟಿ ಹೊರೆಯಾಗುವ ಸಾಧ್ಯತೆ ಇದೆ.
ಈ ಸಂಕಷ್ಟದಲ್ಲಿ ಏರಿಕೆಯೇ?:
ಹಾಗೇ ನೋಡಿದರೆ 7ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆಯೇನೋ ಇತ್ತು. ಕೊರೋನಾದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಇಂತಹ ಸಮಯದಲ್ಲಿ ಇದನ್ನು ಮಾಡುವ ಅಗತ್ಯವಿರಲಿಲ್ಲ. ಆರ್ಥಿಕ ದುಸ್ಥಿತಿಯಿಂದ ಪಾರಾಗಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರೇ ವರ್ಷದ ಸಂಬಳವನ್ನು ಕೊರೋನಾ ನಿಧಿಗೆ ನೀಡಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಪರಿಷ್ಕೃತ ವೇತನ ನೀಡುವುದು ಬೇಡ. ಮೊದಲು ಈ ಕಾಯಿಲೆಯಿಂದ ಭಾರತ ಮುಕ್ತವಾಗಲಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿ. ಆಮೇಲೆ ವೇತನ ಪರಿಷ್ಕರಿಸಲಿ. ಅಲ್ಲಿವರೆಗೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಅಭಿಪ್ರಾಯವನ್ನು ಡಿಪ್ಲೊಮಾ ಕಾಲೇಜ್‌ಗಳ
ಬೋಧಕ ಸಿಬ್ಬಂದಿಗಳದ್ದು.
7ನೇ ವೇತನ ಅನ್ವಯ ಡಿಪ್ಲೊಮಾ ಕಾಲೇಜ್‌ಗಳ ಬೋಧಕ ಸಿಬ್ಬಂದಿ ವೇತನ ಪರಿಷ್ಕರಣೆಯಾಗಿದೆ. ಲಾಕ್‌ಡೌನ್ ಮುಗಿದ ಬಳಿಕ ಜಾರಿಯಾಗುವ ಸಾಧ್ಯತೆ ಇದೆ. ಬೋಧಕ ಸಿಬ್ಬಂದಿಗೆ ಶೇ.20-25ರಷ್ಟುವೇತನ ಹೆಚ್ಚಳವಾಗಬಹುದು. ಇದರಿಂದ ಪ್ರತಿವರ್ಷ ತಾಂತ್ರಿಕ ಶಿಕ್ಷಣ ಇಲಾಖೆಗೆ 150 ಕೋಟಿ ಹೊರೆಯಾಗುವ ಸಾಧ್ಯತೆ ಇದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಅವರು ಹೇಳಿದ್ದಾರೆ.
7ನೇ ವೇತನ ಆಯೋಗದ ಪ್ರಕಾರ ವೇತನ ಪರಿಷ್ಕರಣೆ ಮಾಡಲಾಗಿದೆ. ಕೊರೋನಾದಿಂದಾಗಿ ದೇಶ, ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಪರಿಷ್ಕೃತ ವೇತನ ನೀಡುವುದು ಬೇಡ. ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ನೀಡಲಿ ಎಂದು ಹೆಸರು ಹೇಳಲು ಇಚ್ಛಿಸದ ಡಿಪ್ಲೊಮಾ ಬೋಧಕ ಸಿಬ್ಬಂದಿ ತಿಳಿಸಿದ್ದಾರೆ.