ಬೆಂಗಳೂರು(ಮಾ.04): ನಗರದ ಸರ್‌.ಪುಟ್ಟಣ್ಣ ಚೆಟ್ಟಿ ಪುರಭವನದ (ಟೌನ್‌ಹಾಲ್‌) ಮುಂಭಾಗ ಪ್ರತಿಭಟನೆ ನಿಷೇಧಿಸಿ ಬಿಬಿಎಂಪಿ ಆಡಳಿತ ಪಕ್ಷ ಬಿಜೆಪಿಯ ನಿರ್ಣಯ ವಿರೋಧಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಮಂಗಳವಾರ ಮೇಯರ್‌ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಸಾಮಾನ್ಯ ಸಭೆ ಆರಂಭವಾಗುತ್ತಿದಂತೆ ಸಭಾಂಗಣದ ಒಳಗೆ ಪ್ರತಿಪಕ್ಷಗಳ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸುತ್ತಾ ಮೇಯರ್‌ ಪೀಠದ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಆರ್‌ಎಸ್‌ಎಸ್‌ನ ಅಜೆಂಡಾದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಮಾತನಾಡಿ, ಪುರಭವನದ ಮುಂದೆ ಪ್ರತಿಭಟನೆ ಮಾಡಬಾರದು ಎಂದು ಸ್ವಯಂ ಪ್ರೇರಿತವಾಗಿ ನಿರ್ಣಯ ಅಂಗೀಕಾರ ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಏನಿದೆ? ನಿರ್ಣಯದ ಬಗ್ಗೆ ಕಾನೂನು ಕೋಶದ ಅಧಿಕಾರಿಗಳಿಂದ ಉತ್ತರ ಕೊಡಿಸಬೇಕು ಎಂದು ಪಟ್ಟು ಹಿಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಎಂ.ಗೌತಮ್‌ಕುಮಾರ್‌, ಬಿಬಿಎಂಪಿ ಆಯುಕ್ತರು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದರೂ, ವಿರೋಧ ಪಕ್ಷದ ಸದಸ್ಯರು ಸುಮ್ಮನಾಗಲಿಲ್ಲ. ಆಯುಕ್ತರಿಂದ ಉತ್ತರ ಬೇಡ, ಕಾನೂನು ಕೋಶದ ಮುಖ್ಯಸ್ಥರಿಂದಲೇ ಕೊಡಿಸಿ ಎಂದು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ಉಂಟಾಯಿತು.

ಈ ನಡುವೆಯೇ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿ, ಪುರಭವನದ ಮುಂದೆ ಪ್ರತಿಭಟನೆ ನಡೆಸುವುದರಿಂದ ಇಲ್ಲಿನ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಪಾಲಿಕೆಯ ಆದಾಯವೂ ಕಡಿಮೆಯಾಗಿದೆ. ಪೊಲೀಸ್‌ ಆಯುಕ್ತರೊಂದಿಗೂ ಚರ್ಚೆ ಮಾಡಲಾಗಿದೆ. ಪ್ರತಿಭಟನೆಗೆ ಸ್ವಾತಂತ್ರ್ಯ ಉದ್ಯಾನ, ಮೌರ್ಯವೃತ್ತದಲ್ಲಿ ಅವಕಾಶವಿದೆ. ನಿರ್ಣಯ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಆಯುಕ್ತರ ಉತ್ತರಕ್ಕೆ ಸಮಾಧಾನಗೊಳ್ಳದ ವಿರೋಧ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಮೇಯರ್‌ ಸಭೆಯನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ನಿಲುವಳಿ ಮಂಡನೆ, ಚರ್ಚೆಗೆ ಅವಕಾಶ ನೀಡದ ಮೇಯರ್‌:

ಮತ್ತೆ ಸಭೆ ಆರಂಭವಾಗುತ್ತಿದಂತೆ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಹಾಗೂ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಅವರು ಪುರಭವನದ ಮುಂದೆ ಪ್ರತಿಭಟನೆ ವಿಚಾರವಾಗಿ ನಿಲುವಳಿ ಮಂಡಿಸಿದರು. ಆದರೆ ಮೇಯರ್‌ ನಿಲುವಳಿಯನ್ನು ತಿರಸ್ಕರಿಸಿರುವುದಾಗಿ ಘೋಷಿಸಿದರು. ಮೇಯರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ನಿರ್ಣಯ ಪ್ರತಿಯನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು.

ಸಭಾಂಗಣದಲ್ಲಿ ಭಿತ್ತಿಪತ್ರ ಪ್ರದರ್ಶನ

ಸರ್‌.ಪುಟ್ಟಣ್ಣಚೆಟ್ಟಿಪುರಭವನದ ಎದುರು ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ವಿರೋಧಿಸುವ ಬರಹವುಳ್ಳ ಭಿತ್ತಿಪತ್ರಗಳನ್ನು ಪ್ರತಿಪಕ್ಷದ ಸದಸ್ಯರು ಕೆಂಪೇಗೌಡ ಪೌರಸಭಾಂಗಣದ ಒಳಗೆ ತೆಗೆದುಕೊಂಡು ಬಂದಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಹಾಗೂ ಮೇಯರ್‌ ಆಕ್ಷೇಪ ವ್ಯಕ್ತಪಡಿಸಿದರು. ಭಿತ್ತಿಪತ್ರ ಪ್ರದರ್ಶಿಸದಂತೆ ಮೇಯರ್‌ ಸೂಚನೆ ನೀಡಿದರೂ ವಿರೋಧ ಪಕ್ಷದ ಸದಸ್ಯರು ಕೇಳಲಿಲ್ಲ. ಹೀಗಾಗಿ, ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಭಿತ್ತಿಪತ್ರ ಕಿತ್ತುಕೊಳ್ಳುವಂತೆ ಕೌನ್ಸಿಲ್‌ ಅಧಿಕಾರಿ- ಸಿಬ್ಬಂದಿಗೆ ಸೂಚನೆ ನೀಡಿದರು. ಆದರೆ, ಕೌನ್ಸಿಲ್‌ ಅಧಿಕಾರಿಗಳು ಇದಕ್ಕೆ ಹಿಂದೇಟು ಹಾಕಿದರು.